Advertisement
ಸದ್ಯ ಆರ್‌ಸಿಬಿ ಆರರಲ್ಲಿ 3 ಜಯ ಸಾಧಿಸಿದರೆ, ರಾಜಸ್ಥಾನ್ 6 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ. ಕೊನೆಯ ಪಂದ್ಯದಲ್ಲಿ ಬೆಂಗಳೂರು ಟೀಮ್ ಪಂಜಾಬ್ ಕಿಂಗ್ಸ್‌ಗೆ 24 ರನ್ನುಗಳ ಸೋಲುಣಿಸಿದರೆ, ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ರಾಜಸ್ಥಾನ್ 155 ರನ್ ಗಳಿಸಲಾಗದೆ ಲಕ್ನೋಗೆ ಶರಣಾಗಿತ್ತು.
ಮತ್ತೆ ಆರ್‌ಸಿಬಿಯ ಹಸಿರು ಜೆರ್ಸಿಯ ದಾಖಲೆಯತ್ತ ಬರುವುದಾದರೆ… 2011ರಿಂದ ಮೊದಲ್ಗೊಂಡು ಆರ್‌ಸಿಬಿಯ “ಗೋ ಗ್ರೀನ್’ ಅಭಿಯಾನ ನಡೆಯುತ್ತ ಬಂದಿದೆ. ಸೀಸನ್‌ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯೊಂದಿಗೆ ಆಡುವ ಈ ಸಂಪ್ರದಾಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಯಶಸ್ಸಿನ ವಿಚಾರದಲ್ಲಿ ಆರ್‌ಸಿಬಿಗೆ ಯಾವುದೇ ಲಾಭವಾಗಿಲ್ಲ. ಹಸಿರು ಜೆರ್ಸಿಯಲ್ಲಿ ಅದು ಸೋತದ್ದೇ ಹೆಚ್ಚು. ಈವರೆಗೆ ಆರ್‌ಸಿಬಿ 12 ಸಲ ಹಸಿರು ಜೆರ್ಸಿಯಲ್ಲಿ ಆಡಿದೆ. ಗೆದ್ದದ್ದು ಮೂರರಲ್ಲಿ ಮಾತ್ರ. ಎಂಟರಲ್ಲಿ ಸೋಲೇ ಸಂಗಾತಿಯಾಗಿದೆ. 2015ರ ಡೆಲ್ಲಿ ಎದುರಿನ ಪಂದ್ಯ ರದ್ದುಗೊಂಡಿತ್ತು.
ಎಂಟರಲ್ಲಿ ಒಂದು ಸೋಲು ರಾಜಸ್ಥಾನ್ ರಾಯಲ್ಸ್ ವಿರುದ್ಧವೇ ಎದುರಾಗಿರುವುದನ್ನು ಮರೆಯುವಂತಿಲ್ಲ. ಅದು 2018ರ ಮುಖಾಮುಖೀ. ಬೆಂಗಳೂರಿನಲ್ಲಿ ಆಡಲಾದ ಈ ಪಂದ್ಯದಲ್ಲಿ ರಾಜಸ್ಥಾನ್ 19 ರನ್ನುಗಳ ಜಯ ಸಾಧಿಸಿತ್ತು.
Related Articles
Advertisement
3 ವರ್ಷಗಳ ಬಳಿಕ…ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಆರ್‌ಸಿಬಿ 3 ವರ್ಷಗಳ ಬಳಿಕ ಮೊದಲ ಸಲ ಹಸಿರು ಜೆರ್ಸಿಯಲ್ಲಿ ಆಡಲಿಳಿಯುತ್ತಿದೆ. ಕಳೆದ 3 ಸೀಸನ್ ಪಂದ್ಯಗಳು ದುಬಾೖ, ಅಬುಧಾಬಿ ಮತ್ತು ಮುಂಬೈಯಲ್ಲಿ ನಡೆದಾಗಲೂ ಆರ್‌ಸಿಬಿ “ಗೋ ಗ್ರೀನ್’ ಅಭಿಯಾನದ ನಂಟನ್ನು ಕಡಿದುಕೊಂಡಿ ರಲಿಲ್ಲ. ಆದರೆ ಯುಎಇಯ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿತು. ಚೆನ್ನೈ ವಿರುದ್ಧ 8 ವಿಕೆಟ್, ಕೆಕೆಆರ್ ವಿರುದ್ಧ 9 ವಿಕೆಟ್‌ಗಳ ದೊಡ್ಡ ಸೋಲನ್ನೇ ಕಂಡಿತು. ಕಳೆದ ವರ್ಷ ಮುಂಬಯಿಯಲ್ಲಿ ಹೈದರಾಬಾದನ್ನು 67 ರನ್ನುಗಳ ಮಣಿಸಿದ ಆರ್‌ಸಿಬಿಗೆ ಮತ್ತೆ “ಗ್ರೀನ್ ಲಕ್’ ಒಲಿಯಿತು. ಗ್ರೀನ್ ಜೆರ್ಸಿಯಲ್ಲಿ ಆರ್‌ಸಿಬಿ ದೊಡ್ಡ ಮೊತ್ತ ಹಾಗೂ ಕನಿಷ್ಠ ಮೊತ್ತದ ದಾಖಲೆಗಳೆರಡನ್ನೂ ಬರೆದಿದೆ. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 3ಕ್ಕೆ 248 ರನ್ ಒಟ್ಟುಗೂಡಿಸಿದರೆ, 2021ರಲ್ಲಿ ಕೆಕೆಆರ್ ವಿರುದ್ಧ 92ಕ್ಕೆ ಆಲೌಟ್ ಆಗಿತ್ತು. ಗುಜರಾತ್ ವಿರುದ್ಧ ಎಬಿ ಡಿ ವಿಲಿಯರ್ 52 ಎಸೆತಗಳಿಂದ ಅಜೇಯ 129 ರನ್ ಗಳಿಸಿದ್ದು ಹಸಿರು ಬ್ಯಾಟರ್‌ನ ದಾಖಲೆ. ಕಳೆದ ವರ್ಷ ಹೈದರಾಬಾದ್ ವಿರುದ್ಧ ವನಿಂದು ಹಸರಂಗ 18ಕ್ಕೆ 5 ವಿಕೆಟ್ ಕೆಡವಿದ್ದು ಬೌಲಿಂಗ್ ದಾಖಲೆಯಾಗಿದೆ.