Advertisement

IPL 2020‌: ಅರಬ್‌ ನಾಡಿನ ಸವಾಲು ಸುಲಭದ್ದಲ್ಲ

03:03 AM Jul 23, 2020 | Hari Prasad |

ಹೊಸದಿಲ್ಲಿ: ಈ ವರ್ಷದ ಐಪಿಎಲ್‌ ಪಂದ್ಯಾವಳಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನಡೆಯುವುದು ಬಹುತೇಕ ಖಾತ್ರಿಯಾಗಿದ್ದು, ಬಿಸಿಸಿಐ ಕೇಂದ್ರ ಸರಕಾರದ ಒಪ್ಪಿಗೆಯ ನಿರೀಕ್ಷೆಯಲ್ಲಿದೆ.

Advertisement

ಸಾಮಾನ್ಯವಾಗಿ ಮಾರ್ಚ್‌-ಮೇ ಅವಧಿಯಲ್ಲಿ ನಡೆಯುತ್ತಿದ್ದ ಈ ಕ್ರಿಕೆಟ್‌ ಲೀಗ್‌ ಈ ಬಾರಿ ಸೆಪ್ಟಂಬರ್‌-ನವೆಂಬರ್‌ ತಿಂಗಳಲ್ಲಿ ಸಾಗಲಿದೆ.

ಇದರಿಂದ ಅನೇಕ ಸವಾಲು ಎದುರಾಗಲಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ತಮ್ಮ ‘ಆಕಾಶವಾಣಿ’ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಆಟಗಾರರಿಗೆ ಸಾಕಷ್ಟು ಸಮಯಬೇಕಾಗುತ್ತದೆ. ಇವರೆಲ್ಲ ಅರಬ್‌ ನಾಡಿನ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಗತ್ಯ. ಈಗೇನೋ ಪರಿಸ್ಥಿತಿ ಪರವಾಗಿಲ್ಲ.
ವರ್ಷಾಂತ್ಯದಲ್ಲೂ ಓಕೆ. ಆದರೆ ಇದು ಕೇವಲ 6 ವಾರಗಳಲ್ಲಿ ಮುಗಿಯುವ ಕೂಟವಾದ್ದರಿಂದ ದಿನವೂ ಎರಡು ಪಂದ್ಯಗಳು ನಡೆಯಬೇಕಾದುದು ಅನಿವಾರ್ಯ. ಭಾರತೀಯ ಕಾಲಮಾನಕ್ಕೆ ಪಂದ್ಯವನ್ನು ಹೊಂದಿಸಿಕೊಳ್ಳಲಿರುವುದರಿಂದ ಮೊದಲ ಪಂದ್ಯ ವಿಪರೀತ ಬಿಸಿ ವಾತಾವರಣದಲ್ಲಿ ನಡೆಯುತ್ತದೆ. ಆಗ ಅಲ್ಲಿ ನಡು ಮಧ್ಯಾಹ್ನವಾಗಿರುತ್ತದೆ. ಆಟಗಾರರು ನಿರ್ಜಲೀಕರಣ ಸಮಸ್ಯೆಗೆ ಸಿಲುಕುವ ಅಪಾಯವಿದೆ’ ಎಂಬುದಾಗಿ ಆಕಾಶ್‌ ಚೋಪ್ರಾ ಹೇಳಿದರು.

ದೊಡ್ಡ ಅಂಗಳಗಳ ಲಾಭ
ಅಬುಧಾಬಿ, ಶಾರ್ಜಾ ಮತ್ತು ದುಬಾೖ ಅಂಗಳ ಸಾಕಷ್ಟು ದೊಡ್ಡದಿರುವುದರಿಂದ ಕೆಲವು ತಂಡಗಳಿಗೆ ಹೆಚ್ಚು ಅನುಕೂಲ; ಮುಖ್ಯವಾಗಿ ಆರ್‌ಸಿಬಿ, ಕೆಕೆಆರ್‌ ಆಟಗಾರರು ಇದರ ಲಾಭವನ್ನೆತ್ತುವ ಸಾಧ್ಯತೆ ಹೆಚ್ಚು ಎಂಬುದಾಗಿಯೂ ಆಕಾಶ್‌ ಚೋಪ್ರಾ ಅಭಿಪ್ರಾಯಪಟ್ಟರು. ಉತ್ತಮ ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿರುವನ ಚೆನ್ನೈ ತಂಡಕ್ಕೂ ಹೆಚ್ಚಿನ ಅನುಕೂಲವಿದೆ ಎಂದರು.

Advertisement

‘ಬ್ಯಾಟ್ಸ್‌ಮನ್‌ಗಳಿಗೆ ಭಾರೀ ಸಮಸ್ಯೆಯೇನೂ ಕಾಡದು. ಆದರೆ ಉರಿಬಿಸಿಲಿನ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು’ ಎಂದು ಚೋಪ್ರಾ ಹೇಳಿದರು.  2014ರ ಐಪಿಎಲ್‌ ವೇಳೆ ಕೆಲವು ಪಂದ್ಯಗಳನ್ನಷ್ಟೇ ಯುಎಇಯಲ್ಲಿ ಆಡಲಾಗಿತ್ತು. ಈ ಬಾರಿ ಇಡೀ ಪಂದ್ಯಾವಳಿಯೇ ಅಲ್ಲಿ ನಡೆಯಲಿದೆ.

ಐಪಿಎಲ್‌ನಲ್ಲಿ ಕಮೆಂಟ್ರಿ ಫ್ರಂ‌ ಹೋಮ್‌?
ಕೊರೊನಾ ಹಾವಳಿಯಿಂದ ಈಗ ಜಗತ್ತೇ ಲಾಕ್‌ಡೌನ್‌ ಆಗಿದೆ. ಪ್ರಮುಖ ಕೆಲಸವೆಲ್ಲ ಮನೆಯಿಂದಲೇ ನಡೆಯುತ್ತಿದೆ. ಅದೇ ರೀತಿ ಮುಂಬರುವ ಐಪಿಎಲ್‌ ಪಂದ್ಯಾವಳಿಯಲ್ಲಿ ಮನೆಯಿಂದಲೇ ವೀಕ್ಷಕ ವಿವರಣೆ ನೀಡಿದರೆ ಹೇಗೆ?
ಇದಕ್ಕೆ ಸ್ಫೂರ್ತಿ, ಕಳೆದ ರವಿವಾರ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ ಪಾರ್ಕ್‌ನಲ್ಲಿ ನಡೆದ ಮೂರು ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯ. ಇದರ ಲೈವ್‌ ಕಮೆಂಟ್ರಿಯನ್ನು ಇರ್ಫಾನ್‌ ಪಠಾಣ್‌ ತಮ್ಮ ಬರೋಡ ನಿವಾಸದಿಂದ, ದೀಪ್‌ ದಾಸ್‌ಗುಪ್ತ ಕೋಲ್ಕತಾದಿಂದ ಮತ್ತು ಸಂಜಯ್‌ ಮಾಂಜ್ರೇಕರ್‌ ಮುಂಬಯಿಯ ಮನೆಯಿಂದ ನೀಡಿದ್ದರು. ಈ ಪ್ರಯೋಗ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು.

‘ಇದೊಂದು ಅದ್ಭುತ ಅನುಭವ. ಇಂಟರ್‌ನೆಟ್‌ ವೇಗದ ಏರಿಳಿತ ಎನ್ನುವುದು ನಮ್ಮ ಧ್ವನಿಯ ಗುಣಮಟ್ಟಕ್ಕೆ ಅಡಚಣೆಯಾದೀತು ಎಂಬ ಭೀತಿ ಕಾಡಿತ್ತು. ಆದರೆ ಅಂಥ ಅಪಾಯವೇನೂ ಸಂಭವಿಸಲಿಲ್ಲ’ ಎಂಬುದಾಗಿ ಸಾವಿರಾರು ಕಿ.ಮೀ. ದೂರದ ಕ್ರಿಕೆಟ್‌ ಪಂದ್ಯದ ವೀಕ್ಷಕ ವಿವರಣೆ ನೀಡಿದ ಪಠಾಣ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next