ಹರಪನಹಳ್ಳಿ: ಕಬ್ಬಿಣ ಕಳ್ಳತನ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಅವರಿಂದ ಮಜ್ಡಾ ಲಾರಿಯನ್ನು ಜಪ್ಪು ಮಾಡಿದ ಘಟನೆ ತಾಲೂಕಿನ ಅರಸಿಕೇರಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಜರುಗಿದೆ.
ರೇವಣಸಿದ್ದಪ್ಪ ಅಲಿಯಾಸ್ ಹಾಲವರ್ತಿ ರೇವಣಸಿದ್ದಪ್ಪ(22) ಹಾಗೂ ಅಣ್ಣಪ್ಪ ಎಚ್.ಎನ್(24) ಬಂಧಿತ ಆರೋಪಿಗಳು. ಇಬ್ಬರು ಹರಿಹರ ತಾಲೂಕಿನ ಗಂಗನರಸಿ ಗ್ರಾಮದವರು.
ತಾಲೂಕಿನ ಸತ್ತೂರು ಗ್ರಾಮದ ವ್ಯಾಪ್ತಿಗೆ ಬರುವ ಸರ್ವೇ ನಂಬರ್ 208 ರ ಪಿ.ಟಿ.ಪರಮೇಶ್ವರನಾಯ್ಕ ಅವರ ಜಮೀನಿನಲ್ಲಿನ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಕಬ್ಬಿಣ ಕಳ್ಳತನ ಆಗಿರುವ ಕುರಿತು ಅರಸಿಕೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅರಸೀಕೆರಿ ಗ್ರಾಮದ ತೌಢೂರು ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಬರುತ್ತಿದ್ದ ಮಜ್ಡಾ ಲಾರಿಯನ್ನು ನಿಲ್ಲಿಸಲು ಪೋಲೀಸರು ಸೂಚಿಸಿದಾಗ ಚಾಲಕನು ಲಾರಿಯನ್ನು ನಿಲ್ಲಿಸದೆ ಹೋಗಿದ್ದು, ಪಿಎಸ್‌ಐ ನಾಗರತ್ನ ಅವರು ಹಿಂಬಾಲಿಸಿ ಹೋಗಿ ಲಾರಿಯನ್ನು ತಡೆದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಕಳ್ಳತನ ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ತಿಳಿದು ಬಂದಿದ್ದು, ಅವರನ್ನು ಸಹ ದಸ್ತಗಿರಿ ಮಾಡಬೇಕಾಗಿದೆ ಎಂದು ವಿಜಯನಗರ ಜಿಲ್ಲಾ ಎಸ್ಪಿ ಡಾ| ಅರುಣ ತಿಳಿಸಿದ್ದಾರೆ.
ಇಲ್ಲಿಯ ಡಿವೈಎಸ್ಪಿ ಹಾಲ ಮೂರ್ತಿರಾವ್, ಸಿಪಿಐ ನಾಗರಾಜ ಎಂ.ಕಮ್ಮಾರ ಅವರ ಮಾರ್ಗದರ್ಶನದಲ್ಲಿ ಅರಸಿಕೇರಿ ಪಿಎಸ್‌ಐ ನಾಗರತ್ನ ಹಾಗೂ ಸಿಬ್ಬಂದಿಯವರಾದ ಹಸನ್ ಸಾಹೇಬ್, ಕೆ.ಮಹಾಂತೇಶ, ರವಿದಾ ದಾಪುರ, ವಾಸುದೇವ ನಾಯ್ಕ, ಜಿ.ಕೊಟ್ರೇಶ ಗುರುರಾಜ್ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಇವರ ಕಾರ್ಯಕ್ಕೆ ಎಸ್ಪಿ ಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.