Advertisement

ಇಂದು ಮೊದಲ ಡೇ ಮ್ಯಾಚ್‌; ಹ್ಯಾಟ್ರಿಕ್‌ ಹಾದಿಯಲ್ಲಿ ಆರ್‌ಸಿಬಿ

12:53 AM Apr 18, 2021 | Team Udayavani |

ಚೆನ್ನೈ: ಹದಿನಾಲ್ಕನೇ ಐಪಿಎಲ್‌ ಪಂದ್ಯಾವಳಿಯ ಮೊದಲ ಡೇ ಮ್ಯಾಚ್‌ ರವಿವಾರ ನಡೆಯಲಿದೆ. ಹ್ಯಾಟ್ರಿಕ್‌ ಹಾದಿಯಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ವಿರುದ್ಧ ಗೆಲುವನ್ನು ಕೈಚೆಲ್ಲಿದ ಕೋಲ್ಕತಾ ನೈಟ್‌ರೈಡರ್ ತಂಡಗಳು ಅಪರಾಹ್ನದ ಪಂದ್ಯದಲ್ಲಿ ಮುಖಾಮುಖೀ ಆಗಲಿವೆ. ರಾತ್ರಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಎದುರಾಗಲಿವೆ.

Advertisement

ಉದ್ಘಾಟನಾ ಪಂದ್ಯದಲ್ಲಿ ಮುಂಬೈಯನ್ನು, ಬಳಿಕ ಹೈದರಾಬಾದನ್ನು ರೋಚಕವಾಗಿ ಮಣಿಸಿದ ಕೊಹ್ಲಿ ಪಡೆ ಈ ಬಾರಿ ಹೆಚ್ಚು ಬಲಿಷ್ಠ ಎಂಬುದರಲ್ಲಿ ಅನುಮಾನವಿಲ್ಲ. ಪಡಿಕ್ಕಲ್‌, ಕೊಹ್ಲಿ, ಮ್ಯಾಕ್ಸ್‌ವೆಲ್‌, ಎಬಿಡಿ, ಕ್ರಿಸ್ಟಿಯನ್‌, ಜಾಮೀಸನ್‌ ಅವರೆಲ್ಲ ಆರ್‌ಸಿಬಿಯ ಸ್ಟಾರ್‌ ಆಟಗಾರರು. ಆದರೆ ಮೊದಲೆರಡು ಪಂದ್ಯಗಳ ಗೆಲುವಿನಲ್ಲಿ ಯುವ ಹಾಗೂ ಭರವಸೆಯ ಬೌಲರ್‌ಗಳಾದ ಹರ್ಷಲ್‌ ಪಟೇಲ್‌ ಹಾಗೂ ಶಾಬಾಜ್‌ ಅಹ್ಮದ್‌ ಅವರ ಕೊಡುಗೆ ಮಹತ್ವದ್ದಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಇವರಿಬ್ಬರೂ ತಂಡದ ಬೌಲಿಂಗ್‌ ಭಾರವನ್ನು ಬಹಳಷ್ಟು ಕಡಿಮೆ ಮಾಡಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ 14.25 ಕೋಟಿ ರೂ. ಮೊತ್ತದ ದುಬಾರಿ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ತಮ್ಮ ಬೆಲೆಗೆ ತಕ್ಕ ಪ್ರದರ್ಶನ ನೀಡಿ, 2016ರ ಬಳಿಕ ಐಪಿಎಲ್‌ ಅರ್ಧ ಶತಕವೊಂದು ದಾಖಲಿಸಿದ್ದು ಆರ್‌ಸಿಬಿ ಪಾಲಿಗೊಂದು ಬೋನಸ್‌.

ಎರಡೂ ಪಂದ್ಯಗಳಲ್ಲಿ ಆರ್‌ಸಿಬಿ ದಾಖಲಿಸಿದ್ದು ಸಣ್ಣ ಅಂತರದ ಗೆಲುವು. ಮುಂಬೈ ಎದುರು ಕೇವಲ 2 ವಿಕೆಟ್‌ಗಳಿಂದ ಗೆದ್ದರೆ, ಹೈದರಾಬಾದ್‌ ವಿರುದ್ಧ ಇನ್ನೇನು ಸೋತೇ ಬಿಟ್ಟಿತು ಎನ್ನುವ ಹಂತದಲ್ಲಿ 6 ರನ್ನುಗಳಿಂದ ಗೆದ್ದು ಬಂದಿತ್ತು. ತಂಡದ ಒಟ್ಟಾರೆ ಸಾಮರ್ಥ್ಯಕ್ಕೆ ತಕ್ಕ ಗೆಲುವು ಇದಾಗಿರಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಿಡಿದು ನಿಂತರೆ ಆರ್‌ಸಿಬಿಯ ನೈಜ ತಾಕತ್ತು ಹೊರಹೊಮ್ಮಲಿದೆ. ಆದರೆ ಚೆನ್ನೈನ ನಿಧಾನ ಗತಿಯ ಟ್ರ್ಯಾಕ್‌ ಮೇಲೆ ಇದನ್ನು ನಿರೀಕ್ಷಿಸುವುದು ಕಷ್ಟ. ಹೀಗಾಗಿ ಬೌಲರ್‌ಗಳೇ ಮ್ಯಾಚ್‌ ವಿನ್ನರ್‌ ಆಗುತ್ತಿದ್ದಾರೆ.

ಮಾರ್ಗನ್‌ ನಾಯಕತ್ವದ ಕೆಕೆಆರ್‌ ಅಸ್ಥಿರ ಆಟದಿಂದ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೈದರಾಬಾದ್‌ ವಿರುದ್ಧ ಸೋತೇ ಬಿಟ್ಟಿತು ಎನ್ನುವ ಹಂತದಲ್ಲಿ 10 ರನ್‌ ಗೆಲುವು ಸಾಧಿಸಿತು. ಪಾಂಡೆ-ಸಮದ್‌ ಅವರಂಥ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿರುವ ಜತೆಗೆ ಇನ್ನೂ 5 ವಿಕೆಟ್‌ಗಳನ್ನು ಹೊಂದಿದ್ದ ಹೈದರಾಬಾದ್‌ ಸೋತದ್ದೇ ಒಂದು ಅಚ್ಚರಿ. ಹಾಗೆಯೇ ಮುಂಬೈ ವಿರುದ್ಧ 152 ರನ್‌ ಚೇಸಿಂಗ್‌ ವೇಳೆ 10 ಓವರ್‌ಗಳಲ್ಲಿ ಒಂದಕ್ಕೆ 80 ಎಂಬ ಸ್ಥಿತಿಯಲ್ಲಿದ್ದ ಕೆಕೆಆರ್‌ ಸುಲಭದಲ್ಲಿ ಗೆಲ್ಲಬೇಕಿತ್ತು. ಕೊನೆಗೆ 7ಕ್ಕೆ 142 ರನ್‌ ಮಾಡಿ 10 ರನ್ನುಗಳಿಂದ ಎಡವಿದ್ದನ್ನು ನಂಬಲಾಗುತ್ತಿಲ್ಲ!

Advertisement

ತಂಡ ಸೇರಿಕೊಂಡ ಸ್ಯಾಮ್ಸ್‌
ಕೊರೊನಾ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡ ಆಲ್‌ರೌಂಡರ್‌ ಡೇನಿಯಲ್‌ ಸ್ಯಾಮ್ಸ್‌ ಶನಿವಾರ ಆರ್‌ಸಿಬಿ ತಂಡದ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next