ವಿಶಾಖಪಟ್ಟಣ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವಿನ ಖಾತೆ ತೆರೆದ ಖುಷಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ವಿರುದ್ಧ ಅಬ್ಬರಿಸಿ ಗೆದ್ದ ಕೋಲ್ಕತಾ ನೈಟ್‌ರೈಡರ್ ಬುಧವಾರದ ಐಪಿಎಲ್ ಪಂದ್ಯದಲ್ಲಿ ಎದುರಾಗಲಿವೆ. ಇದು ಡೆಲ್ಲಿಯ ಎರಡನೇ ತವರಾದ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸತತ 2ನೇ ಪಂದ್ಯವಾಗಿದೆ.
ಸತತ 2 ಪಂದ್ಯಗಳನ್ನು ಸೋತು ತೀವ್ರ ಸಂಕಟದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್, ರವಿವಾರದ ಮುಖಾಮುಖೀಯಲ್ಲಿ ಬಲಿಷ್ಠ ಚೆನ್ನೈಯನ್ನು ಎಲ್ಲ ವಿಭಾಗಗಳಲ್ಲೂ ಹಿಂದಿಕ್ಕಿ 20 ರನ್ನುಗಳ ಜಯ ಸಾಧಿಸಿತ್ತು. ನಾಯಕ ರಿಷಭ್ ಪಂತ್ ಈ ಕೂಟದ ಮೊದಲ ಅರ್ಧ ಶತಕವನ್ನು (32 ಎಸೆತಗಳಲ್ಲಿ 51 ರನ್) ದಾಖಲಿಸಿದ್ದರು.
ಡೆಲ್ಲಿಯ ಬ್ಯಾಟಿಂಗ್ ವಿಭಾಗದಲ್ಲಿ ಭಾರೀ ಸಮಸ್ಯೆಯೇನಿಲ್ಲ. ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಆ್ಯನ್ರಿಚ್ ನೋಕಿಯೇ ಫಾರ್ಮ್ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಕೆಕೆಆರ್ ಅತ್ಯಂತ ಬಲಿಷ್ಠ ಹಾಗೂ ಬಿಗ್ ಹಿಟ್ಟರ್‌ಗಳನ್ನು ಒಳಗೊಂಡಿರುವ ತಂಡವಾದ್ದರಿಂದ ಡೆಲ್ಲಿ ಬೌಲಿಂಗ್ ಘಾತಕವಾಗಿ ಪರಿಣಮಿಸುವುದು ಮುಖ್ಯ. ಖಲೀಲ್ ಅಹ್ಮದ್, ಇಶಾಂತ್ ಶರ್ಮ, ಅಕ್ಷರ್ ಪಟೇಲ್, ಮುಕೇಶ್ ಕುಮಾರ್ ಅವರೆಲ್ಲ ಕೆಕೆಆರ್‌ಗೆ ಕಡಿವಾಣ ಹಾಕಲು ಶಕ್ತರೇ ಎಂಬುದರ ಮೇಲೆ ಡೆಲ್ಲಿಯ ಯಶಸ್ಸು ಮತ್ತು ವೈಫಲ್ಯವೆರಡೂ ಅಡಗಿದೆ.
ಹೊಡಿಬಡಿ ಆಟಗಾರರು:
ಕೋಲ್ಕತಾ ನೈಟ್‌ರೈಡರ್ ಆರಂಭದಿಂದ 8ನೇ ಕ್ರಮಾಂಕದ ತನಕ ಇಲ್ಲಿ ಹೊಡಿಬಡಿ ಆಟಗಾರರದೇ ದರ್ಬಾರು. ಆರ್‌ಸಿಬಿಯ 182 ರನ್ ಮೊತ್ತವನ್ನು 16.5 ಓವರ್‌ಗಳಲ್ಲೇ ಹಿಂದಿಕ್ಕಿದ್ದು ಕೆಕೆಆರ್ ಪರಾಕ್ರಮಕ್ಕೆ ಸಾಕ್ಷಿ. 13 ಸಿಕ್ಸರ್, 9 ಬೌಂಡರಿ ಬಾರಿಸಿ ಅಬ್ಬರಿಸಿತ್ತು. ಆಗಿನ್ನೂ ಆ್ಯಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್ ಕ್ರೀಸ್ ಇಳಿದಿರಲಿಲ್ಲ ಎಂಬುದನ್ನು ಗಮನಿಸಬೇಕು. ಆಲ್‌ರೌಂಡರ್ ಸುನೀಲ್ ನಾರಾಯಣ್ ಮತ್ತೆ ಆರಂಭಿಕನಾಗಿ ಇಳಿದು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿರುವುದು ಕೆಕೆಆರ್ ಪಾಲಿಗೆ ನಿಜಕ್ಕೂ ಬೋನಸ್. ಉಳಿದಂತೆ ಫಿಲಿಪ್ ಸಾಲ್ಟ್, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್ ಕೂಡ ಅಪಾಯಕಾರಿ ಬ್ಯಾಟರ್. ಆರಂಭಿಕ ಪಂದ್ಯಗಳಲ್ಲಿ ಅಷ್ಟೇನೂ ಬ್ಯಾಟಿಂಗ್ ಯಶಸ್ಸು ಕಾಣದ ಶ್ರೇಯಸ್ ಅಯ್ಯರ್ ಆರ್‌ಸಿಬಿ ವಿರುದ್ಧ ಅಜೇಯ 39 ರನ್ ಬಾರಿಸಿದ್ದರು.
ಕೆಕೆಆರ್ ತಂಡದ ಪ್ರಮುಖ ಸಮಸ್ಯೆ ಬೌಲಿಂಗ್ ವಿಭಾಗದಲ್ಲಿ ಗೋಚರಿಸುತ್ತದೆ. ದಾಖಲೆ ಮೊತ್ತಕ್ಕೆ ಖರೀದಿಸಲ್ಪಟ್ಟ ಮಿಚೆಲ್ ಸ್ಟಾರ್ಕ್ ಈವರೆಗೆ ಮ್ಯಾಜಿಕ್ ಮಾಡಲು ವಿಫಲರಾಗಿದ್ದಾರೆ. ಆರ್‌ಸಿಬಿ ವಿರುದ್ಧ 4 ಓವರ್‌ಗಳಲ್ಲಿ 47 ರನ್ ರನ್ ನೀಡಿ ದುಬಾರಿಯಾಗಿದ್ದರು. ವಿಕೆಟ್ ಕೂಡ ಒಲಿದಿರಲಿಲ್ಲ.
ಸಂಭಾವ್ಯ ತಂಡಗಳು
ಡೆಲ್ಲಿ: ವಾರ್ನರ್, ಪೃಥ್ವಿ ಶಾ, ಮಾರ್ಷ್, ಪಂತ್ (ನಾಯಕ), ಸ್ಟಬ್ಸ್, ಪೊರೆಲ್, ಅಕ್ಷರ್, ನೋಕಿಯಾ, ಮುಕೇಶ್, ಖಲೀಲ್, ಕುಲದೀಪ್
ಕೋಲ್ಕತಾ: ಸಾಲ್ಟ್, ನಾರಾಯಣ್, ವೆಂಕಟೇಶ್, ರಘುವಂಶಿ, ಶ್ರೇಯಸ್ (ನಾಯಕ), ರಿಂಕು, ರಮಣ್‌ದೀಪ್ ಸಿಂಗ್, ರಸೆಲ್, ಸ್ಟಾರ್ಕ್, ಹರ್ಷಿತ್, ವರುಣ್
ಅಂಕಣ ಗುಟ್ಟು: ವಿಶಾಖಪಟ್ಟಣದ್ದು ಬ್ಯಾಟಿಂಗ್ ಟ್ರ್ಯಾಕ್ ಎಂಬುದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ಹೊಸ ಚೆಂಡಿನಲ್ಲಿ ಒಂದಿಷ್ಟು ಸ್ವಿಂಗ್ ಸಾಧಿಸಬಹುದು. ಆಗ ಬ್ಯಾಟರ್ ಎಚ್ಚರಿಕೆಯ ಆಟ ಆಡಬೇಕಾಗುತ್ತದೆ. ಇಲ್ಲಿ ಆಡಿದ 14 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಗೂ ಚೇಸಿಂಗ್ ಮಾಡಿದ ತಂಡಗಳೆರಡೂ ತಲಾ ಏಳನ್ನು ಗೆದ್ದು ಸಮಬಲ ಸಾಧನೆಗೈದಿವೆ.