ನವದೆಹಲಿ: ಕೊರೊನಾ ವಿಶ್ವವ್ಯಾಪಿ ತಾಂಡವವಾಡುತ್ತಿದೆ. ವಿಶ್ವದ ಎಲ್ಲ ಕ್ರೀಡಾಕೂಟಗಳು ಸ್ಥಗಿತಗೊಂಡಿದೆ. ಭಾರತದ ಅತ್ಯಂತ ಜನಪ್ರಿಯ ಚುಟುಕು ಲೀಗ್ ಐಪಿಎಲ್ ಟಿ20 ಕೂಟ ಮುಂದೂಡಿಕೆಯಾಗಿತ್ತು, ಈ ಕೂಟವನ್ನು ಏ.15ರ ನಂತರ ನಡೆಸಲಾಗುತ್ತದೆ ಎಂದು ಹೇಳಲಾಗಿದೆಯಾದರೂ ಆನಂತರವೂ ಕೂಟ ನಡೆಯುವುದು ಅನುಮಾನ ಎನ್ನಲಾಗಿದೆ. ಭಾರತದಲ್ಲಿ ಕೊರೊನಾ ದಿಂದಾಗಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದ ಬೆನ್ನಲ್ಲೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇಂತಹದೊಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ನೋಡಿ ತೀರ್ಮಾನ: “ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ ಆಯೋಜಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ’ ಎಂದು ಸಚಿವ ರಿಜಿಜು ಅಭಿಪ್ರಾಯ ಪಟ್ಟಿದ್ದಾರೆ.
ಗುರುವಾರ ಮಾತನಾಡಿದ ಅವರು, “ಏ.15ಕ್ಕೆ ಹೊಸ ಸಲಹೆ ಮತ್ತು ಮಾರ್ಗಸೂಚಿಗಳೊಂದಿಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಜನರ ಆರೋಗ್ಯ ಸ್ಥಿತಿಯನ್ನು ಮೊದಲು ಗಮನ ದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಾವಿರಾರು ವೀಕ್ಷಕರು ಕ್ರಿಕೆಟ್ ವೀಕ್ಷಿಸಲು ಆಗಮಿಸುತ್ತಾರೆ. ಇಲ್ಲಿ ಕ್ರಿಕೆಟ್ ಅಥವಾ ಸಂಸ್ಥೆ ಮೊದಲಲ್ಲ, ದೇಶದ ಎಲ್ಲ ಜನರ ಆರೋಗ್ಯದ ಕಾಳಜಿಯೇ ಮೊದಲಾಗುತ್ತದೆ’ ಎಂದು ರಿಜಿಜು ತಿಳಿಸಿದರು.
ಮಾ.29ಕ್ಕೆ ಐಪಿಎಲ್ ಆರಂಭವಾಗಬೇಕಿತ್ತು, ದೇಶವ್ಯಾಪಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹಠಾತ್ ಐಪಿಎಲ್ ಅನ್ನು ಏ.15ಕ್ಕೆ ಮುಂದೂಡಿತ್ತು. ಮತ್ತೂಂದು ಕಡೆ ದಿಲ್ಲಿ ಸರ್ಕಾರ ಮಾ. 31ರ ತನಕ ದಿಲ್ಲಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಬೆನ್ನಲ್ಲೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಗಳು ಕ್ರಮವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಐಪಿಎಲ್ ಆಯೋಜಿಸಲು ಸಾಧ್ಯವಾಗುವುದಿಲ್ಲ, ಪಂದ್ಯಗಳನ್ನು ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದನ್ನು ಸ್ಮರಿಸಬಹುದು. ಎರಡು ದಿನಗಳ ಹಿಂದೆಯಷ್ಟೇ ಬಿಸಿಸಿಐ ಮುಂಬೈನಲ್ಲಿರುವ ಕೇಂದ್ರ ಕಚೇರಿಯನ್ನೇ ಮುಚ್ಚಿತ್ತು, ನೌಕರರಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚಿಸಿತ್ತು.