Advertisement
ಜಿಲ್ಲೆಗೆ ಹೊಂದಿಕೊಂಡೇ ಎರಡು ನದಿಗಳಿದ್ದು, ಮಳೆಗಾಲದಲ್ಲಿ ಜೀವ ಜಲದಿಂದ ಭೋರ್ಗರೆಯುತ್ತವೆ. ಆದರೂ, ಜಿಲ್ಲೆಯ ರೈತರ ಪಾಲಿಗೆ ಕೈಗೆಟುಕದ ಕುಸುಮವಾಗಿದೆ. ಈ ಭಾಗದ ರೈತರ ದಶಕಗಳ ನೀರಾವರಿ ಬೇಡಿಕೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಹಾಗೂ ಗದಗ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸರಕಾರದ ಮಟ್ಟದಲ್ಲಿ ಧ್ವನಿಗೂಡಿಸಿದ್ದಾರೆ. ಅದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಾಲವಾಡಗಿ ಏತ ನೀರಾವರಿ ಯೋಜನೆಗೆ ಅಸ್ತು ಎಂದಿದ್ದು, 197.50 ಕೋಟಿ ರೂ. ಒದಗಿಸಿದ್ದಾರೆ ಎನ್ನಲಾಗಿದೆ.
Related Articles
Advertisement
0.557 ಟಿಎಂಸಿ ನೀರಿನ ಸದ್ಬಳಕೆ: ಪ್ರತೀ ವರ್ಷ ಜೂನ್ ಮತ್ತು ನವೆಂಬರ್ ತಿಂಗಳಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತದೆ. ಮಳೆಗಾಲದಲ್ಲಿ ಅಪಾರ ಪ್ರಮಾಣದ ಮುಂದಕ್ಕೆ ಹರಿದು ಹೋಗುವ ನೀರನ್ನು ಏತ ನೀರಾವರಿ ಯೋಜನೆ ಮೂಲಕ 28 ಕೆರೆಗಳಿಗೆ ಈ ವೇಳೆ ಸತತ 120 ದಿನಗಳ ಕಾಲ ಸುಮಾರು 0.557 ಟಿಎಂಸಿ ನೀರು ಎತ್ತುವಳಿ ಮಾಡಲಾಗುತ್ತದೆ. ಅದಕ್ಕಾಗಿ ಹಮ್ಮಿಗಿ ಬ್ಯಾರೇಜ್ ಹಿನ್ನೀರಿನಲ್ಲಿ ಜ್ಯಾಕ್ವೆಲ್ ನಿರ್ಮಿಸಲಾಗುತ್ತದೆ. ಬಳಿಕ ಅದನ್ನು ಭೂಮಿಯ ಗುರುತ್ವಾಕರ್ಷಣೆ ಆಧರಿಸಿ ಕೊಳವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ.
ಅಂತರ್ಜಲ ವೃದ್ಧಿಗೆ ಒತ್ತು: ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ, ಕೆರೆಗಳಿಗೆ ನದಿ ನೀರು ತುಂಬಿಸುವುದರಿಂದ ಅಂತರ್ಜಲ ಮರು ಪೂರಣವಾಗಲಿದೆ. ಜೊತೆಗೆ ಸುತ್ತಮುತ್ತಲಿನ ಕೃಷಿಕರು, ಜನ, ಜಾನುವಾರುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಮಹತ್ವಾಕಾಂಕ್ಷೆಯಿಂದ ಜಾಲವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ದಶಕದ ಕನಸು ಈಡೇರುವ ಹೊತ್ತು: ಈ ಹಿಂದೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಜಾರಿ ವೇಳೆ ಮೂರು ತಾಲೂಕುಗಳ ವಿವಿಧ ಗ್ರಾಮಗಳು ಕೈಜಾರಿ ಹೋಗಿದ್ದವು. ಇದರಿಂದ ಆಕ್ರೋಶಗೊಂಡ ರೈತಾಪಿ ಜನರು, ಸರಕಾರದ ವಿರುದ್ಧ ಸಣ್ಣ ಧ್ವನಿಯಲ್ಲೇ ಪ್ರತಿಭಟನೆ ನಡೆಸಿದ್ದರು. ದಶಕದ ಕನಸಿಗೆ ಈಗ ಈಡೇರುವ ಕಾಲು ಕೂಡಿಬಂದಿದೆ.
ಈ ಭಾಗದ ಹಳ್ಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಜಾಲವಾಡಗಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 197.50 ಕೋಟಿ ರೂ. ಒದಗಿಸಿದ್ದಾರೆ. ಶೀಘ್ರವೇ ಯೋಜನೆಗೆ ಚಾಲನೆ ದೊರೆಯಲಿದ್ದು, ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿ, ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. –ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವರು
-ವೀರೇಂದ್ರ ನಾಗಲದಿನ್ನಿ