ನವದೆಹಲಿ: ಆಸ್ಟ್ರೇಲಿಯ ವಿರುದ್ಧ ಗಾಬಾದಲ್ಲಿ 7 ವಿಕೆಟ್ ಪಡೆದು ವೆಸ್ಟ್ ಇಂಡೀಸ್ ನ ಐತಿಹಾಸಿಕ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವ ವೇಗಿ ಶಮರ್ ಜೋಸೆಫ್ ಈ ವರ್ಷದ ಐಪಿಎಲ್ ನಲ್ಲಿ ಆಡಲಿದ್ದಾರೆ.
ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ ಅವರು ಚೊಚ್ಚಲವಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಜೋಸೆಫ್ ಅವರನ್ನು ಖರೀದಿಸಿದೆ ಎಂದು ಲಕ್ನೋ ಫ್ರಾಂಚೈಸಿ ಶನಿವಾರ(ಫೆ.10 ರಂದು) ತಿಳಿಸಿದೆ.
ಲಕ್ನೋ ತಂಡದ ಪ್ರಮುಖ ಬೌಲರ್ ಇಂಗ್ಲೆಂಡ್ ನ ಮಾರ್ಕ್‌ವುಡ್ ಗಾಯಗೊಂಡಿದ್ದಾರೆ. ಅವರ ಬದಲಿ ಆಟಗಾರನಾಗಿ ಲಕ್ನೋ ತಂಡ ಶಮರ್ ಜೋಸೆಫ್ ಅವರನ್ನು ಖರೀದಿಸಿದೆ. ಜೋಸೆಫ್ ಅವರನ್ನು 3 ಕೋಟಿ ರೂ. ಕೊಟ್ಟು ಲಕ್ನೋ ಫ್ರಾಂಚೈಸಿ ತಂಡಕ್ಕೆ ಸೇರಿಸಿ ಕೊಂಡಿದೆ.
ಯಾರು ಈ ಜೋಸೆಫ್?: ಇದೇ ವರ್ಷ ವೆಸ್ಟ್ ಇಂಡೀಸ್ ಆಸ್ಟ್ರೇಲಿಯ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿತ್ತು. ಗಾಬಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸೀಸ್ ಆಟಗಾರರ ವಿಕೆಟ್ ಕಬಳಿಸುವ ಮೂಲಕ ಕ್ರಿಕೆಟ್ ಲೋಕದಲ್ಲಿ ಸುದ್ದಿ ಮಾಡಿದ್ದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆಯುವ ಮೂಲಕ ವೆಸ್ಟ್ ಇಂಡೀಸ್‌ನ ಐತಿಹಾಸಿಕ ಗೆಲುವಿಗೆ ರೂವಾರಿ ಆಗಿದ್ದರು. ಅವರ ಕಾಲಿಗೆ ಚೆಂಡ್ ತಗುಲಿದರೂ ಬೌಲಿಂಗ್ ನಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು.
ಗಯಾನಾದ ಬರಾಕಾರ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಶಮರ್ ಜೋಸೆಫ್, ಕ್ರಿಕೆಟ್ ಗೆ ಬರುವ ಮುನ್ನ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಕ್ರಿಕೆಟ್ ಬಗ್ಗೆ ಅವರಿಗಿದ್ದ ಆಸಕ್ತಿಗೆ ಆ ಕೆಲಸ ಬಿಟ್ಟು, ಕ್ರಿಕೆಟ್ ಆಡಲು ತೊಡಗಿದರು. ಫೆಬ್ರವರಿ 2023 ರಲ್ಲಿ ಗಯಾನಾ ಹಾರ್ಪಿ ಈಗಲ್ಸ್‌ಗಾಗಿ ಪ್ರಥಮ ದರ್ಜೆ ಕ್ರಿಕೆಟ್ ಆಡಿ, ಅದ್ಭುತ ಪ್ರದರ್ಶನ ನೀಡಿ, ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆ ಆದರು.