ದೇವದುರ್ಗ: ಪ್ರೊಬೇಷನರಿ ಐಪಿಎಸ್ ಅಧಿಕಾರಿ ನಿಖೀಲ್ ಬಳ್ಳಾವರ್ ಸರ್ಕಾರಿ ಶಾಲೆ ಮಕ್ಕಳ ಜತೆ ಬಿಸಿಯೂಟ ಮಾಡುವ ಮೂಲಕ ಸರಳತೆ ಮೆರೆದಿದ್ದಾರೆ. ದೇವದುರ್ಗ ಪಟ್ಟಣದ ಠಾಣೆಯಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಖೀಲ್ ಬಳ್ಳಾವರ್, ತಾಲೂಕಿನ ಕೊಪ್ಪರ ಗ್ರಾಮಕ್ಕೆ ಲೋಕಸಭೆ ಚುನಾವಣೆ ನಿಮಿತ್ತ ಸೂಕ್ಷ್ಮ ಮತಗಟ್ಟೆಗಳ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಊಟದ ಸಮಯವಾದ್ದರಿಂದ ಶಿಕ್ಷಕರು ಊಟ ಮಾಡುವಂತೆ ಕೇಳಿಕೊಂಡಿದ್ದಾರೆ. ಬಿಸಿ ಮಿರ್ಚಿ ತರಿಸಲು ಮುಂದಾದರೂ ಬೇಡ ಎಂದು ಮಕ್ಕಳ ಜತೆಯೇ ಕುಳಿತು ಹರಟೆ ಹೊಡೆಯುತ್ತ ಪ್ಲಾಸ್ಟಿಕ್ ತಟ್ಟೆಯಲ್ಲೇ ಬಿಸಿಯೂಟ ಮಾಡಿದ್ದಾರೆ.
ಇದನ್ನು ಕಂಡ ಶಾಲಾ ಮಕ್ಕಳು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ ಅವರ ಸರಳತೆಗೆ ಮಾರು ಹೋಗಿದ್ದಾರೆ ಎನ್ನುತ್ತಾರೆ ಶಾಲೆ ಮುಖ್ಯಶಿಕ್ಷಕ ವಿನಾಯಕ ಮೂರ್ತಿ. ಉನ್ನತ ಅಧಿಕಾರಿಯ ಈ ಸರಳತೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.