Advertisement
ಗುರುವಾರದ ಪಂದ್ಯದಲ್ಲಿ ಆತಿಥೇಯ ಗುಜರಾತ್ ನೀಡಿದ 200 ರನ್ನುಗಳ ಕಠಿನ ಗುರಿಯನ್ನು ಸಾಧಿಸಲು ಪಂಜಾಬ್‌ಗ ಸಾಧ್ಯವಿಲ್ಲ ಎಂದೇ ನಂಬಲಾಗಿತ್ತು. 13ನೇ ಓವರ್‌ನಲ್ಲಿ 112ಕ್ಕೆ 5 ವಿಕೆಟ್ ಉರುಳಿ ಹೋಗಿತ್ತು. ಆದರೆ ಒಂದು ಕಡೆ ಕ್ರೀಸ್ ಆಕ್ರಮಿಸಿಕೊಂಡ ಶಶಾಂಕ್ ಸಿಂಗ್ ಕೇವಲ 29 ಎಸೆತಗಳಿಂದ ಅಜೇಯ 61 ರನ್ ಬಾರಿಸಿ (6 ಬೌಂಡರಿ, 4 ಸಿಕ್ಸರ್) ಪಂಜಾಬ್‌ಗ 3 ವಿಕೆಟ್‌ಗಳ ಅಮೋಘ ಗೆಲುವು ತಂದಿತ್ತದ್ದು ಈಗ ಇತಿಹಾಸ. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವವೂ ಒಲಿದು ಬಂತು.
ಈ ಶಶಾಂಕ್ ಸಿಂಗ್ ಕುರಿತಾದ ಸ್ವಾರಸ್ಯವನ್ನು ಮೆಲುಕು ಹಾಕಲು ಇದು ಸುಸಮಯ. ಕಳೆದ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಮಾಲಕಿ ಪ್ರೀತಿ ಜಿಂಟಾ ತಪ್ಪು ಆಟಗಾರನ ಆಯ್ಕೆ ಮೂಲಕ ಎಡವಟ್ಟು ಮಾಡಿಕೊಂಡಿದ್ದರು. ಪಂಜಾಬ್ ಫ್ರಾಂಚೈಸಿ ಕೋಲ್ಕತಾ ಮೂಲದ ಯುವ ಶಶಾಂಕ್ ಸಿಂಗ್ ಅವರನ್ನು ಖರೀದಿಸಲು ಬಯಸಿತ್ತು. ಆದರೆ ಮಾಹಿತಿಯ ಎಡವಟ್ಟಿನಿಂದಾಗಿ 32 ವರ್ಷದ ಛತ್ತೀಸ್‌ಗಢದ ಶಶಾಂಕ್ ಸಿಂಗ್ ಅವರನ್ನು ಖರೀದಿಸಿತು. ಬಳಿಕ ಪ್ರೀತಿ ಜಿಂಟಾ ಪಶ್ಚಾತ್ತಾಪಟ್ಟ ದೃಶ್ಯ ವೈರಲ್ ಆಗಿತ್ತು. ಆದರೆ ಇದೀಗ ಪ್ರೀತಿ ಮೊಗದಲ್ಲಿ ಮಂದಹಾಸ ಅರಳಿದೆ. ಅವರು ತಪ್ಪಾಗಿ ಆಯ್ಕೆ ಮಾಡಿದ ಶಶಾಂಕ್ ಸಿಂಗ್ ಅವರೇ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದಾರೆ! 3 ತಂಡಗಳ ಆಟಗಾರ
ಹಾರ್ಡ್ ಹಿಟ್ಟಿಂಗ್ ಆಗಿರುವ ಆಲ್‌ರೌಂಡರ್ ಶಶಾಂಕ್ ಸಿಂಗ್ ಅವರ ಕ್ರಿಕೆಟ್ ಪಯಣ ಹೂವಿನ ಹಾದಿಯೇನೂ ಆಗಿರಲಿಲ್ಲ. ಮೊದಲು ಮುಂಬಯಿ, ಬಳಿಕ ಪುದುಚೇರಿ, ಈಗ ಛತ್ತೀಸ್‌ಗಢ ಪರ ಆಡುತ್ತಿದ್ದಾರೆ. 2015ರಲ್ಲಿ ಮೊದಲ ಸಲ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಮುಂಬಯಿ ಪರ ಆಡಿದರು. ಆದರೆ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳುವ ಅವಕಾಶ ಸಿಗಲಿಲ್ಲ. ಹೀಗಾಗಿ ಪುದುಚೇರಿ ಪರ ಲಿಸ್ಟ್ ಎ ಕ್ರಿಕೆಟ್ ಆಡತೊಡಗಿದರು. ಆದರೆ 2019-20ರಲ್ಲಿ ಛತ್ತೀಸ್‌ಗಢ ಪರ ಆಡತೊಡಗಿದ್ದು ಶಶಾಂಕ್ ಪಾಲಿಗೆ ಟರ್ನಿಂಗ್ ಪಾಯಿಂಟ್ ಎನಿಸಿತು. 2020-21ರಲ್ಲಿ ಛತ್ತೀಸ್‌ಗಢ ತಂಡ ಮುಂಬಯಿ ವಿರುದ್ಧ “ವಿಜಯ್ ಹಜಾರೆ ಟ್ರೋಫಿ’ ಪಂದ್ಯ ಗೆಲ್ಲುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.
Related Articles
Advertisement
2022ರಿಂದ ಐಪಿಎಲ್ಶಶಾಂಕ್ ಸಿಂಗ್ ಅವರ ಐಪಿಎಲ್ ಆಟ ಆರಂಭಗೊಂಡದ್ದು 2022ರಲ್ಲಿ. ಆಂದಿನ ತಂಡ ಸನ್‌ರೈಸರ್ ಹೈದರಾಬಾದ್. ಲಾಕಿ ಫರ್ಗ್ಯುಸನ್ ಅವರಿಗೆ ಹ್ಯಾಟ್ರಿಕ್ ಸಿಕ್ಸರ್‌ಗಳ ಬಿಸಿ ಮುಟ್ಟಿಸಿದ ಶಶಾಂಕ್, 6 ಎಸೆತಗಳಿಂದ 25 ರನ್ ಸಿಡಿಸಿದ್ದರು. ಅಂದಿನ ಸೀಸನ್‌ನಲ್ಲಿ 10 ಪಂದ್ಯ ಆಡಿದರು. ಆದರೆ ಒಟ್ಟು ಸಾಧನೆ ಭರವಸೆಯದ್ದಾಗಿ ರಲಿಲ್ಲ. ಹೀಗಾಗಿ 2023ರ ಹರಾಜಿನಲ್ಲಿ ಮಾರಾಟವಾಗಲಿಲ್ಲ.ಆದರೆ ಈ ಬಾರಿ ಹೆಸರಿನ ಗೊಂದಲ ದಿಂದ ಲಾಭವೇ ಆದೀತು…! ಶಶಾಂಕ್-ಅಶುತೋಷ್ ಸಾಹಸ ಮೆಚ್ಚಿದ ಶಿಖರ್ ಧವನ್
ಪಂಜಾಬ್‌ಗ ರೋಚಕ ಗೆಲುವು ತಂದಿತ್ತ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮ ಅವರ ಬ್ಯಾಟಿಂಗ್ ಸಾಹಸವನ್ನು ನಾಯಕ ಶಿಖರ್ ಧವನ್ ಪ್ರಶಂಸಿಸಿದ್ದಾರೆ. “ಇದೊಂದು ಅತ್ಯಂತ ನಿಕಟವಾಗಿ ನಡೆದ ರೋಚಕ ಪಂದ್ಯ. ಹುಡುಗರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನಂಬಲಾಗದ ಗೆಲುವು ತಂದಿತ್ತರು. ದೊಡ್ಡ ಮೊತ್ತದ ಚೇಸಿಂಗ್ ಆದ ಕಾರಣ ಉತ್ತಮ ಅಡಿಪಾಯ ನಿರ್ಮಿಸುವುದು ನಮ್ಮ ಯೋಜನೆ ಆಗಿತ್ತು. ಆದರೆ ನಾವು ಆರಂಭಿಕ ಕುಸಿತಕ್ಕೆ ಸಿಲುಕಿದೆವು. ಕೊನೆಯಲ್ಲಿ ಶಶಾಂಕ್ ಅದ್ಭುತ ಬ್ಯಾಟಿಂಗ್ ನಡೆಸಿದರು’ ಎಂಬುದಾಗಿ ಧವನ್ ಹೇಳಿದರು. “ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಲಯ ಹಾಗೂ ಆವೇಗವನ್ನು ಕಾಯ್ದುಕೊಂಡು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಶಾಂಕ್ ಅವರದು ಕ್ಲಾಸ್ ಆಟವಾಗಿತ್ತು. ಅವರ ಟೈಮಿಂಗ್ಸ್ ಅತ್ಯುತ್ತಮವಾಗಿತ್ತು. ಯಾವುದೇ ಶ್ರಮ ಹಾಕದೆ ಚೆಂಡನ್ನು ಬಡಿದಟ್ಟುತ್ತಿದ್ದರು. ಕೊನೆಯ ವರೆಗೂ ಯಾವುದೇ ಒತ್ತಡವನ್ನು ಹೇರಿಕೊಳ್ಳಲಿಲ್ಲ. ಎಲ್ಲವನ್ನೂ ಬಹಳ ಕೂಲ್ ಆಗಿ ನಿಭಾಯಿಸಿದರು’ ಎಂದರು. ಈ ಸಂದರ್ಭದಲ್ಲಿ ಮಾತಾಡಿದ ಅಶುತೋಷ್ ಶರ್ಮ, “ಪಂಜಾಬ್ ತಂಡ ನನ್ನ ಮೇಲಿಟ್ಟ ನಂಬಿಕೆಗೆ ಧನ್ಯವಾದಗಳು. ತಂಡದ ಗೆಲುವು ಅತ್ಯಂತ ಖುಷಿ ಕೊಟ್ಟಿದೆ. ವೈಯಕ್ತಿಕ ಆಟ ದಾಖಲಾಗಿದೆ, ಆದರೆ ಎಲ್ಲಕ್ಕಿಂತ ಮಿಗಿಲಾದುದು ತಂಡದ ಗೆಲುವು’ ಎಂದರು. “ಕೂಟದ ಬಳಿಕ ಕೋಚ್ ಅಮಯ್ ಖುರಾಸಿಯ ಅವರನ್ನು ಭೇಟಿಯಾಗಿ ಇನ್ನಷ್ಟು ಬ್ಯಾಟಿಂಗ್ ಪಾಠಗಳನ್ನು ಕಲಿಯಬೇಕಿದೆ. ಸಿಕ್ಕಿದ ಯಾವ ಅವಕಾಶವನ್ನೂ ವ್ಯರ್ಥಗೊಳಿಸಬೇಡ ಎಂಬುದು ಅಮಯ್ ಸರ್ ಹೇಳಿದ ಪಾಠ. ಇಂದು ಇದು ಸಾಕಾರಗೊಂಡಿದೆ’ ಎಂದು 17 ಎಸೆತಗಳಿಂದ 31 ರನ್ ಬಾರಿಸಿದ ಅಶುತೋಷ್ ಹೇಳಿದರು.