Advertisement

ಕಬ್ಬಿಣದ ಕಡಲೆಯೇ ಆಪ್ಷನ್‌ ಟ್ರೇಡಿಂಗ್‌ ?

06:00 AM Aug 06, 2018 | |

ಆಪ್ಷನ್ಸ್‌ಗಳಲ್ಲಿ ಎರಡು ವಿಧ ಕಾಲ್‌ ಆಪ್ಷನ್ಸ್‌ ಮತ್ತು ಪುಟ್‌ ಆಪ್ಷನ್ಸ್‌ ಕಾಲ್‌ ಆಪ್ಷನ್‌ನಲ್ಲಿ ಶೇರನ್ನು ಖರೀದಿಸುವ ಆಯ್ಕೆ ಹಾಗೂ ಪುಟ್‌ ಆಪ್ಷನ್‌ನಲ್ಲಿ ಶೇರನ್ನು ಮಾರುವ ಆಯ್ಕೆ. ಕಾಲ್‌ ಆಗಲಿ, ಪುಟ್‌ ಆಗಲಿ, ಪ್ರತಿಯೊಂದು ಕರಾರಿನಲ್ಲೂ ಒಬ್ಬ ಖರೀದಿಗಾರ ಹಾಗೂ ಒಬ್ಬ ಮಾರಾಟಗಾರನಿರುತ್ತಾನೆ. ಹೀಗೆ ಹಲವಾರು ಸತ್ಯಗಳು ಇಲ್ಲಿವೆ. 

Advertisement

ಶೇರು ಮಾರುಕಟ್ಟೆಯಲ್ಲಿ ಅಪಾಯ ಜಾಸ್ತಿ ಎಂಬುದು ಸರ್ವವಿಧಿತವಾದ ಮಾತು. ಆದರೂ ಜಾಕರೂಕರಾಗಿದ್ದವರಿಗೆ ಅಲ್ಲೂ ದುಡ್ಡು ಮಾಡಲು ಕೆಲ ಸೂಕ್ಷ್ಮ ಅವಕಾಶಗಳಿವೆ. ಡಿರೈವೆಟಿವ್‌ ಕರಾರು ಅಂತಹ ಅವಕಾಶ. ಹೆಚ್ಚಾಗಿ ಕಾಲ್‌, ಪುಟ್‌ ಇತ್ಯಾದಿ ಪದಗಳಿಂದ ಚರ್ಚಿತವಾಗುವ ಆಪ್ಷನ್ಸ್‌ ಟ್ರೇಡಿಂಗ್‌ ಎಂಬ ಒಂದು ಡಿರೈವೆಟಿವ್‌ ಕರಾರು ಕಬ್ಬಿಣದ ಕಡಲೆ; ಅರ್ಥವಾಗೋದಿಲ್ಲ ಎನ್ನುವವರಿಗೆ ಇಲ್ಲಿದೆ ಒಂದು ಪ್ರವೇಶಿಕೆ:

ಆಪ್ಷನ್ಸ್‌ ಒಂದು ರೀತಿಯ ಡಿರೈವೆಟಿವ್‌ ಕರಾರು. ಆಪ್ಷನ್ಸ್‌ – ಪದವೇ ಸೂಚಿಸುವಂತೆ ಆಪ್ಷನ್ಸ್‌ ಟ್ರೇಡಿಂಗ್‌ನಲ್ಲಿ ನಮಗೆ ಒಂದು ಆಯ್ಕೆ ಇರುತ್ತದೆ. ಕರಾರು ಪ್ರಕಾರ ಕೊಳ್ಳುತ್ತೇವೆ ಎಂದು ಹೇಳಿದರೂ ಕೊಳ್ಳದಿರುವ ಆಯ್ಕೆ ಮತ್ತು ಕೊಡುತ್ತೇನೆ ಎಂದು ಹೇಳಿದರೂ ಕೊಡದಿರುವ ಆಯ್ಕೆ!!  ಮುಂಗಡವಾಗಿ ಕಟ್ಟಿದ ಒಂದು ಸಣ್ಣ ತಪ್ಪು ದಂಡ (ಪ್ರೀಮಿಯಂ) ವಜಾ ಮಾಡಿಕೊಂಡ ಕರಾರಿನಿಂದ ಹೊರ ನಡೆಯುವ ಸೌಲಭ್ಯ. ಈ ವ್ಯವಹಾರ, ಈ ಆಯ್ಕೆಯ ಕಾರಣದಿಂದಾಗಿಯೇ ಫ್ಯೂಚರ್ಸ್‌ಗಿಂತ ಭಿನ್ನ. ಫ್ಯೂಚರ್ಸ್‌ನಲ್ಲಿ ಈ ಆಯ್ಕೆ ಇರುವುದಿಲ್ಲ. ಫ್ಯೂಚರ್ಸ್‌ ಕೊಡು-ಕೊಳ್ಳುವ ಕರಾರು ಆದರೆ ಆಪ್ಷನ್ಸ್‌ ಕೊಡು-ಕೊಳ್ಳುವ ಆಯ್ಕೆ!!

ಆಪ್ಷನ್ಸ್‌ಗಳಲ್ಲಿ ಎರಡು ವಿಧ  ಕಾಲ್‌ ಆಪ್ಷನ್‌ ಮತ್ತು ಪುಟ್‌ ಆಪ್ಷನ್‌. ಕಾಲ್‌ ಆಪ್ಷನ್‌ನಲ್ಲಿ ಶೇರನ್ನು ಖರೀದಿಸುವ ಆಯ್ಕೆ ಹಾಗೂ ಪುಟ್‌ ಆಪ್ಷನ್‌ನಲ್ಲಿ ಶೇರನ್ನು ಮಾರುವ ಆಯ್ಕೆ. ಕಾಲ್‌ ಆಗಲಿ, ಪುಟ್‌ ಆಗಲಿ, ಪ್ರತಿಯೊಂದು ಕರಾರಿನಲ್ಲೂ ಒಬ್ಬ ಖರೀದಿಗಾರ ಹಾಗೂ ಒಬ್ಬ ಮಾರಾಟಗಾರನಿರುತ್ತಾನೆ. ಹಾಗೂ ಪ್ರತಿಯೊಂದು ಕರಾರೂ ಭವಿಷ್ಯತ್ತಿನ ಒಂದು ನಿಗದಿತ ಬೆಲೆಗೆ (ಸ್ಟ್ರೈಕ್‌ ಪ್ರೈಸ್‌) ಹಾಗೂ ನಿಗಧಿತ ದಿನಾಂಕಕ್ಕೆ (ಎಕ್ಸೆರೇಶನ್‌ ಡೇಟ್‌) ಹಾಗೂ ಒಂದು ನಿಗದಿತ ಶುಲ್ಕಕ್ಕೆ (ಪ್ರೀಮಿಯಂ) ಮಾಡಲಾಗುತ್ತದೆ.  

ಉದಾಹರಣೆಗೆ, ಜೂನ್‌ 27ರ ರಂದು,  ರೂ 1250 ಕ್ಕೆ ರಿಲಾಯನ್ಸ್‌ ಶೇರನ್ನು ಕೊಂಡುಕೊಳ್ಳುವುದಾಗಿ ರೂ 100 ಪ್ರೀಮಿಯಂ ಮುಂಗಡ ಕೊಟ್ಟು  ರಾಮನು ಭೀಮನಿಂದ ಕಾಲ್‌ ಆಪ್ಷನ್‌ ಖರೀದಿಸುತ್ತಾನೆ. ಅಂದರೆ, ರಾಮನು ಕಾಲ್‌
ಅಪ್ಷನ್‌ನ ಬೈಯರ್‌ ಮತ್ತು ಭೀಮನು ಸೆಲ್ಲರ್‌ ಅಥವಾ ಕಾಲ್‌ರೈಟರ್‌. ಜೂನ್‌ 27 ರಂದು ರಿಲಾಯನ್ಸ್‌ನ ಮಾರುಕಟ್ಟೆ ಬೆಲೆ 1250 ರಿಂದ ಕೆಳಕ್ಕೆ ಇದ್ದರೆ ರಾಮನಿಗೆ ತನ್ನ ಕರಾರಿನಂತೆ 1250 ಕ್ಕೆ ಖರೀದಿಸುವ ಇಚ್ಛೆ ಇರುವುದಿಲ್ಲ. ತನ್ನ ಆಯ್ಕೆಯನ್ನು ಚಲಾಯಿಸಿ ಶೇರನ್ನು ಖರೀದಿಸದೇ ಹಾಗೇ ಬಿಟ್ಟು ತಾನು ಮುಂಗಡ ಕೊಟ್ಟ ರೂ 100 ಪ್ರೀಮಿಯಂ ಅನ್ನು ಕಳೆದುಕೊಳ್ಳಲು ನಿರ್ಧರಿಸುತ್ತಾನೆ. ಕರಾರು ಸೇಲ್‌ ಮಾಡಿದ ಭೀಮನಿಗೆ ರೂ.100 ಲಾಭವಾಗುತ್ತದೆ. ಒಂದು ವೇಳೆ ಜೂನ್‌ 27 ರಂದು ರಿಲಾಯನ್ಸ್‌ ಬೆಲೆ.1,600 ಇದ್ದಲ್ಲಿ ರಾಮನು ತನ್ನ ಖರೀದಿಸುವ ಆಯ್ಕೆಯನ್ನು ಚಲಾಯಿಸುತ್ತಾನೆ. ಆ ಸಂದರ್ಭದಲ್ಲಿ ರಾಮನಿಗೆ ರೂ 1600-1250-100=ರೂ 250 ಲಾಭವಾಗುತ್ತದೆ. ಭೀಮನಿಗೆ 1600-1250-100=250 ನಷ್ಟವಾಗುತ್ತದೆ. ಇದು ಕಾಲ್‌ ಆಪ್ಷನ್‌ಗೆ ಒಂದು ಉದಾಹರಣೆ. ಈ ವ್ಯವಹಾರದಲ್ಲಿ ಕಾಲ್‌ ಖರೀದಿಸಿದ ರಾಮನಿಗೆ ನಿಯಮಿತ ನಷ್ಟವಾದರೆ ಲಾಭ ಅನಿಯಮಿತವಿರುತ್ತದೆ ಹಾಗೂ ಕಾಲ್‌ ಮಾರಿದ ಭೀಮನಿಗೆ ಅನಿಯಮಿತ ನಷ್ಟ ಹಾಗೂ ನಿಯಮಿತ ಲಾಭವಿರುತ್ತದೆ. ಇದು ಕಾಲ್‌ ಆಪ್ಷನ್ನಿನ ವೈಶಿಷ್ಟ್ಯ. 

Advertisement

ಪುಟ್‌ ಆಪ್ಷನ್‌ ಇದರ ತದ್ವಿರುದ್ಧ ಗತಿಯಲ್ಲಿ ನಡೆಯುತ್ತದೆ. ಉದಾಹರಣೆಗೆ, ಜೂನ್‌ 27 ರ ದಿನಾಂಕದ ರೂ. 1250 ಕ್ಕೆ ರಿಲಾಯನ್ಸ್‌ ಶೇರನ್ನು ಸೇಲ್‌ ಮಾಡುವುದಾಗಿ ರೂ.100 ಪ್ರೀಮಿಯಂ ಮುಂಗಡ ಕೊಟ್ಟು  ರಾಮನು ಭೀಮನಿಂದ ಪುಟ್‌ ಆಪ್ಷನ್‌ ಖರೀದಿಸುತ್ತಾನೆ. ಜೂನ್‌ 27 ರಂದು ರಿಲಾಯನ್ಸ್‌ನ ಮಾರುಕಟ್ಟೆ ಬೆಲೆ 1250 ರಿಂದ ಮೇಲೆ ಇದ್ದರೆ ರಾಮನಿಗೆ ತನ್ನ ಕರಾರಿನಂತೆ ಕೊಡುವ ಇಚ್ಚೆ ಇರುವುದಿಲ್ಲ. ತನ್ನ ಆಯ್ಕೆಯನ್ನು ಚಲಾಯಿಸಿ ಶೇರನ್ನು ಕೊಡದೆ ಹಾಗೇ ಬಿಟ್ಟು ತಾನು ಮುಂಗಡ ಕೊಟ್ಟ ರೂ 100 ಪ್ರೀಮಿಯಂ ಅನ್ನು ಕಳೆದುಕೊಳ್ಳುತ್ತಾನೆ. ಕರಾರು ಸೇಲ್‌ ಮಾಡಿದ ಭೀಮನಿಗೆ ರೂ 100 ಲಾಭವಾಗುತ್ತದೆ. ಒಂದು ವೇಳೆ ಜೂನ್‌ 27 ರಂದು ರಿಲಾಯನ್ಸ್‌ ಬೆಲೆ 900 ಇದ್ದಲ್ಲಿ ರಾಮನು ತನ್ನ ಸೇಲ್‌ ಮಾಡುವ ಆಯ್ಕೆಯನ್ನು ಚಲಾಯಿಸುತ್ತಾನೆ. ಆ ಸಂದರ್ಭದಲ್ಲಿ ರಾಮನಿಗೆ 1200-900-100 = ರೂ 200 ಲಾಭವಾಗುತ್ತದೆ. ಭೀಮನಿಗೆ 1200-900-100= 200 ರೂ. ನಷ್ಟವಾಗುತ್ತದೆ. ಇದು ಪುಟ್‌ ಆಪ್ಷನ್‌ಗೆ ಒಂದು ಉದಾಹರಣೆ. ಈ ವ್ಯವಹಾರದಲ್ಲಿ ಪುಟ್‌ ಖರೀದಿಸಿದ ರಾಮನಿಗೆ ನಿಯಮಿತ ನಷ್ಟವಾದರೆ ಲಾಭ ಅನಿಯಮಿತವಿರುತ್ತದೆ ಹಾಗೂ ಕಾಲ್‌ ಮಾರಿದ ಭೀಮನಿಗೆ ಅನಿಯಮಿತ ನಷ್ಟ ಹಾಗೂ ನಿಯಮಿತ ಲಾಭವಿರುತ್ತದೆ. ಇದು ಪುಟ್‌ ಆಪ್ಷನ್ನಿನ ವೈಶಿಷ್ಟ್ಯ.  

ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕಾಲ್‌ ಆಗಲಿ ಪುಟ್‌ ಆಗಲಿ, ಯಾವುದೇ ಆಪ್ಷನ್‌ನಲ್ಲಿ ಆಪ್ಷನ್‌ ಖರೀದಿಸಿದವನಿಗೆ ನಷ್ಟವು ತೆತ್ತ ಪ್ರೀಮಿಯಂಗೆ ಸೀಮಿತವಾಗಿದ್ದು ಲಾಭವು ಮಿತಿಯಿಲ್ಲದ್ದಾಗಿರುತ್ತದೆ. ಆಪ್ಷನ್‌ ಸೇಲ್‌ ಅಥವಾ ರೈಟ್‌ ಮಾಡಿದವನಿಗೆ ಯಾವತ್ತೂ ಅದರ ತದ್ವಿರುದ್ಧ, ಅಂದರೆ ಲಾಭವು ಪಡಕೊಂಡ ಪ್ರೀಮಿಯಂಗೆ ಸೀಮಿತವಾಗಿರುತ್ತದೆ ಹಾಗೂ ನಷ್ಟವು ಮಿತಿಯಿಲ್ಲದಾಗಿರುತ್ತದೆ. ಅಂದರೆ, ಆಪ್ಷನ್‌ ಖರೀದಿಸುವುದು ಯಾವತ್ತೂ ಕನಿಷ್ಠ ರಿಸ್ಕ್ ಹೊಂದಿದ್ದಾಗಿದ್ದು, ಆಪ್ಷನ್‌ ಸೇಲ್‌ ಮಾಡುವುದು ಗರಿಷ್ಠ ರಿಸ್ಕ್ ಹೊಂದಿದ್ದಾಗಿರುತ್ತದೆ.

ಆಪ್ಷನ್‌ ಮಾರ್ಜಿನ್‌ /ವೆಚ್ಚಗಳು:
ಆಪ್ಷನ್‌ ಖರೀದಿಮಾಡುವವರು ಪ್ರೀಮಿಯಂ ದರವನ್ನು ಖರೀದಿಯ ಸಮಯದಲ್ಲೇ ನೀಡುತ್ತಾರೆ. ಈ ಪ್ರೀಮಿಯಂ ಮಾರುಕಟ್ಟೆಯಲ್ಲಿ ನಿರ್ಧರಿತವಾಗುವಂತದ್ದು. ಶೇರು ಬೆಲೆಯಂತೆಯೇ ಮಾರುಕಟ್ಟೆಯಲ್ಲಿ ಆಪ್ಷನ್‌ ಪ್ರೀಮಿಯಂ ಕೂಡಾ ಏರಿಳಿಯುತ್ತವೆ. ಈತನ ರಿಸ್ಕ್ ಕೊಟ್ಟ ಪ್ರೀಮಿಯಮ್ಮಿಗೆ ಸೀಮಿತವಾದ ಕಾರಣ ಈತ ಬೇರೇನೂ ಮಾರ್ಜಿನ್‌ ಮನಿ ನೀಡ ಬೇಕಾಗಿಲ್ಲ. ಆದರೆ ಆಪ್ಷನ್‌ ಮಾರುವಾತ ಅನಿಯಮಿತ ರಿಸ್ಕ್ ತೆಗೆದುಕೊಳ್ಳುವ ಕಾರಣ ಮಾರುಕಟ್ಟೆ ಮತ್ತು ಬ್ರೋಕರ್‌ ವ್ಯವಸ್ಥೆ ಆತನ ಮೆಲೆ ಭದ್ರತಾ ಠೇವಣಿ ಅಥವ ಮಾರ್ಜಿನ್‌ ಮನಿಯನ್ನು ಹೇರುತ್ತದೆ. ಪಡೆದುಕೊಂಡ ಪ್ರೀಮಿಯಂ ಕಳೆದು ಉಳಿದ ಹಣವನ್ನು ಬ್ರೋಕರ್‌ ವ್ಯವಸ್ಥೆ ನಿಮ್ಮ ಖಾತೆಯಲ್ಲಿ ಹಿಡಿದಿಡುತ್ತದೆ. ಇದು ಮೂಲಭೂತವಾದ ಪ್ರೈಮರಿ ಮಾರ್ಜಿನ್‌. 

ಇದಲ್ಲದೆ ಮಾರುಕಟ್ಟೆ ಏರಿಳಿದಂತೆ ಆತನ ಸಂಭಾವ್ಯ ಲಾಭ ನಷ್ಟಗಳೂ ಏರಿಳಿಯುತ್ತವಷ್ಟೆ? ಫ್ಯೂಚರ್ಸ್‌ ಟ್ರೇಡಿಂಗಿನ ರೀತಿಯಲ್ಲಿಯೇ ಇಲ್ಲೂ ಕೂಡಾ ಮಾರ್ಕೆ-ಟು-ಮಾರ್ಕೆಟ್‌ ಪರಿಕಲ್ಪನೆಯಲ್ಲಿ ನಿಮ್ಮಿಂದ ಹೆಚ್ಚುವರಿ ಮಾರ್ಜಿನ್‌ ಅನ್ನು ಡಿಮಾಂಡ್‌ ಮಾಡಬಹುದು ಅಥವಾ ಅನಗತ್ಯ ಮಾರ್ಜಿನ್‌ ಅನ್ನು ನಿಮಗೆ ಬಿಟ್ಟು ಕೊಡಲಾಗುವುದು. ಇದು ದೈನಂದಿಕವಾಗಿ ನಡೆಯುವ ಕ್ರೆಡಿಟ್‌/ಡೆಬಿಟ್‌ ಕಾರ್ಯ. ಆಪ್ಷನ್‌ ಮಾರುವವರು ಇದಕ್ಕೆ ಸಿದ್ಧರಾಗಿರಬೇಕು. ಇಲ್ಲದಿದ್ದರೆ ಮಾರುಕಟ್ಟೆಯೇ ನಿಮ್ಮ ಆಪ್ಷನ್‌ ಕರಾರನ್ನು ಅಲ್ಲಿಗೇ ಕ್ಲೋಸ್‌ ಮಾಡಿ ನಿಮ್ಮ ಮಾರ್ಜಿನ್‌ ಮನಿಯಿಂದ ಲೆಕ್ಕ ಚುಕ್ತ ಮಾಡಬಹುದು. ಇದು ಅಪಾಯಕರವಾದ ನಡೆ. ನೆನಪಿರಲಿ. 

ಕೆಲವು ಜನಪ್ರಿಯ ಆಪ್ಷನ್ಸ್‌ ತಂತ್ರಗಳು
ಆಪ್ಷನ್‌ ಕರಾರನ್ನು ಸರಿಯಾಗಿ ಕಲಿತು ಮನದಟ್ಟಾಗಿಸಿಕೊಂಡವರು ಮತ್ತು ಅದರ ಅಪಾಯಗಳ ಬಗ್ಗೆ ಸ್ಪಷ್ಟವಾದ ಅರಿವು ಉಳ್ಳವರು ಮತ್ತು ಅದನ್ನು ಒಂದು ವ್ಯವಹಾರವಾಗಿ ಮುಂದುವರಿಸಿಕೊಂಡು ಹೋಗಲು ಇಷ್ಟ ಇರುವವರು ಹಲವು ರಣನೀತಿಗಳನ್ನು ಅನುಸರಿಸುತ್ತಾರೆ. ಕಾಲ್‌ಮತ್ತು ಪುಟ್‌ಗಳಲ್ಲಿ ಖರೀದಿ ಮತ್ತು ಮಾರಾಟ  ಈ ರೀತಿ ನಾಲ್ಕು ವಿವಿಧ ಪೊಸಿಶನ್ಸ್‌ಗಳನ್ನೇ ಬೇರೆ ಬೇರೆ ರೀತಿಗಳಲ್ಲಿ ಹೊಸೆಯುತ್ತಾ ಕೆಲವು ತಂತ್ರಗಳನ್ನು ರೂಪಿಸಬಹುದಾಗಿದೆ. ಅಂತಹ ಸ್ಟ್ರಾಟಜಿಗಳು ಹತ್ತು ಹಲವಾರು ಇರುವುದಾದರೂ ಕೆಲವೇ ಕೆಲವು ಜನಪ್ರಿಯ ಹಾಗೂ ಹೆಚ್ಚು ಬಳಕೆಯಲ್ಲಿರುವ ಸ್ಟ್ರಾಟಜಿಗಳನ್ನು ಇಲ್ಲಿ ವಿಮರ್ಷಿಸಲಾಗಿದೆ:

1.ಹೆಜ್ಜಿಂಗ್‌:
ಹೆಜ್ಜಿಂಗ್‌ ಅಥವಾ ಅಪಾಯ/ಅನಾಹುತಗಳ ವಿರುದ್ಧ ಬೇಲಿ ಹಾಕಿ ರಕ್ಷಣೆ ಪಡೆದು ಕೊಳ್ಳುವುದಕ್ಕೆ ಹೆಜ್ಜಿಂಗ್‌ ಎನ್ನುತ್ತಾರೆ. ಆಪ್ಷನ್‌ಗಳ ಸರಿಯಾದ ಉಪಯೋಗ ಅಂದರೆ ಇದೇನೇ. ಉದಾಹರಣೆಗೆ ನಿಮ್ಮಲ್ಲಿ ಎಬಿಸಿ ಕಂಪೆನಿಯ 1000 ಶೇರುಗಳಿವೆ ಎಂದಿಟ್ಟುಕೊಳ್ಳೋಣ. ಸಧ್ಯದ ಮಾರುಕಟ್ಟೆ ಬೆಲೆ ರೂ 200. ಇದು ಉತ್ತಮ ಬೆಲೆ ಆದರೆ ನಿಮಗೆ ಶೇರನ್ನು ಮಾರಿ ಬಿಡಲು ಮನಸ್ಸಿಲ್ಲ. ಇನ್ನಷ್ಟೂ ಮೇಲೆ ಹೋಗಲಿ ಎನ್ನುವ ಆಸೆ. ಆದರೆ ಎಲ್ಲಾದರೂ ಕೆಳಕ್ಕೆ ಹೋದರೋ ಎನ್ನುವ ಭಯವೂ ಇದೆ. ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಪ್ರೀಮಿಯಂ ತೆತ್ತು (ಉದಾಹರಣೆ-ರೂ.) ಕೋಡುವ ಆಯ್ಕೆಯಾದ ಪುಟ್‌ ಆಪ್ಷನ್‌ ಕೊಳ್ಳುತ್ತೀರಿ. ಇನ್ನು ಮಾರುಕಟ್ಟೆ ಕೆಳಕ್ಕೆ ಹೋಗಿ ಶೇರಿನಲ್ಲಿ ನಷ್ಟವಾದರೆ ಆ ನಷ್ಟವನ್ನು ಪುಟ್‌ ಆಯ್ಕೆಯನ್ನು ಚಲಾಯಿಸಿ ಆಪ್ಷನ್‌ ಸೇಲ್‌ ಮಾಡಿ ಭರಿಸಿಕೊಳ್ಳಬಹುದು. ಒಂದು ವೇಳೆ ಬೆಲೆ ಮೇಲಕ್ಕೇರಿದರೆ ಶೇರು ಬೆಲೆಯಲ್ಲಿ ಮತ್ತಷ್ಟೂ ವೃದ್ಧಿಯಾಗಿ ಲಾಭವಾಗುತ್ತದೆ ಆದರೆ ಪುಟ್‌ ಆಪ್ಷನ್‌ ಆಯ್ಕೆಯನ್ನು ಚಲಾಯಿಸದೆ ಹಾಗೇ ಬಿಟ್ಟು ಕೊಟ್ಟ ರೂ. 5 ಪ್ರೀಮಿಯಂ ಅನ್ನು ಕಳಕೊಳ್ಳುತ್ತೀರಿ ಅಷ್ಟೆ. ಹೀಗೆ ಹೆಜ್ಜಿಂಗ್‌ ಎನ್ನುವುದು ಬೆಲೆಯ ಇನ್ಷೊರನ್ಸ್‌ ರೀತಿಯಲ್ಲಿ ಭದ್ರತಾ ಕೆಲಸ ಮಾಡುತ್ತದೆ.    

2.ಕವರ್ಡ್‌ ಕಾಲ್‌
ಒಬ್ಬ ಒಂದು ಶೇರನ್ನು ತನ್ನ ಬಳಿ ಇಟ್ಟುಕೊಂಡೇ  ಅದರ ಮೇಲೆ ಸದ್ಯದ ಬೆಲೆಗಿಂತ ಹೆಚ್ಚಿನ ಬೆಲೆಗೆ ಕಾಲ್‌ ಆಪ್ಷನ್‌ ಮಾರಿದರೆ/ಬರೆದರೆ ಅದನ್ನು ಕವರ್ಡ್‌ ಕಾಲ್‌ ಅನ್ನುತ್ತಾರೆ. ಅಂದರೆ ಕಾಲ್‌ ಆಪ್ಷನ್‌ಗೆ ರಕ್ಷಣೆ ಇದೆ ಎಂದರ್ಥ. ಒಂದು ವೇಳೆ ಮಾರುಕಟ್ಟೆ ಬೆಲೆ ಸ್ಟ್ರೈಕ್‌ ಬೆಲೆ ಮೀರಿ ಕಾಲ್‌ ನಷ್ಟದಲ್ಲಿ ಹೋದರೆ ಅದೇ ಸಮಯಕ್ಕೆ ಕೈಯಲ್ಲಿರುವ ಶೇರುಗಳನ್ನು ಮಾರುಕಟ್ಟೆಯಲ್ಲಿ ಮಾರಿ ಬಿಟ್ಟರೆ ಮುಗಿಯಿತು. ಆಪ್ಷನ್‌ನಲ್ಲಿ ಆದ ನಷ್ಟ ಮಾರುಕಟ್ಟೆಯಲ್ಲಿ ಸರಿಹೋಗುತ್ತದೆ. ಹೆಚ್ಚು ಬೆಲೆಯ ಶೇರನ್ನು ಕಡಿಮೆಗೆ ಕೊಟ್ಟ ದೃಷ್ಟಿಯಿಂದ ನೋಡಿದರೆ ಇಲ್ಲಿ ನಷ್ಟ ನಷ್ಟವೇ ಆದರೂ ಕೈಯಿಂದ ಕ್ಯಾಶ್‌ ನೀಡ ಬೇಕಾದ್ದುದಿಲ್ಲ. ಕ್ಯಾಶ್‌ ರಕ್ಷಣೆ ದೃಷ್ಟಿಯಿಂದ ಇದು ಒಳ್ಳೆಯ ತಂತ್ರ. ಈ ರೀತಿ ಕವರ… ಇಲ್ಲದೆ ಕಾಲ್‌ ಮಾರಿದರೆ ಅದಕ್ಕೆ ನೇಕೆಡ್‌ ಕಾಲ್‌ ಅನ್ನುತ್ತಾರೆ. ಇಲ್ಲಿ ರಕ್ಷಣೆ ಇರುವುದಿಲ್ಲ. 

ಉದಾ: ಒಂದು ಶೇರಿನ ಮಾರುಕಟ್ಟೆ ಬೆಲೆ ರೂ 250 ಇದ್ದು ಅದರ ಮೇಲೆ ರೂ 5 ಪ್ರೀಮಿಯಂ ಪಡಕೊಂಡು ರೂ 275 ಕ್ಕೆ ಕಾಲ್‌ ಮಾರಿದ್ದೀರಿ. ಎಕ್ಸೆರಿ ಸಮಯದಲ್ಲಿ ರೂ 275 ರ ಒಳಗೆ ಬೆಲೆ ನಿಂತರೆ ನಿಮಗೆ ರೂ 5 ಪಡೆದ ಪ್ರೀಮಿಯಂ ಲಾಭ. 275 ಕ್ಕೆ ಮೀರಿ ಬೆಲೆ ಹೋದರೆ ಅಷ್ಟರ ಮಟ್ಟಿಗೆ ನಷ್ಟ ನೀಡಬೇಕಾಗಿ ಬರುತ್ತದೆ. ಆವಾಗ ಕೈಯಲ್ಲಿದ್ದ ಶೇರುಗಳನ್ನು ಮಾರಿದರೆ ಆ ನಷ್ಟವನ್ನು ಸರಿತೂಗಿಸಬಹುದು.

3.ಕವರ್ಡ್‌ ಪುಟ್‌
ಒಂದು ಶೇರನ್ನು ತನ್ನ ಬಳಿ ಇಟ್ಟುಕೊಂಡೇ ಅದರ ಮೇಲೆ ಪುಟ್‌ ಬರೆದರೆ/ಮಾರಿದರೆ ಅದನ್ನು ಕವರ್ಡ್‌ ಪುಟ್‌ ಅನ್ನುತ್ತಾರೆ. ಅಂದರೆ ಇಲ್ಲಿ ಪುಟ್‌ ಆಪ್ಷನ್ನಿಗೆ ರಕ್ಷಣೆ ಇದೆ ಎಂದರ್ಥ. ಒಂದು ವೇಳೆ ಮಾರುಕಟ್ಟೆ ಬೆಲೆ ಸ್ಟ್ರೈಕ್‌ ಬೆಲೆಗಿಂತ ಕೆಳಗೆ ನಿಂತು ಪುಟ್‌ ನಷ್ಟದಲ್ಲಿ ಹೋದರೆ ಅದೇ ಸಮಯಕ್ಕೆ ಕೈಯಲ್ಲಿರುವ ಶೇರುಗಳನ್ನು ಮಾರುಕಟ್ಟೆಯಲ್ಲಿ ಮಾರಿ ಬಿಟ್ಟರೆ ಮುಗಿಯಿತು. ಆಪ್ಷನ್‌ನಲ್ಲಿ ಆದ ನಷ್ಟ ಮಾರುಕಟ್ಟೆಯಲ್ಲಿ ಸರಿಹೋಗುತ್ತದೆ. ಕಡಿಮೆ ಬೆಲೆಯ ಶೇರನ್ನು ಹೆಚ್ಚು ಕೊಟ್ಟ ದೃಷ್ಟಿಯಿಂದ ನೋಡಿದರೆ ಇಲ್ಲಿ ನಷ್ಟ ನಷ್ಟವೇ ಆದರೂ ಕೈಯಲ್ಲಿರುವ ಶೇರು ಮಾರಿ ಅದನ್ನು ಸರಿತೂಗಿಸಬಹುದು. ಕ್ಯಾಶ್‌ ರಕ್ಷಣೆ ದೃಷ್ಟಿಯಿಂದ ಇದು ಒಳ್ಳೆಯ ತಂತ್ರ. ಈ ರೀತಿ ಕವರ್‌ ಇಲ್ಲದೆ ಪುಟ್‌ ಮಾರಿದರೆ ಅದಕ್ಕೆ ನೇಕೆಡ್‌ ಪುಟ್‌ ಅನ್ನುತ್ತಾರೆ. ಅಲ್ಲಿ ರಕ್ಷಣೆ ಇರುವುದಿಲ್ಲ. 

ಉದಾ: ಒಂದು ಶೇರಿನ ಮಾರುಕಟ್ಟೆ ಬೆಲೆ ರೂ. 250 ಇದ್ದು ಅದರ ಮೇಲೆ ರೂ.5 ಪ್ರೀಮಿಯಂ ಪಡಕೊಂಡು ರೂ 275 ಕ್ಕೆ ಪುಟ್‌ ಮಾರಿದ್ದೀರಿ. ಎಕ್ಸೆರಿ ಸಮಯದಲ್ಲಿ ರೂ.275 ರ ಒಳಗೆ  ಬೆಲೆ ನಿಂತರೆ ನಿಮಗೆ ರೂ.5 ಪಡೆದ ಪ್ರೀಮಿಯಂ ಲಾಭ. 275 ಕ್ಕೆ ಮೀರಿ ಬೆಲೆ ಹೋದರೆ ಅಷ್ಟರ ಮಟ್ಟಿಗೆ ನಷ್ಟ ನೀದಬೇಕಾಗಿ ಬರುತ್ತದೆ. ಆವಾಗ ಕೈಯಲ್ಲಿದ್ದ ಶೇರುಗಳನ್ನು ಮಾರಿದರೆ ಆ ನಷ್ಟವನ್ನು ಸರಿತೂಗಿಸಬಹುದು.   ಇದಕ್ಕೆ ತದ್ವಿರುದ್ಧವಾಗಿ ಯಾವುದೇ ಆಸರೆ ಇಲ್ಲದೆ ನೇರವಾಗಿ ಕಾಲ್‌ ಬರೆದರೆ ಅದನ್ನು ನೇಕೆಡ್‌ ಕಾಲ್‌ ಎನ್ನುತ್ತಾರೆ. ಇಲ್ಲಿ ನಷ್ಟ ಬಂದರೆ ಕ್ಯಾಶ್‌ ತೆತ್ತು ನಷ್ಟವನ್ನು ಭರಿಸಿಕೊಳ್ಳಬೇಕಷ್ಟೆ. ಸರಿದೂಗಿಸಲು ಶೇರು ಇರುವುದಿಲ್ಲ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next