ಜಮೈಕಾ: ಪ್ರವಾಸಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡಿಸ್ ಮುಖಭಂಗ ಅನುಭವಿಸಿದೆ. ತವರಿನಲ್ಲಿ ಐರ್ಲೆಂಡ್ ವಿರುದ್ಧ 2-1 ಅಂತರದ ಸೋಲುಂಡ ಬಳಿಕ ನಾಯಕ ಕೈರನ್ ಪೊಲಾರ್ಡ್, “ಇದು ವೆಸ್ಟ್ ಇಂಡೀಸ್ ಕ್ರಿಕೆಟ್ ಗೆ ಅತ್ಯಂತ ಬೇಸರದ ದಿನ” ಎಂದಿದ್ದಾರೆ.
ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡವು ಎರಡು ವಿಕೆಟ್ ಅಂತರದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಕೇವಲ 212 ರನ್ ಗೆ ಆಲೌಟಾಗಿದ್ದು, ಐರ್ಲೆಂಡ್ ಎಂಟು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ವಿಂಡೀಸ್ ಪರ ಶಾಯ್ ಹೋಪ್ ಒಬ್ಬರೇ ಅರ್ಧಶತಕ ಸಿಡಿಸಿದರು. ಹೋಪ್ 53 ರನ್ ಗಳಿಸಿದರೆ, ಹೋಲ್ಡರ್ 44 ರನ್ ಗಳಿಸಿದರು. ಬಾಲಂಗೋಚಿಗಳಾದ ಅಖಿಯಲ್ ಹುಸೈನ್ 23 ಮತ್ತು ಒಡೇನ್ ಸ್ಮಿತ್ 20 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ಐರ್ಲೆಂಡ್ ಪರ ಆ್ಯಂಡಿ ಮೆಕ್ ಬ್ರಿನ್ ನಾಲ್ಕು ವಿಕೆಟ್ ಮತ್ತು ಕ್ರೇಗ್ ಯಂಗ್ ಮೂರು ವಿಕೆಟ್ ಕಿತ್ತರು.
ಇದನ್ನೂ ಓದಿ:“ಮಿಸೆಸ್ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್ ಉಡುಗೆ
ಗುರಿ ಬೆನ್ನತ್ತಿದ ಐರ್ಲೆಂಡ್ ಗೆ ನಾಯಕ ಸ್ಟರ್ಲಿಂಗ್ 44 ರನ್, ಆ್ಯಂಡಿ ಮೆಕ್ ಬ್ರಿನ್ 59 ರನ್ ಮತ್ತು ಹ್ಯಾರಿ ಟೆಕ್ಟರ್ 52 ರನ್ ಗಳಿಸಿ ಆಧರಿಸಿದರು. 44.5 ಓವರ್ ನಲ್ಲಿ ಎಂಟು ವಿಕೆಟ್ ಕಳೆದುಕೊಂಡ ಐರ್ಲೆಂಡ್ ಗುರಿ ತಲುಪಿ ಜಯ ಸಾಧಿಸಿತು.
ಆ್ಯಂಡಿ ಮೆಕ್ ಬ್ರಿನ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದ್ದರೆ, ನಂತರದ ಎರಡೂ ಪಂದ್ಯಗಳನ್ನು ಗೆದ್ದ ಐರ್ಲೆಂಡ್ ಸರಣಿ ವಶಪಡಿಸಿಕೊಂಡಿತು.