ರಾಮನಗರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ನಾಲ್ವರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ.
ಹೊಡಿಕೆಹೊಸಹಳ್ಳಿ ಗ್ರಾಮದ ಎಚ್.ಎಂ. ಆತ್ಮಾನಂದ್ (40), ಮಳೂರು ಪಟ್ಟಣ ನಿವಾಸಿ ಎಂ. ಸಿ. ಮನು (39), ರಾಮನಗರದ ವಿವೇಕಾನಂದನಗರ ನಿವಾಸಿ ಎಸ್. ಕೃಷ್ಣಮೂರ್ತಿ ಹಾಗೂ ಚನ್ನಪಟ್ಟಣದ ಎಂ.ಜಿ. ರಸ್ತೆ ಸಮೀಪದ ನಿವಾಸಿ ನಾಗಾರ್ಜುನ (31) ಬಂಧಿತರು. ಮತ್ತೊಬ್ಬ ಆರೋಪಿ ಸಂದೀಪ್ ತಲೆಮರೆಸಿಕೊಂಡಿದ್ದಾನೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಡಿಕೆಹೊಸಹಳ್ಳಿ, ಮಳೂರು ಪಟ್ಟಣ, ರಾಮನಗರ ಹಾಗೂ ಜಿಲ್ಲೆಯ ವಿವಿಧೆಡೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಬಂಧಿತರಿಂದ 10.98 ಲಕ್ಷ ರೂ,ನಗದು, ಒಂದು ಕಾರು, 2 ಟಿವಿ, ಸೆಟ್ ಟಾಪ್ ಬಾಕ್ಸ್ ಗಳು, 8 ಮೊಬೈಲ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಈ ಆರೋಪಿಗಳು ಜನರಿಂದ ಹಣ ಸಂಗ್ರಹಿಸಿ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಬಿ.ಟಿ.ಗೋವಿಂದ್, ಕನಕಪುರ ಗ್ರಾಮಾಂತರ ಠಾಣೆಯ ಸಬ್ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್, ರಾಮನಗರ ಟೌನ್ ಸಬ್ ಇನ್ಸ್ ಪೆಕ್ಟರ್ ಮುತ್ತುರಾಜ್, ಸಿಬ್ಬಂದಿಗಳಾದ ಅಶ್ವತ್ಥ್ , ಮಾರಪ್ಪ, ಗುರುಮೂರ್ತಿ, ಮಂಜುನಾಥ ಬಾಬ್ಜಿ, ನಾಗರಾಜಣ್ಣ, ಸವಿತಾ, ಸುಶೀಲಾ, ಕವಿತಾ ಕಿರಣ್ ಕುಮಾರ್, ಸಂತೋಷ್ ಪಾಂಡ್ರೆ, ದುಂಡಪ್ಪ, ಮಾಳ್ಯಗೋಳ, ಶೇಖರ್ ಭಾಗಿಯಾಗಿದ್ದರು. ಈ ಸಂಬಂಧ ರಾಮನಗರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.