Advertisement

ಗೆಲುವಿನ ಯೋಜನೆ ರೂಪಿಸಿದ ಶೇಷ ಭಾರತ

12:30 AM Feb 16, 2019 | Team Udayavani |

ನಾಗ್ಪುರ: ರಣಜಿ ಚಾಂಪಿಯನ್‌ ವಿದರ್ಭ ಹಾಗೂ ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್‌ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಶೇಷಭಾರತ ಸ್ಪಷ್ಟ ಗೆಲುವಿನ ಯೋಜನೆಗೆ ಮುಂದಾಗಿದ್ದು, ವಿದರ್ಭ ವಿಜಯಕ್ಕೆ 280 ರನ್ನುಗಳ ಗುರಿ ನೀಡಿದೆ. ವಿದರ್ಭ ಒಂದು ವಿಕೆಟಿಗೆ 37 ರನ್‌ ಮಾಡಿ 4ನೇ ದಿನದಾಟ ಮುಗಿಸಿದೆ. ಶನಿವಾರ ಪಂದ್ಯದ ಅಂತಿಮ ದಿನವಾಗಿದ್ದು, ವಿದರ್ಭ ಉಳಿದ 9 ವಿಕೆಟ್‌ಗಳಿಂದ 243 ರನ್‌ ಗಳಿಸಬೇಕಿದೆ. ಶೇಷಭಾರತ ಈ 9 ವಿಕೆಟ್‌ಗಳನ್ನು ಬೇಗನೇ ಉದುರಿಸಿ ಗೆಲುವು ಸಾಧಿಸೀತೇ ಎಂಬ ಕುತೂಹಲ ಮೇರೆ ಮೀರಿದೆ.

Advertisement

ವಿಹಾರಿ ಬ್ಯಾಟಿಂಗ್‌ ವೈಭವ
ಟೆಸ್ಟ್‌ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಅವರ ಅಜೇಯ 180 ರನ್‌ ಶುಕ್ರವಾರದ ಆಟದ ಆಕರ್ಷಣೆಯಾಗಿತ್ತು. ಭರ್ತಿ 300 ಎಸೆತ ಎದುರಿಸಿದ ಅವರು 19 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಈ ಬ್ಯಾಟಿಂಗ್‌ ಸಾಹಸಗೈದರು. ನಾಯಕ ಅಜಿಂಕ್ಯ ರಹಾನೆ 87 ರನ್‌ (232 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಅಯ್ಯರ್‌ ಅಜೇಯ 61 ರನ್‌ ಹೊಡೆದರು (52 ಎಸೆತ, 5 ಬೌಂಡರಿ, 4 ಸಿಕ್ಸರ್‌). ವಿಹಾರಿ-ರಹಾನೆ 3ನೇ ವಿಕೆಟಿಗೆ 229 ರನ್‌ ರಾಶಿ ಹಾಕಿದರು.

ಹನುಮ ವಿಹಾರಿ ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್‌ ಬಾರಿಸಿದ್ದರು. ಇದರೊಂದಿಗೆ ಅವರು ಇರಾನಿ ಕಪ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಕೇವಲ 2ನೇ ಸಾಧಕನಾಗಿ ಮೂಡಿಬಂದರು. ಶಿಖರ್‌ ಧವನ್‌ ಮೊದಲಿಗ. ಅವರು ಜೈಪುರದಲ್ಲಿ ನಡೆದ 2011ರ ಇರಾನಿ ಕಪ್‌ ಪಂದ್ಯದಲ್ಲಿ ಶೇಷಭಾರತದ ಪರ ರಾಜಸ್ಥಾನ ವಿರುದ್ಧ 177 ಮತ್ತು 155 ರನ್‌ ಬಾರಿಸಿದ್ದರು.

ಹನುಮ ವಿಹಾರಿ ಇನ್ನೂ ಒಂದು ಸಾಹಸದಿಂದ ಸುದ್ದಿಯಾಗಿದ್ದಾರೆ. ಅವರು ಇರಾನಿ ಕಪ್‌ನ ಸತತ 3 ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌. ಕಳೆದ ವರ್ಷ ವಿದರ್ಭ ವಿರುದ್ಧವೇ ದ್ವಿತೀಯ ಇನ್ನಿಂಗ್ಸ್‌ನಲ್ಲಿ 183 ರನ್‌ ಬಾರಿಸಿದ್ದರು.

ಬೌಲರ್‌ಗಳಿಗೆ ನೆರವಾದೀತೇ ಟ್ರ್ಯಾಕ್‌?
ವಿಹಾರಿ ಹಾಗೂ ಶೇಷಭಾರತದ ಬ್ಯಾಟಿಂಗ್‌ ಪರಾಕ್ರಮ ಗಮನಿಸಿದಾಗ ನಾಗ್ಪುರ ಟ್ರ್ಯಾಕ್‌ ಬೌಲರ್‌ಗಳಿಗೆ ವಿಶೇಷ ನೆರವು ನೀಡದಿರುವುದು ಗೋಚರಕ್ಕೆ ಬರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಡಿದರೆ ವಿದರ್ಭ ಗೆಲುವನ್ನು ಒಲಿಸಿಕೊಳ್ಳಲೂಬಹುದು. ಆದರೆ ಈಗಾಗಲೇ ಇನ್ನಿಂಗ್ಸ್‌ ಮುನ್ನಡೆ ಗಳಿಸಿರುವ ವಿದರ್ಭಕ್ಕೆ ಜಯ ಅನಿವಾರ್ಯವೇನಲ್ಲ. ಪಂದ್ಯವನ್ನು ಡ್ರಾ ಮಾಡಿಕೊಂಡರೂ ಅದು ಇರಾನಿ ಕಪ್‌ ಅನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

Advertisement

ಆದರೆ ಶೇಷಭಾರತಕ್ಕೆ ಗೆದ್ದರಷ್ಟೇ ಕಪ್‌ ಒಲಿಯಲಿದೆ. ಈ ಕಾರಣಕ್ಕಾಗಿಯೇ ಅದು ದಿಟ್ಟ ಡಿಕ್ಲರೇಷನ್‌ ಮಾಡಿದ್ದು, ಗ್ಯಾಂಬ್ಲಿಂಗ್‌ಗೆ ಮುಂದಾಗಿದೆ. ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿ ರುವುದರಿಂದ ಗೆದ್ದರೆ ಬೋನಸ್‌ ಎಂಬುದು ರಹಾನೆ ಬಳಗದ ಲೆಕ್ಕಾಚಾರ. ವಿದರ್ಭ ನಾಯಕ ಫೈಜ್‌ ಫ‌ಜಲ್‌ (0) ಅವರನ್ನು ರಜಪೂತ್‌ 3ನೇ ಎಸೆತದಲ್ಲೇ ಕೆಡವಿದ್ದಾರೆ. ಆರ್‌. ಸಂಜಯ್‌ 17 ಮತ್ತು ಅಥರ್ವ ತಾಯೆ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ 
ಶೇಷಭಾರತ-330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ವಿಹಾರಿ ಔಟಾಗದೆ 180, ರಹಾನೆ 87, ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2). ವಿದರ್ಭ-425 ಮತ್ತು ಒಂದು ವಿಕೆಟಿಗೆ 37.

ಕಪ್ಪುಪಟ್ಟಿ  ಧರಿಸಿ ಆಡಿದ ಕ್ರಿಕೆಟಿಗರು
ಗುರುವಾರ ಜಮ್ಮು-ಕಾಶ್ಮೀರದ ಅವಂತಿ ಪೋರಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇರಾನಿ ಟ್ರೋಫಿ ಪಂದ್ಯದ ಶುಕ್ರವಾರದ ಆಟದ ವೇಳೆ ಎರಡೂ ತಂಡಗಳ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲಿಳಿದರು. ಅಂಪಾಯರ್‌ಗಳೂ ಕಪ್ಪುಪಟ್ಟಿ ಧರಿಸಿದ್ದರು. ಉಗ್ರರ ಈ ದುಷ್ಕೃತ್ಯವನ್ನು ಕ್ರೀಡಾಪಟುಗಳಾದ ವಿರಾಟ್‌ ಕೊಹ್ಲಿ, ವೀರೇಂದ್ರ ಸೆಹವಾಗ್‌, ಸಾನಿಯಾ ಮಿರ್ಜಾ, ವಿಜೇಂದರ್‌ ಸಿಂಗ್‌ ಮೊದಲಾದವರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next