Advertisement

IPL; ಯುಜಿ ಚಾಹಲ್ ರನ್ನು ಆರ್ ಸಿಬಿಯಿಂದ ಕೈಬಿಟ್ಟಿದ್ಯಾಕೆ? ಉತ್ತರ ನೀಡಿದ ಮೈಕ್ ಹೆಸನ್

11:36 AM Feb 20, 2024 | Team Udayavani |

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಮಾಜಿ ನಿರ್ದೇಶಕ ಮೈಕ್ ಹೆಸನ್ ಅವರು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ತಂಡದಿಂದ ಕೈಬಿಟ್ಟ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ಚಾಹಲ್ ರನ್ನು ಖರೀದಿ ಮಾಡಲು ಯೋಜಿಸಿದ್ದೆವು, ಆದರೆ ಹರಾಜಿನಲ್ಲಿ ಲೆಕ್ಕಾಚಾರಗಳು ಬುಡಮೇಲಾದವು ಎಂದಿದ್ದಾರೆ.

Advertisement

ಯುಜಿ ಚಾಹಲ್ ಅವರು ಆರ್ ಸಿಬಿ ಸಾರ್ವಕಾಲಿಕ ಟಾಪ್ 5 ಆಟಗಾರರಲ್ಲಿ ಒಬ್ಬರು ಎಂದು ಹೆಸನ್ ಬಣ್ಣಿಸಿದರು.

2022 ರ ಋತುವಿನ ಮೆಗಾ ಹರಾಜಿನ ಮೊದಲು, ತಂಡಗಳಿಗೆ ನಾಲ್ಕು ರಿಟೆನ್ಶನ್ ಅವಕಾಶ ನೀಡಲಾಗಿತ್ತು. ಆದರೆ ಆರ್ ಸಿಬಿ ಕೇವಲ ಮೂರು ಆಟಗಾರರನ್ನು ಉಳಿಸಿಕೊಳ್ಳಲು ಆಯ್ಕೆ ಮಾಡಿತು. ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್ವೆಲ್ (11 ಕೋಟಿ) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ) ರನ್ನು ಮಾತ್ರ ತಂಡದಲ್ಲಿ ಉಳಿಸಿಕೊಂಡಿತು.

ಚಾಹಲ್ ಅವರನ್ನು ತಂಡಕ್ಕೆ ಮತ್ತೆ ಕರೆಸಿಕೊಳ್ಳಲು ಹರಾಜಿನಲ್ಲಿ ಆರ್ ಸಿಬಿ ಪ್ರಯತ್ನಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹರಾಜಿನಲ್ಲಿ ಚಾಹಲ್ ಹೆಸರು ಬಂದಾಗ ಆರ್ ಸಿಬಿ ಒಂದೇ ಒಂದೇ ಬಿಡ್ ಮಾಡಲಿಲ್ಲ. ಕೊನೆಗೆ ರಾಜಸ್ಥಾನ ರಾಯಲ್ಸ್ ತಂಡವು ಚಾಹಲ್ ಅವರನ್ನು 6.50 ಕೋಟಿ ರೂ ಗೆ ಖರೀದಿ ಮಾಡಿತು.

“ನಾವು ಹರಾಜಿನಲ್ಲಿ ಹರ್ಷಲ್ ಪಟೇಲ್ ಮತ್ತು ಯುಜಿ ಇಬ್ಬರನ್ನೂ ಮರಳಿ ಖರೀದಿಸಲು ಬಯಸಿದ್ದರಿಂದ ನಾವು ಕೇವಲ ಮೂರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದೆವು. ಕೇವಲ ಮೂರು ಆಟಗಾರರನ್ನು ಉಳಿಸಿಕೊಂಡಿದ್ದರಿಂದ ನಮಗೆ ಹೆಚ್ಚುವರಿ ನಾಲ್ಕು ಕೋಟಿ ಉಳಿಯಿತು” ಎಂದು ಹೆಸನ್ ಕಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

Advertisement

“ಬಹುಶಃ ನಾನು ಈಗಲೂ ಹತಾಶೆಗೊಂಡಿರುವ ವಿಷಯವೆಂದರೆ ಅವರು ಐಪಿಎಲ್‌ ನಲ್ಲಿ ಅತ್ಯುತ್ತಮ ಆಟಗಾರರಲ್ಲೊಬ್ಬರಾಗಿದ್ದರೂ ಅಗ್ರ ಎರಡು ಮಾರ್ಕ್ಯೂ ಪಟ್ಟಿಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಅದು ಹಾಸ್ಯಾಸ್ಪದವಾಗಿತ್ತು. ಅವರು ಹರಾಜು ಪಟ್ಟಿಯಲ್ಲಿ ಅವರು 65ನೇ ಸಂಖ್ಯೆಯಲ್ಲಿದ್ದರು, ಇದು ನಮಗೆ ಕಷ್ಟಕರವಾಗಿತ್ತು” ಎಂದರು.

“ನಾವು ಅಣಕು ಹರಾಜಿನಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದೇವೆ. ಹರ್ಷಲ್ ಮೊದಲ ಮೂರು ಸೆಟ್‌ಗಳಲ್ಲಿದ್ದರು ಆದರೆ ಯುಜಿ ಕೆಳಗಿಳಿದಿದ್ದರು. ನಾವು ನಮ್ಮ ಎಲ್ಲಾ ಹಣವನ್ನು ಉಳಿಸಿ ಆರನೇ ಸೆಟ್‌ ಗಾಗಿ ಕಾಯುತ್ತಿದ್ದರೆ, ನಮಗಿಂತ ಹೆಚ್ಚು ಹಣವನ್ನು ಹೊಂದಿರುವ ಇತರ ಐದು ತಂಡಗಳಿವೆ ಎಂದು ನಮಗೆ ತಿಳಿದಿತ್ತು. ಅದಕ್ಕೂ ಮೊದಲು ನಾವು ಎಲ್ಲಾ ಬೌಲರ್‌ ಗಳನ್ನು ಕೈಬಿಟ್ಟೆವು. ಒಂದು ವೇಳೆ ಯುಜಿಯನ್ನು ಪಡೆಯಲು ವಿಫಲರಾಗಿದ್ದರೆಆಗ ನಾವು ಲೆಗ್-ಸ್ಪಿನ್ನರ್ ಇಲ್ಲದೆ ಉಳಿಯುತ್ತಿದ್ದೆವು” ಎಂದು ಹೆಸನ್ ಹೇಳಿದರು.

2022ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ಲಂಕಾದ ಆಲ್ ರೌಂಡ್ ಸ್ಪಿನ್ನರ್ ವಾನಿಂದು ಹಸರಂಗ ಅವರನ್ನು ಖರೀದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next