Advertisement
2021-22ನೇ ಸಾಲಿನಲ್ಲಿ ಬರೋಬ್ಬರಿ 3,006 ಖಾತೆಗಳ 65.11 ಲಕ್ಷ ರೂ.ಗಳ ವ್ಯವಹಾರ ಗ್ರಾಮೀಣ ಭಾಗದಲ್ಲಿ ನಡೆದಿರುವುದು ಅಂಚೆ ಇಲಾಖೆಯ ಹೊಸ ಸೇವೆಯ ಸಾರ್ಥಕತೆಯಾಗಿದೆ. ಪುತ್ತೂರು ವಿಭಾಗದ 321 ಶಾಖಾ ಅಂಚೆ ಕಚೇರಿ, 70 ಉಪ ಅಂಚೆ ಕಚೇರಿ, 2 ಪ್ರಧಾನ ಅಂಚೆ ಕಚೇರಿಗಳು ಸೇರಿ 393 ಅಂಚೆ ಕಚೇರಿಗಳಲ್ಲಿ ಇದು ಗರಿಷ್ಠ ಸಾಧನೆ ಎನಿಸಿಕೊಂಡಿದ್ದು, ಅದಕ್ಕಾಗಿ ಇರಾ ಅಂಚೆ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ಡಿ.ಸುರೇಶ್ ರೈ ವಿಶೇಷ ಗೌರವಕ್ಕೂ ಪಾತ್ರರಾಗಿದ್ದಾರೆ.
Related Articles
Advertisement
ಇತರ ಸೇವೆಗಳಲ್ಲೂ ಮುಂದು
ಆರ್ಥಿಕ ವ್ಯವಹಾರದ ಜತೆಗೆ ಇತರ ಸೇವೆಗಳಲ್ಲೂ ಇರಾ ಅಂಚೆ ಕಚೇರಿಯ ಡಿ.ಸುರೇಶ್ ರೈ ವಿಶೇಷ ಸಾಧನೆ ಮಾಡಿದ್ದಾರೆ. ಅಂಚೆ ಕಚೇರಿಗಳಲ್ಲಿ ಚೈಲ್ಡ್ ಎನ್‌ರೋಲ್ ಮೆಂಟ್ ಲೈಟ್ ಕ್ಲೈಂಟ್(ಸಿಇಎಲ್‌ಸಿ) ಮೂಲಕ ಆಧಾರ್ ಕಾರ್ಡ್‌ಗೆ ಮೊಬೈಲ್ ಲಿಂಕ್ ಮಾಡುವ ಸೇವೆ ನೀಡುತ್ತಿದ್ದು, ಕಳೆದ ಸಾಲಿನಲ್ಲಿ 726 ಆಧಾರ್ ಮೊಬೈಲ್ ಲಿಂಕ್ ಮಾಡಿದ್ದಾರೆ. ಆದರೆ ಇದು ದ್ವಿತೀಯ ಗರಿಷ್ಠ ಸಾಧನೆಯಾಗಿದೆ. ಮಾಸಾಶನ ಪಡೆಯುವವರು ಪ್ರತೀ ವರ್ಷ ಪ್ರಮಾಣ ಪತ್ರ ನೀಡಬೇಕಿದ್ದು, ಅಂಚೆ ಇಲಾಖೆಯು ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ)-ಜೀವನ್ ಪ್ರಮಾಣ್ ಮಾಸಾಶನ ಪಡೆಯುವವರ ಮನೆಗೆ ತೆರಳಿ ಸೇವೆ ನೀಡುತ್ತಿದೆ. ಅದರಲ್ಲಿ ಇಡೀ ಜಿಲ್ಲೆಯಲ್ಲೇ 176 ಮಂದಿಗೆ ಸೇವೆ ನೀಡುವ ಮೂಲಕ ಇರಾ ಶಾಖಾ ಪೋಸ್ಟ್ ಮಾಸ್ಟರ್ ಜಿಲ್ಲೆಯಲ್ಲೇ ಗರಿಷ್ಠ ಸಾಧನೆ ಮಾಡಿದ್ದಾರೆ.
ಏನಿದು ಎಇಪಿಎಸ್?
ಅಂಚೆ ಕಚೇರಿಯ ಎಇಪಿಎಸ್ ಸೇವೆಯು ಆ್ಯಪ್ ಮೂಲಕ ನಡೆ ಯುತ್ತಿದ್ದು, ಆಧಾರ್ ಲಿಂಕ್ ಆಗಿರುವ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಮೊತ್ತವನ್ನು ಯಾವುದೇ ಊರಿನ ಗ್ರಾಹಕನು ಹಳ್ಳಿಯ ಅಂಚೆ ಕಚೇರಿಯಲ್ಲಿ ತೆಗೆಯಬಹುದಾಗಿದೆ. ಜತೆಗೆ ಹಣ ವರ್ಗಾವಣೆ, ಬ್ಯಾಲೆನ್ಸ್ ಚೆಕ್ ಮೊದಲಾದ ಸೇವೆಯನ್ನು ಇದರ ಮೂಲಕ ಪಡೆಯ ಬಹುದಾಗಿದೆ. ಎಇಪಿಎಸ್‌ನಲ್ಲಿ ಪುತ್ತೂರು ವಿಭಾಗದ 5 ಉಪವಿಭಾಗಗಳಲ್ಲಿ ಬಂಟ್ವಾಳ ಉತ್ತಮ ಸಾಧನೆ ಮಾಡಿದ್ದು, ಕಳೆದ ಸಾಲಿನ ದ್ವಿತೀಯ ಅಧಿಕ ವ್ಯವಹಾರವೂ ಇಲ್ಲೇ ನಡೆದಿದ್ದು, ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಮರೋಡಿ ಅಂಚೆ ಕಚೇರಿಯ ಶಾಖಾ ಪೋಸ್ಟ್ ಮಾಸ್ಟರ್ ಹರೀಶ್ 2,445 ಖಾತೆಗಳ 58.56 ಲಕ್ಷ ರೂ. ವ್ಯವಹಾರ ನಡೆಸಿದ್ದಾರೆ.
ವಿಶೇಷ ಗೌರವ
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಅಂಚೆ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುತ್ತಿದ್ದು, ಎಇಪಿಎಸ್, ಡಿಎಲ್‌ಸಿ, ಸಿಇಎಲ್‌ಸಿ ಮೊದಲಾದ ಸೇವೆ ಉತ್ತಮ ಸಾಧನೆಗಾಗಿ ಅಂಚೆ ಇಲಾಖೆಯು ವಿಶೇಷ ಗೌರವವನ್ನೂ ನೀಡಿದೆ. –ಡಿ.ಸುರೇಶ್ ರೈ ಶಾಖಾ ಪೋಸ್ಟ್ ಮಾಸ್ಟರ್, ಇರಾ
ಗರಿಷ್ಠ ಸಾಧನೆ
ಎಇಪಿಎಸ್ ಸೇರಿ ಅಂಚೆ ಇಲಾಖೆಯ ಎಲ್ಲ ಸೇವೆಗಳಲ್ಲೂ ಪರಿಣಾಮಕಾರಿಯಾಗಿ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಶಾಖಾ ಪೋಸ್ಟ್ ಮಾಸ್ಟರ್‌ಗಳಿಗೆ ಗುರಿಯನ್ನು ನೀಡಲಾಗುತ್ತಿದ್ದು, ಇರಾದವರು ಬಹುತೇಕ ಎಲ್ಲ ಸೇವೆಗಳಲ್ಲೂ ಗರಿಷ್ಠ ಸಾಧನೆ ಮಾಡುತ್ತಿದ್ದಾರೆ. ಎಇಪಿಎಸ್‌ನಲ್ಲಿ ಇಡೀ ಬಂಟ್ವಾಳ ಉಪವಿಭಾಗವೇ ಉತ್ತಮ ಸಾಧನೆ ಮಾಡುತ್ತಿದೆ. –ಲೋಕನಾಥ್ ಎಂ. ಅಂಚೆ ಸಹಾಯಕ ಅಧೀಕ್ಷಕರು, ಬಂಟ್ವಾಳ ಉಪವಿಭಾಗ
ಕಿರಣ್ ಸರಪಾಡಿ