Advertisement
ಒಟ್ಟಾರೆ ಘಟನೆ ಏನು? ಎರಡು ವಾರಗಳ ಹಿಂದೆ ಅಂದರೆ ಸೆ.13ರಂದು ಇರಾನ್‌ನ ವಾಯವ್ಯ ದಿಕ್ಕಿನಲ್ಲಿ ಇರುವ ಖುರ್ದಿಸ್ತಾನ್ ಎಂಬ ಪ್ರಾಂತ್ಯದ ಸೆಕೆಜ್ ಎಂಬ ನಗರದ ಮಾಶಾ ಅಮಿನಿ ಎಂಬ ಯುವತಿ ರಾಜಧಾನಿ ತೆಹ್ರಾನ್‌ಗೆ ಆಗಮಿಸಿದ್ದಳು. ಆಕೆ ಹಿಜಾಬ್ ಅನ್ನು ಸರಿಯಾದ ಕ್ರಮದಲ್ಲಿ ಧರಿಸಿರಲಿಲ್ಲ ಎಂದು ಆಕೆಯನ್ನು ಪೊಲೀಸರು ಬಂಧಿಸಿದ್ದರು. ಆಕೆ ಹಿಜಾಬ್ ಧರಿಸಲು ಇರುವ ಕಾನೂನು ಉಲ್ಲಂ ಸಿದ್ದಾಳೆ ಎನ್ನುವುದು ಆರೋಪವಾಗಿತ್ತು. ಮೂರು ದಿನಗಳ ಬಳಿಕ (ಸೆ.16) ಪೊಲೀಸ್ ಕಸ್ಟಡಿಯಲ್ಲಿ ಇದ್ದ ಯುವತಿ ಸಾವಿಗೀಡಾಗಿದ್ದಳು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಖುರ್ದಿಷ್ ಸಮುದಾಯ ಹೆಚ್ಚಾಗಿರುವ ಇರಾನ್‌ನ ಪ್ರಮುಖ ನಗರಗಳಲ್ಲಿ ಜನರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
“ಘಶ್ತ್ -ಇ-ಇರ್ಶಾದ್’ ಎಂದು ಸ್ಥಳೀಯ ಭಾಷೆಯಲ್ಲಿ ಈ ಪೊಲೀಸ್ ವ್ಯವಸ್ಥೆಯನ್ನು ಕರೆಯಲಾಗುತ್ತದೆ. ಅದರ ಅರ್ಥವೇನೆಂದರೆ “ನೈತಿಕ ಪೊಲೀಸ್ ವಿಭಾಗ’. ಈ ವಿಭಾಗದವರೇ ಅಮಿನಿ ಎಂಬ ಯುವತಿಯನ್ನು ಬಂಧಿಸಿತ್ತು. ಈ ವಿಭಾಗ ಇರಾನ್‌ನಲ್ಲಿ ಇಸ್ಲಾಂ ನಿಯಮಗಳ ಅನ್ವಯ ಸಾರ್ವಜನಿಕವಾಗಿ ವಸ್ತ್ರ ಧರಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಉಸ್ತುವಾರಿ ನೋಡಿಕೊಳ್ಳುತ್ತದೆ. ನಿಯಮ ಉಲ್ಲಂಘನೆ ಆಗಿದೆ ಎಂಬ ವಿಚಾರ ಆ ತಂಡಕ್ಕೆ ದೃಢಪಟ್ಟರೆ ಅದು, ಅಂಥವರನ್ನು ಬಂಧಿಸುತ್ತದೆ. ಇರಾನ್‌ನಲ್ಲಿ ನಿಯಮ ಏನು?
ಹತ್ತು ವರ್ಷದಿಂದ ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟವರು ತಲೆಯನ್ನು ಮುಚ್ಚುವಂತೆ ವಸ್ತ್ರ ಧರಿಸಬೇಕು. ಶಾಲೆ, ಕಾಲೇಜುಗಳಲ್ಲಿ 7 ವರ್ಷ ಇದ್ದಾಗಲೇ ಈ ನಿಯಮ ಜಾರಿ ಇದೆ. 2018ರಲ್ಲಿ ನಡೆದಿದ್ದ ಸಮೀಕ್ಷೆಯ ಪ್ರಕಾರ ಶೇ.60ರಿಂದ ಶೇ.70ರಷ್ಟು ಮಂದಿ ನಿಯಮಗಳನ್ನು ಉಲ್ಲಂ ಸುತ್ತಾರೆ ಎಂಬ ಅಂಶ ದೃಢಪಟ್ಟಿದೆ.ಡಿಡಿ
Related Articles
ಹದಿನೈದು ದಿನಗಳಿಂದ ಈಚೆಗೆ ಇರಾನ್‌ನ ಯಾಜ್ಡ್ , ತಬ್ರಿಜ್, ಸನ್ಹಾಜ್ ಸೇರಿದಂತೆ 80ಕ್ಕೂ ಹೆಚ್ಚು ನಗರಗಳಲ್ಲಿ ಕಠಿಣ ಹಿಜಾಬ್ ನಿಯಮಗಳ ವಿರುದ್ಧ ಜನರು ಸಿಡಿದು ನಿಂತಿದ್ದಾರೆ. ಜತೆಗೆ ಸರ್ಕಾರಿ ಪಡೆಗಳ ಜತೆಗೆ ಹೋರಾಟ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ 80ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ನಾರ್ವೆ ಮೂಲದ ಮಾನವ ಹಕ್ಕುಗಳ ಸಂಘಟನೆಯ ಪ್ರಕಾರ ಸರ್ಕಾರಿ ಪಡೆಗಳು ಅತ್ಯಂತ ಕ್ರೂರವಾಗಿರುವ ಕ್ರಮಗಳಿಂದ ನೀತಿಗಳನ್ನು ಆಕ್ಷೇಪ ಮಾಡುವವರನ್ನು ಹತ್ತಿಕ್ಕಲಾಗುತ್ತದೆ ಎಂದು ಆರೋಪಿಸಿದೆ. ಈ ಪೈಕಿ ಗಿಲಾನ್ ಮತ್ತು ಮಜಾಂದ್ರಾನ್ ಎಂಬ ಪ್ರಾಂತ್ಯಗಳಲ್ಲಿಯೇ ಕ್ರಮವಾಗಿ 35 ಮತ್ತು 24 ಮಂದಿ ಅಸುನೀಗಿದ್ದಾರೆ. ಸರ್ಕಾರದ ಪ್ರಕಾರ ಅಸುನೀಗಿದವರ ಸಂಖ್ಯೆ ಕೇವಲ 41. ಇಪ್ಪತ್ತಕ್ಕಿಂತಲೂ ಹೆಚ್ಚು ಮಂದಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಕುದಿಯುತ್ತಿತ್ತು ಆಕ್ರೋಶ ಹಿಜಾಬ್ ಧರಿಸಲಿಲ್ಲ ಎಂಬ ಕಾರಣಕ್ಕಾಗಿ ಯುವತಿಯ ಸಾವಿನಿಂದ ಜನರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ ಎನ್ನುವುದು ನಿಜ. ಆದರೆ, ದಶಕಗಳಿಂದ ಆ ದೇಶವನ್ನು ಕಾಡುತ್ತಿರುವ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ವಿಚಾರಗಳಿಂದಾಗಿ ಯುವತಿ ಮಾಶಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಅಸುನೀಗುತ್ತಿದ್ದಂತೆಯೇ ಮಡುಗಟ್ಟಿದ್ದ ಕ್ರೋಧ ಆಸ್ಫೋಟಗೊಂಡಿತು ಎಂಬ ಬಗ್ಗೆ ಜಗತ್ತಿನಲ್ಲಿ ವಿಶ್ಲೇಷಣೆಗಳು ಶುರುವಾಗಿವೆ.
ಈ ವರ್ಷದ ಪ್ರತಿಭಟನೆಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿ ನಿಂತಿದ್ದಾರೆ ಎನ್ನುವುದು ಪ್ರಧಾನ. ಹಿಜಾಬ್ ಅನ್ನು ಧರಿಸುವುದಿಲ್ಲ ಎಂದು ಮಹಿಳೆಯರು ಸಿಡಿದು ನಿಂತದ್ದೇ ಧಾರ್ಮಿಕ ಮುಖಂಡರಿಗೆ ಅತೃಪ್ತಿ ತಂದಿದೆ. ಆದರೆ, ಹೆಚ್ಚಾಗಿರುವ ಧಾರ್ಮಿಕ ಮೂಲಭೂತವಾದದ ವಿರುದ್ಧ ಜನರು ಸಿಡಿದಿದ್ದಾರೆ. ಇರಾನ್‌ನ ಎಲ್ಲಾ ವರ್ಗದ ಜನರು, ಭೌಗೋಳಿಕ ವಲಯವನ್ನು ಮೀರಿಸಿ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೆಚ್ಚುತ್ತಿದೆ ಭ್ರಷ್ಟಾಚಾರ
ಭ್ರಷ್ಟಾಚಾರ, ಹೆಚ್ಚುತ್ತಿರುವ ಬಡತನ, ಹಣದುಬ್ಬರ ಕೂಡ ಪ್ರತಿಭಟನೆಗೆ ಕಾರಣವಾಗಿದೆ. 2009ರಲ್ಲಿ ಶೇ.10.8 ಇದ್ದ ಹಣದುಬ್ಬರ ಪ್ರಮಾಣ ಪ್ರಸಕ್ತ ವರ್ಷ ಶೇ.50ನ್ನು ಸಮೀಪಿಸಿದೆ. ಕೊರೊನಾ ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರದ ವೈಫಲ್ಯ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಜತೆಗೆ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ವಿಚಾರದಲ್ಲಿ ವಿಫಲಗೊಂಡ ಮಾತುಕತೆಯೂ ಆ ದೇಶದ ಆಂತರಿಕ ಸಮಸ್ಯೆ ಹೆಚ್ಚಿಸಿದೆ. ಕಳೆದ ವರ್ಷದ ಜೂನ್‌ನಲ್ಲಿ 25 ಲಕ್ಷ ಇರಾನ್ ನಾಗರಿಕರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದ್ದರು. ನಿರುದ್ಯೋಗ ಪ್ರಮಾಣ ಶೇ.10ಕ್ಕಿಂತ ಹೆಚ್ಚಾಗಿತ್ತು. 2015ರಲ್ಲಿ ಅಮೆರಿಕ ಜತೆಗೆ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ತಡೆಯುವ ನಿಟ್ಟಿನಲ್ಲಿ ಮುಕ್ತಾಯ ಗೊಂಡಿದ್ದ ಮಾತುಕತೆಯ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಲ್ಲಿನ ಜನರು ನಂಬಿದ್ದರು. 2018ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರು ಆ ಒಪ್ಪಂದ ರದ್ದುಗೊಳಿಸಿದ್ದರು. ಹೀಗಾಗಿ, ಮತ್ತೆ ಅಲ್ಲಿನ ಜನರ ಬದುಕು ಬೆಂಕಿಗೆ ಬಿದ್ದಂತೆ ಆಯಿತು. ಸರ್ಕಾರ ಯಾವ ರೀತಿ ಪರಿಸ್ಥಿತಿ ನಿಯಂತ್ರಿಸುತ್ತಿದೆ?
ಸದ್ಯ ಅಧ್ಯಕ್ಷರಾಗಿರುವ ಇಬ್ರಾಹಿಂ ರೈಸಿ ನೇತೃತ್ವದ ಸರ್ಕಾರಕ್ಕೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇ ಆಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಿಯೇ ಸಿದ್ಧ ಎಂದು ಅವರ ನೇತೃತ್ವದ ಸರ್ಕಾರ ಹೇಳಿಕೊಂಡಿದೆ. ಇನ್ನು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ-ಖಮೇನಿ ಅವರ ಪುತ್ರ ಮೊಜತಾಬಾ ಖಮೇನಿ ಅವರಿಗೆ ಭದ್ರತಾ ಪಡೆಗಳಿಗೆ ನೇಮಕ ಮಾಡುವ ಅಧಿಕಾರ ನೀಡಲಾಗಿದೆ. ಅವರೇ ಪ್ರತಿಭಟನಾಕಾರರ ವಿರುದ್ಧ ಕಠಿಣ ನಿಲುವಿನಿಂದ ವರ್ತಿಸುವಂತೆ ಸೇನೆಗೆ ಆದೇಶ ನೀಡುತ್ತಿದ್ದಾರೆ. ಈ ಅಂಶ ಕೂಡ ಪ್ರತಿಭಟನಾಕಾರರ ಕ್ರೋಧಕ್ಕೆ ಕಾರಣವಾಗಿದೆ. ಪ್ರತಿಭಟನೆಗೆ ಕೊನೆ ಎಂದು?
ಹತ್ತು ವರ್ಷಗಳಿಂದ ಈಚೆಗೆ ಆ ದೇಶದಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸೆ.16ರಿಂದ ಈಚೆಗೆ ಶುರುವಾಗಿರುವ ಅಹಿತಕರ ಘಟನೆಗಳಿಗೆ ಕೊನೆ ಯಾವತ್ತು ಎಂದು ಪ್ರಶ್ನೆ ಮಾಡಿದರೆ, ಅದಕ್ಕೆ ಉತ್ತರ ಸಿಗುವುದು ಕಷ್ಟ. ಸರ್ಕಾರವೂ ಕೂಡ ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿಯುವುದು ಸದ್ಯಕ್ಕೆ ಕಾಣುತ್ತಿಲ್ಲ. ಪ್ರತಿಭಟನಾಕಾರರಿಗೂ ಸೂಕ್ತ ನೇತೃತ್ವದ ಇಲ್ಲದೇ ಇರುವುದು ಸರ್ಕಾರಕ್ಕೆ ಅನುಕೂಲವಾಗಿದೆ. ಆದರೆ, ಇರಾನ್‌ನಲ್ಲಿಯ ಬೆಳವಣಿಗೆಯ ಬಗ್ಗೆ ಅಂತಾರಾಷ್ಟ್ರೀಯ ಬೆಂಬಲವೇ ಅವರಿಗೆ ಶ್ರೀರಕ್ಷೆಯಾಗಿದೆ. -ಸದಾಶಿವ ಕೆ.