ಚೆನ್ನೈ: ಮುಂದಿನ ಗುರುವಾರ ಚೆನ್ನೈಯಲ್ಲಿ ನಡೆಯುವ ಮಿನಿ ಐಪಿಎಲ್ ಹರಾಜು ಪ್ರಕ್ರಿಯೆಗೆ ಭರದ ಸಿದ್ಧತೆ ನಡೆಯುತ್ತಿದೆ. 8 ಫ್ರಾಂಚೈಸಿಗಳು ತಮ್ಮ ಯಾದಿಯನ್ನು ನೀಡಿದ ಬಳಿಕ ಆಟಗಾರರ ಸಂಖ್ಯೆಯನ್ನು 292ಕ್ಕೆ ಇಳಿಸಲಾಗಿದೆ. ಆರಂಭದಲ್ಲಿ 1,114 ಕ್ರಿಕೆಟಿಗರು ಹರಾಜು ವ್ಯಾಪ್ತಿಯಲ್ಲಿದ್ದರು.
ಈ 292 ಕ್ರಿಕೆಟಿಗರಲ್ಲಿ ಭಾರತದ 164 ಆಟಗಾರರಿದ್ದಾರೆ. ಇದರಲ್ಲಿ 14 ಮಂದಿ ಕರ್ನಾಟಕದವರು. ವಿದೇಶಿ ಕ್ರಿಕೆಟಿಗರ ಸಂಖ್ಯೆ 125. ಉಳಿದ ಮೂವರು ಅಸೋಸಿಯೇಟ್ ರಾಷ್ಟ್ರಗಳ ಕ್ರಿಕೆಟಿಗರು. ನಿಷೇಧ ಮುಗಿಸಿ ದೇಶಿ ಕ್ರಿಕೆಟಿಗೆ ಮರಳಿದ ಕೇರಳದ ಎಸ್. ಶ್ರೀಶಾಂತ್ ಈ ಯಾದಿಯಲ್ಲಿ ಇಲ್ಲದಿರುವುದೊಂದು ಅಚ್ಚರಿ. ಆದರೆ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಹೆಸರು ಕಾಣಿಸಿಕೊಂಡಿದೆ.
ಮೂಲ ಬೆಲೆ ನಿಗದಿ :
ಹರಾಜಿನಲ್ಲಿ ಪಾಲ್ಗೊಳ್ಳುವ ಕ್ರಿಕೆಟಿಗರ ಮೂಲ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಗರಿಷ್ಠ ಬೆಲೆ 2 ಕೋಟಿ ರೂ., ಕನಿಷ್ಠ ಬೆಲೆ 20 ಲಕ್ಷ ರೂ. ಆಗಿದೆ. ಉಳಿದ ಮೂಲ ಬೆಲೆ 1.5 ಕೋಟಿ, 1 ಕೋಟಿ, 75 ಲಕ್ಷ, 50 ಲಕ್ಷ, 40 ಲಕ್ಷ ಹಾಗೂ 30 ಲಕ್ಷ ರೂ. ಆಗಿದೆ.
2 ಕೋ.ರೂ. ಮೂಲ ಬೆಲೆಯ ಯಾದಿಯಲ್ಲಿ ಒಟ್ಟು 10 ಕ್ರಿಕೆಟಿಗರಿದ್ದಾರೆ. ಇವರೆಂದರೆ ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಜಾಸನ್ ರಾಯ್, ಮೊಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಮಾರ್ಕ್ ವುಡ್, ಲಿಯಮ್ ಪ್ಲಂಕೆಟ್, ಶಕಿಬ್ ಅಲ್ ಹಸನ್, ಸ್ಟೀವ್ ಸ್ಮಿತ್ ಮತ್ತು ಗೆನ್ ಮ್ಯಾಕ್ಸ್‌ವೆಲ್.
ಅರ್ಜುನ್ ತೆಂಡುಲ್ಕರ್ ಕನಿಷ್ಠ 20 ಲಕ್ಷ ರೂ. ಮೂಲ ಬೆಲೆಯ ಯಾದಿಯಲ್ಲಿದ್ದಾರೆ.