Advertisement

ನಗುತ್ತಲೇ ಎದ್ದು ನಡೆದ ಇರ್ಫಾನ್‌

11:09 PM May 02, 2020 | Sriram |

ಭಾರತೀಯ ಚಿತ್ರರಂಗ ಎರಡೇ ದಿನದಲ್ಲಿ ಇಬ್ಬರು ಅದ್ಭುತ ನಟರನ್ನು ಕಳೆದುಕೊಂಡಿದೆ. ಸಹಜ ನಟನೆಯಿಂದ ವಿಶ್ವಾದ್ಯಂತ ಮನೆಮಾತಾಗಿದ್ದ ಇರ್ಫಾನ್‌ ಖಾನ್‌ ಹಾಗೂ ರೊಮ್ಯಾಂಟಿಕ್‌ ಸಿನೆಮಾಗಳಿಗೆ ಹೊಸ ರೂಪ ನೀಡಿ, ಇಳಿವಯಸ್ಸಿನಲ್ಲೂ ವಿನೂತನ ಪಾತ್ರಗಳಿಂದ ಗಮನಸೆಳೆದಿದ್ದ ರಿಷಿ ಕಪೂರ್‌ರ ಅಗಲಿಕೆ, ಅವರ ಅಗಣಿತ ಅಭಿಮಾನಿಗಳಿಗೆ ಬಹಳ ನೋವು ತಂದಿದೆ.

Advertisement

ಯಶಸ್ಸಿಗೆ ಅಡ್ಡದಾರಿಗಳು ಇರುವುದಿಲ್ಲ ಎನ್ನುತ್ತಾರೆ. ಇತ್ತೀಚೆಗೆ ನಮ್ಮನ್ನಗಲಿದ ನಟ ಇರ್ಫಾನ್‌ ಖಾನ್‌ರ ಬದುಕನ್ನು ನೋಡಿದಾಗ ಆ ಮಾತು ಅದೆಷ್ಟು ನಿಜ ಎನ್ನುವುದು ಮನದಟ್ಟಾಗುತ್ತದೆ. ಚಿಕ್ಕಪುಟ್ಟ ಮೆಟ್ಟಿಲುಗಳನ್ನು ನಿಧಾನವಾಗಿ ಏರುತ್ತಾ ಬಂದ ಇರ್ಫಾನ್‌ ಅವರು ಕ್ರಮಿಸಿದ ಹಾದಿ, ಏರಿದ ಎತ್ತರ ಅಪಾರವಾದುದು.

ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾದ ವಿದ್ಯಾರ್ಥಿಯಾಗಿದ್ದ ಇರ್ಫಾನ್‌ ನಟನಾಗುವುದು ಅವರ ಹೆತ್ತವರಿಗೆ ಸುತಾರಾಂ ಇಷ್ಟವಿರಲಿಲ್ಲ. ಎಲ್ಲಾ ಮಧ್ಯಮ ವರ್ಗದ ಹೆತ್ತವರಂತೆಯೇ ಇರ್ಫಾನ್‌ ಡಾಕ್ಟರ್‌ ಅಥವಾ ಟೀಚರ್‌ ಆಗಬೇಕೆನ್ನುವ ಆಸೆಯಿತ್ತು. ಆದರೆ ಇರ್ಫಾನ್‌ ಅವರ ಯೋಚನೆಗಳೇ ಭಿನ್ನವಾಗಿದ್ದವು. ಅವರಿಗೆ ಬದುಕು ನೀರಸ ಎನಿಸತೊಡಗಿತ್ತು. ಪ್ರತಿದಿನವೂ ಒಂದೇ ರೀತಿಯಂತೆ, ಏಕತಾನತೆಯಿಂದ ಕಂಗಾಲಾದ ಇರ್ಫಾನ್‌ ಹೊಸತನಕ್ಕೆ ಹಪಹಪಿಸತೊಡಗಿದ್ದರು. ನಿತ್ಯ ಜೀವನದಿಂದ ಬಿಡುಗಡೆ ಹೊಂದುವ ಪ್ರಯತ್ನದಲ್ಲಿದ್ದಾಗಲೇ ಅವರಲ್ಲಿ ತಾನೊಬ್ಬ ನಟನಾಗಬೇಕೆಂಬ ಆಸೆ ಮೊಳಕೆಯೊಡೆದಿದ್ದು. ಡಾಕ್ಟರ್‌, ಟೀಚರ್‌ ಆಗಲಿ ಎಂದು ಆಸೆಪಟ್ಟಿದ್ದ ಹೆತ್ತವರು “ಆ್ಯಕ್ಟಿಂಗ್‌ ತರಬೇತಿ ಪಡೆದ ನಂತರ ಏನಾಗ್ತಿಯಾ?’ ಎಂದಾಗ ಇರ್ಫಾನ್‌ ಹೇಳಿದ್ದು “ಡ್ರಾಮಾ ಟೀಚರ್‌’. ಕೋಲು ಮುರಿಯಬಾರದು, ಇತ್ತ ಹಾವೂ ಸಾಯಬಾರದು ಎಂಬ ಉತ್ತರವನ್ನು ಹೆತ್ತವರ ಸಮಾಧಾನಕ್ಕೆ ನೀಡಿದ್ದರಷ್ಟೆ. ಆದರೆ ಅವರ ಕನಸು ತಾನೊಬ್ಬ ಪೂರ್ಣಪ್ರಮಾಣದ ನಟವಾಗಬೇಕೆಂಬುದೇ ಆಗಿತ್ತು.

1988ರ ಸಮಯದಲ್ಲಿ ಮೀರಾ ನಾಯರ್‌ ನಿರ್ದೇಶನದ “ಸಲಾಂ ಬಾಂಬೆ’ ಸಿನಿಮಾ ಮಾಡುತ್ತಿದ್ದ ಸಮಯ. ಮೀರಾ ಹೊಸ ಪ್ರತಿಭೆಗಳ ಹುಡುಕಾಡುತ್ತಾ ನ್ಯಾಷನಲ್‌ ಸ್ಕೂಲ್‌ ಆಫ್ ಡ್ರಾಮಾ ಕಾಲೇಜಿನ ಕದ ತಟ್ಟಿದ್ದರು. ಅಲ್ಲಿ ಇರ್ಫಾನ್‌ ಅವರ ಕಣ್ಣಿಗೆ ಬಿದ್ದಿದ್ದರು. ಮೀರಾ ಅವರಿಗೆ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಸಣಕಲು ವ್ಯಕ್ತಿಯ, ಆದರೆ ತೀಕ್ಷ¡ ನೋಟದ ಪಾತ್ರಧಾರಿಯ ಅಗತ್ಯವಿತ್ತು. ಪಾತ್ರದ ಅಗತ್ಯಗಳೆಲ್ಲವನ್ನೂ ಹೋಲುತ್ತಿದ್ದ ಇರ್ಫಾನ್‌ ಅವರಿಗೆ ಆ ಪಾತ್ರ ದಕ್ಕಿತು. ಇನ್ನೇನು ಮುಖ್ಯವಾಹಿನಿ ಸಿನೆಮಾಗಳ ಬಾಗಿಲು ತೆರೆದ ಹಾಗೆ ಎಂದು ಹಿಗ್ಗಿದರು ಇರ್ಫಾನ್‌. ಆದರೆ ಮೀರಾ ಕೆಲ ಕಾರಣಗಳಿಂದ ಇರ್ಫಾನ್‌ ಅವರ ಪಾತ್ರದ ಸೀನ್‌ಗಳನ್ನು ಕಡಿತಗೊಳಿಸಬೇಕಾಗಿ ಬಂತು. ಈಗಲೂ ನೋಡಿದರೆ ಇದು ತಿಳಿಯುತ್ತದೆ, ಇಡೀ ಸಿನೆಮಾದಲ್ಲಿ ಇರ್ಫಾನ್‌ ಒಂದೇ ಒಂದು ಸೀನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ಸೀನ್‌ಗಳನ್ನು ಕಟ್‌ ಮಾಡುತ್ತಿದ್ದಾರೆಂದು ತಿಳಿದು ಬಂದಾಗ ಮನಸೋ ಇಚ್ಛೆ ಅತ್ತಿದ್ದಾಗಿ ಇರ್ಫಾನ್‌ ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. “ಆ ದಿನದ ಅಳು ಅವರಲ್ಲಿ ಮಹತ್ತರವಾದುದನ್ನು ಕಲಿಸಿತ್ತು. “ಆ ದಿನದ ನಂತರ ನಾನು ಜೀವನದಲ್ಲಿ ಏನೇ ಬಂದರೂ ಎದುರಿಸಲು ಧೈರ್ಯ ನೀಡಿತು’ ಎಂಬ ಇರ್ಫಾನ್‌ ಮಾತುಗಳು ಎಲ್ಲರಿಗೂ ಪ್ರೇರಣಾದಾಯಕವಾದುದು. ದೂರದರ್ಶನ ಧಾರಾವಾಹಿಗಳಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಾಲಿವುಡ್‌ ಸಿನೆಮಾಗಳ ಜಾಡು ಹಿಡಿದು ಹೊರಟಿದ್ದ ಇರ್ಫಾನ್‌, ಹಾಲಿವುಡ್‌ ಅನ್ನೂ ತಲುಪಿದ ರೀತಿ ಅನನ್ಯವಾದುದು.
ಇರ್ಫಾನ್‌ ಅವರ ಮೇಲೆ ಹಾಲಿವುಡ್‌ ದೃಷ್ಟಿ ಬೀಳುವಂತಾಗಿದ್ದಕ್ಕೆ ಕಾರಣ ಆಸಿಫ್ ಕಪಾಡಿಯಾ ಅವರ “ದಿ ವಾರಿಯರ್‌'(2001) ಸಿನಿಮಾ. ಅದರಲ್ಲಿ ಅಪ್ರತಿಮ ಸೈನಿಕನಾಗಿ ಇರ್ಫಾನ್‌ ಕಾಣಿಸಿಕೊಂಡಿದ್ದರು. ಯುದ್ಧ, ಹೊಡೆದಾಟದ ಜೀವನದಿಂದ ಪರಿತ್ಯಕ್ತನಾದ ಅಪ್ರತಿಮ ಸೇನಾನಾಯಕ ಅಹಿಂಸೆಯತ್ತ ಮುಖ ಮಾಡಿ ದೇಶಾಂತರ ಹೊರಟುಬಿಡುತ್ತಾನೆ. ಇದೇ ವೇಳೆ ರಾಜ ಅವನನ್ನು ಕೊಲ್ಲಲು ಅವನ ಸರಿಸಮನಾದ ಮತ್ತೂಬ್ಬ ಸೈನಿಕನನ್ನು ಕಳಿಸುತ್ತಾನೆ. ದ್ವಂದ್ವಗಳಿಂದ ಕೂಡಿದ ಪರಿತ್ಯಕ್ತ ಸೇನಾ ನಾಯಕನಾಗಿ ಇರ್ಫಾನ್‌ ನೀಡಿದ ಅಭಿನಯಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ, ಪ್ರಶಂಸೆ ವ್ಯಕ್ತವಾಗಿತ್ತು.

ಬಾಲಿವುಡ್‌ನ‌ಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ ಮೊದಲ ಸಿನೆಮಾ “ರೋಗ್‌’. ಇರ್ಫಾನ್‌ ಸಂಭಾಷಣೆ ಒಪ್ಪಿಸಬೇಕೆಂದೇ ಇಲ್ಲ. ಅವರ ಕಣ್ಣುಗಳೇ ಎಲ್ಲವನ್ನೂ ಹೇಳಿಬಿಡುತ್ತವೆ ಎಂದು ಪತ್ರಿಕೆಗಳು ಹೊಗಳಿ ಬರೆದವು. ಶುರುವಿನಲ್ಲಿ ನೆಗೆಟಿವ್‌ ಶೇಡುಗಳ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಇರ್ಫಾನ್‌ “ಬೆಸ್ಟ್ ವಿಲನ್‌ ಆಫ್ ದಿ ಇಯರ್‌’ ಫಿಲಂಫೇರ್‌ ಅವಾರ್ಡನ್ನೂ ಪಡೆದುಕೊಂಡರು. ಇರ್ಫಾನ್‌ ಅವರಲ್ಲಿನ ಕಲಾವಿದನ ಇನ್ನೊಂದು ಮುಖವನ್ನು ಪರಿಚಯಿಸಿದ್ದು “ಲೈಫ್ ಇನ್‌ ಎ ಮೆಟ್ರೊ'(2007) ಹಿಂದಿ ಸಿನೆಮಾ. ಕೊಂಕಣ ಸೇನ್‌ ಮತ್ತು ಇರ್ಫಾನ್‌ ಜೋಡಿ ಸಿನಿಪ್ರಿಯರನ್ನು ಮೋಡಿ ಮಾಡಿತ್ತು. ಪ್ರೀತಿಯ ನವಿರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಇರ್ಫಾನ್‌ ತೋರಿದ ಪ್ರೌಡಿಮೆ ಇರ್ಫಾನ್‌ ಅವರ ವೃತ್ತಿಪರತೆಗೆ ಹಿಡಿದ ಕೈಗನ್ನಡಿ. ಯಾವುದೇ ಪಾತ್ರವಾದರೂ ಇರ್ಫಾನ್‌ ನಟಿಸಬಲ್ಲರು ಎಂಬುದು ಸಾಬೀತಾಗಿತ್ತು. “ಸ್ಲಮ್‌ ಡಾಗ್‌ ಮಿಲಿಯನೇರ್‌’, “ಲಂಚ್‌ ಬಾಕ್ಸ್ ‘, “ಪೀಕು’, “ಲೈಫ್ ಆಫ್ ಪೈ’, “ಪಾನ್‌ ಸಿಂಗ್‌ ತೋಮರ್‌’, “ಅಮೇಝಿಂಗ್‌ ಸ್ಪೈಡರ್‌ಮ್ಯಾನ್‌’, “ಜುರಾಸಿಕ್‌ ಪಾರ್ಕ್‌’, “ಡಾರ್ಜಿಲಿಂಗ್‌ ಲಿಮಿಟೆಡ್‌’, “ಕರ್ವಾನ್‌’, “ಕರೀಬ್‌ ಕರೀಬ್‌ ಸಿಂಗಲ್ ‘, “ದಿ ಪಝಲ್‌’ ಸಿನಿಮಾಗಳು ಇರ್ಫಾನ್‌ ಅವರ ಅಭಿನಯ ಚತುರತೆಗೆ ಸಾಕ್ಷಿಯಾಗಿವೆ.

Advertisement

ಸಂದರ್ಶನವೊಂದರಲ್ಲಿ “ನಾನು ಏನನ್ನಾದರೂ ಇಷ್ಟಪಟ್ಟರೆ, ಲೆಕ್ಕಾಚಾರ ಮಾಡುವುದಿಲ್ಲ. ಕಣ್ಮುಚ್ಚಿ ಅದರತ್ತ ಪಯಣಿಸುತ್ತೇನೆ’ ಎಂದಿದ್ದರು. ಬದುಕೇ ಇರಲಿ ಪಾತ್ರವೇ ಇರಲಿ ಅವರ ಈ ಲೆಕ್ಕಾಚಾರ ಮಾಡದೇ ಇರುವ ಗುಣದಿಂದಲೇ ಇರ್ಫಾನ್‌ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದರು. ಎರಡು ವರ್ಷದ ಕೆಳಗೆ ತಮಗೆ ಕ್ಯಾನ್ಸರ್‌ ಇದೆಯೆನ್ನುವುದು ತಿಳಿದಾಗಲೂ ನಗುವನ್ನು ಮರೆಯಲಿಲ್ಲ. ಯಾತನಾದಾಯಕ ಔಷಧಿ, ಚಿಕಿತ್ಸೆಗಳ ಹೊರತಾಗಿಯೂ ಸ್ಥೈರ್ಯವನ್ನು, ಜೀವನಪ್ರೀತಿಯನ್ನು ಕಳೆದುಕೊಳ್ಳಲಿಲ್ಲ. ತನ್ನ ಕುಟುಂಬವೇ ತನ್ನ ದೊಡ್ಡ ಶಕ್ತಿ ಎಂದು ಅವರು ತಾವು ಪ್ರೀತಿಸಿ ಮದುವೆಯಾದ ಪತ್ನಿ ಸುತಾಪ ಅವರತ್ತ ಕೈತೋರುತ್ತಿದ್ದರು. ಇರ್ಫಾನ್‌ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಿದಷ್ಟೆ ತೀವ್ರವಾಗಿ ಪತ್ನಿ ಸುತಾಪ ಅವರೂ ಅಂತಿಮ ಕ್ಷಣದವರೆಗೂ ಹೋರಾಡಿದರು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದರೂ ಇರ್ಫಾನ್‌ ಯಾವತ್ತೂ ಸೂಪರ್‌ ಸ್ಟಾರ್‌ ಆಗಲು ಹೋದವರಲ್ಲ. ಅವರ ಪಾಲಿಗೆ ಕಥೆಯೇ ಸೂಪರ್‌ ಸ್ಟಾರ್‌. ಯಾವ ಪಾತ್ರವೂ ಕಥೆಯನ್ನು ಮೀರಬಾರದು ಎಂಬುದು ಅವರ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ಈ ದಿನ ಯಾರಿಗೂ ಇರ್ಫಾನ್‌ ಅವರ ಸಿನಿಮಾಗಳ ಡೈಲಾಗ್‌ ನೆನಪಾಗುತ್ತಿಲ್ಲ. ಅವರ ಸಿನಿಮಾಗಳಲ್ಲಿನ ಅವರ ಉಡುಗೆ ತೊಡುಗೆಗಳೂ ಯಾರಿಗೂ ನೆನಪಿಲ್ಲ. ಅವೆಲ್ಲದರ ಹೊರತಾಗಿ ಒಂದು ಸಿನಿಮಾ ಕಟ್ಟಿಕೊಡುವ ಅನುಭವದ ಪ್ರತೀಕವಾಗಿ, ಆ ಪಾತ್ರಗಳ ಮೂಲಕ ಇರ್ಫಾನ್‌ ಕಾಡುತ್ತಿದ್ದಾರೆ. ಕಲಾತ್ಮಕ, ಬ್ರಿಡ್ಜ್ ಸಿನಿಮಾಗಳಿಂದ ಮುನ್ನೆಲೆಗೆ ಬಂದರೂ ಅವರು ಬಾಲಿವುಡ್‌ ಜೊತೆ, ಮುಖ್ಯವಾಹಿನಿಯ ಕಲಾವಿದರೊಂದಿಗೆ ಉತ್ತಮ ಸಂಬಂಧವನ್ನೇ ಹೊಂದಿದ್ದರು. ಹೇಳಬೇಕೆಂದರೆ ಬಾಲಿವುಡ್‌ ಮತ್ತು ಹಾಲಿವುಡ್‌ ನಡುವಣ ಕಿಟಕಿಯಂತಿದ್ದರು ಇರ್ಫಾನ್‌. ಇಂದು ಆ ಕಿಟಕಿಯ ಬಾಗಿಲು ಮುಚ್ಚಿಕೊಂಡಿವೆ. ನಾಳೆ ಬೇರೆ ಹೊಸ ಕಿಟಕಿಗಳು ತೆರೆದುಕೊಳ್ಳಬಹುದು. ಆದರೆ, ಅವು ಇರ್ಫಾನ್‌ ನೀಡಿದ  ಒಳನೋಟವನ್ನು ನೀಡಲಾರವು.

-ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next