Advertisement
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕುಳಿತು ಯಾವತ್ತೇ ಕ್ರಿಕೆಟ್ ಪಂದ್ಯಗಳನ್ನು ವರದಿ ಮಾಡಲು ಹೋದರೂ, ಈ ಮಾಯೆ ಎನ್ನುವ ಪದ ಬಹಳ ನೆನಪಾಗುತ್ತದೆ. ಪಂದ್ಯವನ್ನು ವರದಿ ಮಾಡಲು ಲ್ಯಾಪ್‌ಟಾಪ್ ಹಿಡಿದು ಮೆಟ್ರೊ ಹತ್ತುವಾಗಿಂದ ಹಿಡಿದು, ಅಂತಿಮ ವರದಿಯನ್ನು ಬರೆದು ಕಚೇರಿಗೆ ಕಳುಹಿಸಿ, ಮರಳಿ ಮನೆ ಬಾಗಿಲು ಬಡಿಯುವವರೆಗೂ ಮಾಯೆಯ ಗುಂಗು ಹಿಡಿದಿರುತ್ತದೆ. ಪಂದ್ಯದ ಅಷ್ಟೂ ಹೊತ್ತು ನಾನೊಂದು ಮಾಯಾನಗರಿಯಲ್ಲಿರುತ್ತೇನೆ. ಪಂದ್ಯದ ಹಿಂದಿನ ದಿನ ಚಿನ್ನಸ್ವಾಮಿ ಮೈದಾನ ಮತ್ತು ಅದರ ಆಸುಪಾಸು ನೋಡಿದರೆ ಕಾಣುವ ದೃಶ್ಯಗಳೇ ಬೇರೆ. ಪಂದ್ಯ ಇವತ್ತು ಶುರುವಾಗುತ್ತೆ ಎಂದುಕೊಂಡರೆ, ಹೆಚ್ಚು ಕಡಿಮೆ ಬೆಳಗ್ಗೆಯಿಂದಲೇ ಮೈದಾನದ ಸ್ವರೂಪ ಬದಲಾಗುತ್ತದೆ. ದಿಢೀರನೆ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಕಾಣಿಸಿಕೊಳ್ಳುತ್ತಾರೆ. ನಾಗರಿಕರಲ್ಲಿ ಸಣ್ಣಗೆ ಭೀತಿಯ ವಾತಾವರಣ ತುಂಬಿಕೊಳ್ಳುತ್ತದೆ. ಆ ಜಾಗದಲ್ಲಿ ಟ್ರಾಫಿಕ್ ದಟ್ಟವಾಗುತ್ತದೆ. ವಾಹನಗಳ ಕಾರಣಕ್ಕಲ್ಲ. ಅಲ್ಲಿ ನಡೆದಾಡುವವರ ಸಂಖ್ಯೆ ಒಂದೇ ಬಾರಿ ಸಾವಿರಾರು ಪಟ್ಟು ಏರುವ ಕಾರಣಕ್ಕೆ.
Related Articles
Advertisement
ಆರ್‌ಸಿಬಿಯ ಟೀಶರ್ಟ್‌ಗಳನ್ನು ಬಡವರು, ಶ್ರೀಮಂತರು, ಮೇಲ್ವರ್ಗ, ಕೆಳವರ್ಗ, ವಿದ್ಯಾವಂತ, ದಡ್ಡ ಎಂಬ ಭೇದಭಾವಗಳಿಲ್ಲದೇ ಎಲ್ಲರೂ ಧರಿಸುವುದನ್ನು ನೀವು ನೋಡುತ್ತೀರಿ. ಅಷ್ಟರಲ್ಲಿ ಜನ ಮೈದಾನಕ್ಕೆ ತುಂಬಿಕೊಳ್ಳುತ್ತಾರೆ. ಅರ್ಧಗಂಟೆ ಹಿಂದೆ ಖಾಲಿಯಿದ್ದ ಮೈದಾನ, 7 ಗಂಟೆ ಆಗುತ್ತಲೇ ಭರ್ತಿ ಆಗಿರುವುದನ್ನು ಕಂಡು ನೀವು ತಬ್ಬಿಬ್ಟಾಗುತ್ತೀರಿ. ಈ ಜನ ಎಲ್ಲಿಂದ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ, ಇಷ್ಟು ದಿನ ಎಲ್ಲಿದ್ದರು ಎಂಬ ಪ್ರಶ್ನೆ ತುಂಬಿಕೊಳ್ಳುತ್ತದೆ.
ಪಂದ್ಯ ಶುರುವಾಗುವುದು ರಾತ್ರಿ 8 ಗಂಟೆಗೆ. ಅಲ್ಲಿಯವರೆಗೆ ಮೈದಾನದ ಸ್ಥಿತಿಗತಿಯೇ ಬೇರೆ. ಅದೊಂದು ಯಕ್ಷ ಲೋಕ. 4 ದೊಡ್ಡ ದೊಡ್ಡ ಫ್ಲಡ್‌ಲೈಟ್‌ಗಳು ಹತ್ತಿಕೊಂಡು ಇಡೀ ಮೈದಾನವನ್ನು ಬೆಳಗಲು ಶುರು ಮಾಡುತ್ತವೆ. ಮೈದಾನದಲ್ಲಿ ಅಂಕಣವನ್ನು ಸರಿ ಮಾಡುವ ಸಿಬ್ಬಂದಿ ಏನೇನೋ ವ್ಯವಸ್ಥೆ ಮಾಡುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲವೊಂದು ಕಡೆ ಮೈದಾನದ ಸಣ್ಣಪುಟ್ಟ ಏರುಪೇರನ್ನೂ ಗಮನಿಸಿ ಸರಿ ಮಾಡುವ ಕೆಲಸ ನಡೆಯುತ್ತಿರುತ್ತದೆ. ಕೂಲಿಕಾರ್ಮಿಕರು, ಬಡವರು ಆ ಯಕ್ಷಲೋಕದೊಳಕ್ಕೆ ಸಲೀಸು ಪ್ರವೇಶ ಪಡೆದಿರುತ್ತಾರೆ. ವಿಶ್ವದ ಅತಿಶ್ರೇಷ್ಠ ಆಟಗಾರರು ಒಂದು ಅಭ್ಯಾಸ ನಡೆಸುತ್ತಿದ್ದರೆ, ಅದರ ಪರಿವೆಯೇ ಇಲ್ಲದೇ ನೌಕರರು ಮೈದಾನವನ್ನು ಸ್ವತ್ಛ ಮಾಡುವ, ಸಿದ್ಧ ಮಾಡುವ ಕಾರ್ಯಭಾರದಲ್ಲಿ ಮಗ್ನರಾಗಿರುತ್ತಾರೆ. ಆ ಆಟಗಾರರ ದರ್ಶನ ಮಾಡಲು ವರ್ಷಗಟ್ಟಲೆ ಕಷ್ಟಪಡುವ ಅಭಿಮಾನಿಗಳ ಮಧ್ಯೆ, ಈ ಕಾರ್ಮಿಕರು ಪಕ್ಕದಲ್ಲೇ ಓಡಾಡುತ್ತಾರೆ. ಅವರ್ಯಾರೂ ಆಟಗಾರರ ಹಸ್ತಾಕ್ಷರ ಕೇಳುವುದಿಲ್ಲ, ಅವರ ಕೈಕುಲುಕುವುದಿಲ್ಲ, ಪಕ್ಕದಲ್ಲಿರುವುದು ಕೋಟ್ಯಂತರ ಮಂದಿಯ ಆರಾಧ್ಯ ದೈವಗಳು ಎಂಬ ಅರಿವೂ ಇಲ್ಲದಂತೆ ತಮ್ಮ ಕೆಲಸದಲ್ಲಿ ತಾವು ನಿರತರಾಗಿರುತ್ತಾರೆ. ಆಗ ಭಗವದ್ಗೀತೆಯ ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಷು ಕದಾಚನ ನೆನಪಾಗುತ್ತದೆ.
ಅಷ್ಟರಲ್ಲಿ ರಾತ್ರಿ 7.30 ಗಂಟೆಯಾಗುತ್ತದೆ. ಟಾಸ್ ಹಾರಿಸಲು ಅಧಿಕಾರಿಗಳು ಆಗಮಿಸುತ್ತಾರೆ, ಎರಡೂ ತಂಡಗಳ ನಾಯಕರು ತಮ್ಮ ತಂಡಗಳ ಪಟ್ಟಿಯನ್ನು ಹಿಡಿದು ಹಾಜರಾಗುತ್ತಾರೆ. ಆಗ ಇಡೀ ಮೈದಾನದ ಸ್ವರೂಪ ಪಂಚತಾರಾ ಹೋಟೆಲ್‌ನಂತೆ ಬದಲಾಗುತ್ತದೆ. ಮೈದಾನದ ಹೊರಗೆ ಪೊಲೀಸರು ನಿಟ್ಟುಸಿರು ಬಿಡುತ್ತಾರೆ. ಇನ್ನು ಮೂರೂವರೆ ಗಂಟೆಕಾಲ ಅವರಿಗೆ ನೆಮ್ಮದಿ.
ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದರೆ ರಾತ್ರಿ 11.30ಕ್ಕೆ ಪಂದ್ಯ ಮುಗಿಯುತ್ತದೆ. ಆರ್‌ಸಿಬಿ ಗೆದ್ದಿದ್ದರೆ ಪ್ರೇಕ್ಷಕರ ಹಾವಭಾವ ಒಂದು ರೀತಿಯಿರುತ್ತದೆ, ಸೋತಿದ್ದರೆ ಇನ್ನೊಂದು ತೆರನಾಗಿ ಬದಲಾಗುತ್ತದೆ. ಆದರೂ ಆರ್‌ಸಿಬಿ ಎಂಬ ತಾರಕಸ್ವರದ ಕೂಗಿಗೆ ಬರವಿರುವುದಿಲ್ಲ. ಅಷ್ಟರಲ್ಲಿ ಪ್ರೇಕ್ಷಕರ ಅಭಿಮಾನದ ತೀವ್ರತೆ ಕಡಿಮೆಯಾಗಿರುತ್ತದೆ. ಎಲ್ಲರಿಗೂ ಮನೆಗೆ ಹೋಗುವ ತರಾತುರಿ. ಬಹುತೇಕರು ಮೆಟ್ರೊ ಹತ್ತಿಕೊಳ್ಳುವ ಹೋರಾಟದಲ್ಲಿರುತ್ತಾರೆ. ಮೆಟ್ರೊ ಸಿಬ್ಬಂದಿ ಎಂದಿನ ನಿಯಮವನ್ನು ತುಸು ಸಡಿಲಿಸಿ ಜನರನ್ನು ಬೇಗ ಬೇಗ ಒಳಬಿಡುತ್ತಾರೆ. ಟಿಕೆಟ್‌ಗಳ ಜಾಗದಲ್ಲಿ ಎಂದಿನಂತೆ ಬಿಲ್ಲೆ ಇರುವುದಿಲ್ಲ, ಬದಲಿಗೆ ಬಸ್‌ನಲ್ಲಿರುವ ಕಾಗದವಿರುತ್ತದೆ.
ಸ್ಮಶಾನ ಮೌನ: ಐಪಿಎಲ್ ಪಂದ್ಯ ಮುಗಿಯುತ್ತಿದ್ದಂತೆ, ಮೈದಾನದಲ್ಲಿ ಇದ್ದಕ್ಕಿದ್ದಂತೆ ಒಂದು ಸ್ಮಶಾನ ಮೌನ ಆವರಿಸಿಕೊಳ್ಳಲು ಶುರುವಾಗುತ್ತದೆ. ಅಲ್ಲಿಯವರೆಗೆ ತುಂಬಿತುಳುಕುತ್ತಿದ್ದ ಮೈದಾನ ಕೆಲವೇ ನಿಮಿಷದಲ್ಲಿ ಖಾಲಿಯಾಗಿರುತ್ತದೆ. ಕುರ್ಚಿಗಳು ಖಾಲಿಖಾಲಿ. ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಎಂಬ ಪ್ರಶ್ನೆ ಮತ್ತೆ ಹುಟ್ಟಿಕೊಳ್ಳುತ್ತದೆ. ಇಡೀ ವಾತಾವರಣದಲ್ಲಿ ನಿಶ್ಶಬ್ದ! ಕೆಲವೇ ನಿಮಿಷಗಳ ಹಿಂದಿದ್ದ ಚಿತ್ರ ಈಗ ಬದಲು, ಮತ್ತೆ ನಿಷ್ಕಾಮಕರ್ಮಿಗಳಂತೆ ಮೈದಾನ ಸಿಬ್ಬಂದಿ ಒಳ ಪ್ರವೇಶಿಸುತ್ತಾರೆ. ಮಳೆ ಬಂದರೆ ಇರಲಿ ಎಂದು ಪೆವಿಲಿಯನ್‌ನಲ್ಲಿ ಇಡಲಾಗಿದ್ದ ಬೃಹತ್ ಟಾರ್ಪಲ್‌ಗಳನ್ನು ಎತ್ತಿ ಸುರಕ್ಷಿತಗೊಳಿಸುವ, ಮೈದಾನದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಅವರು ಮಗ್ನರಾಗಿರುತ್ತಾರೆ. ಈ ಬಾರಿ ಅವರ ಸುತ್ತ, ವಿಶ್ವದ ಸರ್ವಶ್ರೇಷ್ಠ ಕ್ರಿಕೆಟಿಗರು ಇರುವುದಿಲ್ಲ. ಈಗಲೂ ಆ ಸಿಬ್ಬಂದಿ ಹಾವಭಾವದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ. ಪತ್ರಕರ್ತರು ಮಾಧ್ಯಮಕೇಂದ್ರದಿಂದ ಹೊರಬರುತ್ತಿದ್ದಂತೆ, ಪರಿಸ್ಥಿತಿ ಸಂಪೂರ್ಣ ಬದಲು. ಚಿನ್ನಸ್ವಾಮಿ ಆವರಣ ಆಗ ಸಣ್ಣ ಕಸದ ತೊಟ್ಟಿಯಂತೆ ಕಾಣುತ್ತದೆ. ಊಟ ಮಾಡಿ ಬಿಟ್ಟ ಸಾವಿರಾರು ತಟ್ಟೆಗಳಲ್ಲಿ ಅನ್ನದ ಕಾಳುಗಳ ಬಿದ್ದು ಹೊರಳಾಡುತ್ತಿರುತ್ತವೆ. ಕೈಗೆ ಕಾಲಿಗೆ ದೊಡ್ಡ ದೊಡ್ಡ ಕಸದಬುಟ್ಟಿಗಳು ತಾಕುತ್ತವೆ. ಹೊರಬಂದರೆ ಈ ಕಸವನ್ನೆಲ್ಲ ಸಾಗಿಸಲು ಸಾಹಸ ಮಾಡುತ್ತಿರುವ ಸಿಬ್ಬಂದಿ ಕಾಣುತ್ತಾರೆ. ಅದಕ್ಕೂ ಕೆಲವೇಗಂಟೆಗಳ ಮುನ್ನ ಇದ್ದ ಮಾಯಾನಗರಿ ಈಗ ಮಾಯವಾಗಿ ಒಂದು ದೊಡ್ಡ ಕಸದ ತೊಟ್ಟಿಯಂತೆ ಮೈದಾನ ಭಾಸವಾಗುತ್ತದೆ. ಇಡೀ ಮೈದಾನವನ್ನು ತಮ್ಮ ಉಪಸ್ಥಿತಿಯಿಂದ ಬೆಳಗಿದ್ದ ಮಾಯಗಾರರಾದ ಆಟಗಾರರು ಅಲ್ಲಿಂದ ಬಸ್‌ನಲ್ಲಿ ಪೊಲೀಸರ ಸುರಕ್ಷತೆಯೊಂದಿಗೆ ತೆರಳುತ್ತಾರೆ. ದೇಶದ ಇನ್ನೊಂದು ಮೈದಾನ ಅವರ ಮಾಯದ ಸ್ಪರ್ಶಕ್ಕಾಗಿ ಕಾದಿರುತ್ತದೆ. ಇನ್ನೊಬ್ಬ ಯಾರೋ ಪತ್ರಕರ್ತ ಇಂತಹದ್ದೇ ಯೋಚನೆಗಳಲ್ಲಿ ಕಲ್ಪನೆಗಳಿಗೆ ಜೀವಕೊಡುತ್ತಾ ಮಾಧ್ಯಮ ಕೇಂದ್ರದಲ್ಲಿ ಕುಳಿತಿರುತ್ತಾನೆ…
-ನಿರೂಪ