ಹೊಸದಿಲ್ಲಿ : 51ರ ಹರೆಯದ ಬಾಲಿವುಡ್‌ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಇರ್ಫಾನ್ ಖಾನ್ ಅವರು ಟ್ವಿಟರ್‌ನಲ್ಲಿ ತಾನೊಂದು ಅತ್ಯಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿಯೂ ಅದೇನೆಂಬುದನ್ನು ಸದ್ಯವೇ ಬಹಿರಂಗಪಡಿಸುವುದಾಗಿಯೂ ಹೇಳಿದ್ದರು. ಆದರೆ ಯಾರೂ ತನ್ನ ಕಾಯಿಲೆ ಬಗ್ಗೆ ಅಲ್ಲಸಲ್ಲದ ಊಹೆಗಳನ್ನು ಮಾಡದಂತೆ ವಿನಂತಿಸಿದ್ದರು.
ಇರ್ಫಾನ್ ಅವರ ಈ ಮಾತಿನಿಂದಾಗಿ ಅನೇಕರು ಅವರಿಗೆ ಕ್ಯಾನ್ಸರ್ ಕಾಯಿಲೆ ಇದ್ದಿರಬಹುದೆಂದು ಭಾವಿಸಿದ್ದರು.
ತನ್ನ ನಿಗೂಢ ಕಾಯಿಲೆಯ ಬಗ್ಗೆ ಇರ್ಫಾನ್ “ಕೆಲವೊಮ್ಮೆ ನೀವು ನಿಮ್ಮ ಬದುಕನ್ನೇ ಅಲ್ಲಾಡಿಸುವ ಸ್ಥಿತಿಯಲ್ಲಿ ಹಾಸಿಗೆಯಿಂದ ಏಳುತ್ತೀರಿ. ಕಳೆದ 15 ದಿನಗಳಿಂದ ನನ್ನ ಬದುಕು ಒಂದು ಸಸ್ಪೆನ್ಸ್ ಸ್ಟೋರಿ ಎಂಬಂತಾಗಿದೆ. ಅತ್ಯಪರೂಪದ ಕಥೆಗಳಿಗಾಗಿರುವ ನನ್ನ ಹುಡುಕಾಟವು ಒಂದು ಇಂತಹ ಅತ್ಯಪರೂದ ಕಾಯಿಲೆ ನನ್ನಗೊಳಗೇ ಇದೆ ಎಂದು ಗೊತ್ತುಪಡೀಸಿತೆಂದು ನಾನು ಊಹಿಸಿಯೇ ಇರಲಿಲ್ಲ’ ಎಂದು ಇರ್ಫಾನ್ ಕಳೆದ ಮಾರ್ಚ್ 5ರಂದು ಟ್ವಿಟರ್‌ನಲ್ಲಿ ಬರೆದಿದ್ದರು.
ಇರ್ಫಾನ್ ಪ್ರಕೃತ ನ್ಯೂರೋ ಎಂಡೊಕ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗನೆ ಗುಣಮುಖವಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲೆಂದು ಹಾರೈಸೋಣ.