ಬೆಂಗಳೂರು: ಬ್ಯಾಟಿಂಗ್ ಹೀರೋ ವಿರಾಟ್ ಕೊಹ್ಲಿ ಸೋಮವಾರ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡರು. ಜತೆಗೆ ಮೊದಲ ಸುತ್ತಿನ ಅಭ್ಯಾಸವನ್ನೂ ನಡೆಸಿದರು. ನಾಯಕ ಫಾ ಡು ಪ್ಲೆಸಿಸ್ ಕೂಡ ಇದ್ದರು.
ಆರ್‌ಸಿಬಿಯ ಮಾಜಿ ನಾಯಕರಾಗಿರುವ ವಿರಾಟ್ ಕೊಹ್ಲಿ ಕಳೆದ ಕೆಲವು ವಾರಗಳಿಂದ ಲಂಡನ್‌ನಲ್ಲಿದ್ದರು. ಮಗ “ಅಕಾಯ್’ನ ಜನನವಾದ ಬಳಿಕ ರವಿವಾರವಷ್ಟೇ ಭಾರತಕ್ಕೆ ಮರಳಿದ್ದರು. ಆದರೆ ಮಾಧ್ಯಮದವರಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿರಾಟ್ ಕೊಹ್ಲಿ 2022ರ ವಿಶ್ವಕಪ್ ಬಳಿಕ ಕಳೆದ ಜನವರಿಯಲ್ಲಷ್ಟೇ ಅಫ್ಘಾನಿಸ್ಥಾನ ವಿರುದ್ಧ ಮೊದಲ ಟಿ20 ಪಂದ್ಯ ಆಡಿದ್ದರು. ಇದೇ ಸರಣಿಯಲ್ಲಿ ರೋಹಿತ್ ಶರ್ಮ ಕೂಡ ಟಿ20 ನಾಯಕರಾಗಿ ಮರಳಿದ್ದರು.
ಪ್ರವಾಸಿ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಬೇರ್ಪಟ್ಟಿದ್ದ ವಿರಾಟ್ ಕೊಹ್ಲಿ ಪಾಲಿಗೆ ಈ ಬಾರಿಯ ಐಪಿಎಲ್ ಅತ್ಯಂತ ಮಹತ್ವದ್ದಾಗಿದೆ. ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವ ಳಿಯಿಂದ ಇವರನ್ನು ದೂರ ಇರಿಸುವ ಬಗ್ಗೆ ನಾನಾ ಊಹಾಪೋಹಗಳು ಹರಿದಾಡುತ್ತಿದ್ದು, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ.
ವಿರಾಟ್ ಕೊಹ್ಲಿ ಕಳೆದ ಐಪಿಎಲ್‌ನಲ್ಲಿ 2 ಶತಕ ಸೇರಿದಂತೆ 639 ರನ್ ಪೇರಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಈ ಬಾರಿ ಆರ್‌ಸಿಬಿ ಉದ್ಘಾಟನ ಪಂದ್ಯದಲ್ಲಿ ಆಡಲಿದ್ದು, ಶುಕ್ರವಾರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.