ಮುಂಬೈ: ಇನ್ನು ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಐಪಿಎಲ್ ಆರಂಭಗೊಳ್ಳಲಿದೆ. 17ನೇ ಸೀಸನ್ ನ ಐಪಿಎಲ್ ಕೂಟಕ್ಕಾಗಿ ಬಿಸಿಸಿಐ ಎಲ್ಲಾ ಸಿದ್ದತೆ ನಡೆಸುತ್ತಿದೆ. ಈ ಬಾರಿ ಇದೇ ಸಮಯದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣದಿಂದ ಇದೀಗ ಮೊದಲ ಕೆಲವೇ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಶನಿವಾರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗಿದೆ.
ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ದ್ವಿತಿಯಾರ್ಧದ ಐಪಿಎಲ್ ಭಾರತದಿಂದ ಹೊರಕ್ಕೆ ನಡೆಯಲಿದೆ ಎಂದು ವರದಿಯಾಗಿತ್ತು. ದುಬೈನಲ್ಲಿ ಕೂಟ ನಡೆಸಲು ಬಿಸಿಸಿಐ ಸಿದ್ದತೆ ನಡೆಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
ಈ ಸುದ್ದಿಗಳನ್ನು ಅಲ್ಲಗಳೆದಿರುವ ಜಯ್ ಶಾ ಅವರು, ಸಂಪೂರ್ಣ ಐಪಿಎಲ್ ಕೂಟವು ಭಾರತದಲ್ಲಿಯೇ ನಡೆಯಲಿದೆ ಎಂದಿದ್ದಾರೆ.
ಐಪಿಎಲ್‌ನ ದ್ವಿತೀಯಾರ್ಧವನ್ನು ಗಲ್ಫ್ ದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕೆಲ ಬಿಸಿಸಿಐ ಅಧಿಕಾರಿಗಳ ಯುಎಇಯಲ್ಲಿ ಇದ್ದಾರೆ. ಶನಿವಾರ(ಮಾ.16 ರಂದು) ಲೋಕಸಭಾ ಚುನಾವಣಾ ದಿನಾಂಕವನ್ನು ಘೋಷಣೆಯಾದ ಬಳಿಕ ಬಿಸಿಸಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ತಿಳಿಸಿತ್ತು.
ಮಾ. 22 ರಂದು ಚೆನ್ನೈ ಹಾಗೂ ಆರ್ ಸಿಬಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಏ. 7 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲಾರ್ಧದ ಕೊನೆಯ ಪಂದ್ಯ ನಡೆಯಲಿದೆ.