ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ತಂಡವು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಅವರು ಅಫ್ಘಾನ್ ಆಟಗಾರರೊಂದಿಗೆ ಡ್ಯಾನ್ಸ್ ಮಾಡಿದ್ದರು. ಇದೀಗ ಅಫ್ಘಾನಿಸ್ತಾನವು ಮತ್ತೊಂದು ಗೆಲುವು ಸಾಧಿಸಿದ್ದು, ಪಠಾಣ್ ಮತ್ತೆ ಕುಣಿದಾಡಿದ್ದಾರೆ.
ಸೋಮವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವು ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಈ ಕೂಟದಲ್ಲಿ ಮೂರನೇ ಗೆಲುವು ಕಂಡಿದೆ.
ಅಫ್ಘಾನ್ ಗೆಲುವಿನ ಬಳಿಕ ಪಠಾಣ್ ಅವರು ಭಾರತದ ಮಾಜಿ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಡ್ಯಾನ್ಸ್ ಮಾಡಿದರು. ಅಫ್ಘಾನಿಸ್ತಾನದ ಗೆಲುವನ್ನು ಸಂಭ್ರಮಿಸಲು ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ನೃತ್ಯ ಮಾಡಿದ ವೀಡಿಯೊ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49.3 ಓವರ್ ಗಳಲ್ಲಿ 241 ರನ್ ಗಳಿಸಿತು. ಇದನ್ನು ಬೆನ್ನತ್ತಿದ ಅಫ್ಘಾನ್ 45.2 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 242 ರನ್ ಮಾಡಿತು. ಅಫ್ಘಾನ್ ಪರ ಅಜ್ಮತುಲ್ಲಾ ಒಮರ್ ಝೈ ಅಜೇಯ 73 ರನ್, ನಾಯಕ ಹಶ್ಮತ್ ಶಹೀದಿ ಅಜೇಯ 58 ರನ್ ಮತ್ತು ರೆಹಮತ್ ಶಾ 62 ರನ್ ಮಾಡಿದರು. ನಾಲ್ಕು ವಿಕೆಟ್ ಕಿತ್ತ ಫಜಲ್ ಹಖ್ ಫಾರೂಖಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.