ಮುಂಬೈ: 17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅದ್ದೂರಿಯಾಗಿ ಆರಂಭವಾಗಿದೆ. ಎಲ್ಲಾ ಹತ್ತು ತಂಡಗಳು ತನ್ನ ಮೊದಲ ಪಂದ್ಯಗಳನ್ನಾಡಿದೆ. ಮೊದಲ ಮೂರು ದಿನದಲ್ಲಿ ಐದು ಪಂದ್ಯಗಳು ನಡೆದಿದ್ದು, ಅಭಿಮಾನಿಗಳು ಮತ್ತೆ ಐಪಿಎಲ್ ಮೂಡ್ ಗೆ ಬಂದಿದ್ದಾರೆ.
ಕಳೆದ ಶನಿವಾರ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ ಭೋಜ್ ಪುರಿ ಕಾಮೆಂಟರಿ ಇದೀಗ ವಿವಾದಕ್ಕೆ ಕಾರಣವಾಗಿದೆ.
ಹೈದರಾಬಾದ್ ರನ್-ಚೇಸ್ ನ ಅಂತಿಮ ಓವರ್ ಗೆ ಮೊದಲು ಹೆನ್ರಿಚ್ ಕ್ಲಾಸೆನ್ ಕೆಕೆಆರ್ ನ ದುಬಾರಿ ಖರೀದಿಯಾದ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಮಿಡ್-ವಿಕೆಟ್ ಬೌಂಡರಿ ಕಡೆಗೆ ಬೃಹತ್ ಸಿಕ್ಸರ್ ಬಾರಿಸಿದರು.
ಇದಾದ ನಂತರ, ಭೋಜ್‌ಪುರಿ ಕಾಮೆಂಟೇಟರ್ಸ್ ಕ್ಲಾಸೆನ್ ಅದ್ಬುತವಾದ ಹೊಡೆತವನ್ನು ಆಡಿದ್ದಕ್ಕಾಗಿ ಶ್ಲಾಘಿಸಿದರು. ಆದರೆ ಅವರು ಆ ಹೊಡೆತವನ್ನು ವಿವರಿಸುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಕಾಮೆಂಟೇಟರ್ ಗಳನ್ನು ತರಾಟೆಗೆ ತೆಗೆದುಕೊಂಡರು. ಅಭಿಮಾನಿಗಳಲ್ಲಿ ಒಬ್ಬರು ಕಾಮೆಂಟೇಟರ್ ಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಅಭಿಮಾನಿಯು ತನ್ನ ಟ್ವೀಟ್ ನಲ್ಲಿ ಭೋಜ್‌ಪುರಿ ನಟರಾದ ರವಿ ಕಿಶನ್ ಮತ್ತು ಮನೋಜ್ ತಿವಾರಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ.
“ಹೇ ರವಿಕಿಶನ್, ಮನೋಜ್ ತಿವಾರಿ, ಜಯ್ ಶಾ, ನಮ್ಮ ಭಾಷೆಯನ್ನು ಹೀನಾಯವಾಗಿ ಕೀಳಾಗಿಸುತ್ತಿರುವ ಈ ರಾಕ್ಷಸರನ್ನು ಕಿತ್ತೊಗೆಯುತ್ತೀರಾ.. ಈ ಕಿಡಿಗೇಡಿ ಕಾಮೆಂಟೇಟರ್ ಗಳಿಗೆ ಭೋಜ್‌ಪುರಿಯೇ ಗೊತ್ತಿಲ್ಲ… ನಾಚಿಕೆಯಾಗಬೇಕು.” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಕಾಮೆಂಟೇಟರ್ ಗಳನ್ನು ವಜಾಗೊಳಿಸಬೇಕು! ಐಪಿಎಲ್ ಅನ್ನು ಹೆಚ್ಚಾಗಿ ಎಲ್ಲಾ ಕುಟುಂಬ ಸದಸ್ಯರು ತಮ್ಮ ಊಟದ ಟೇಬಲ್ ನಲ್ಲಿ ವೀಕ್ಷಿಸುತ್ತಾರೆ! ಡಬಲ್ ಮೀನಿಂಗ್ ಲೈನ್ ಗಳನ್ನು ಹೊಂದಿರುವ ಇಂತಹ ಅಗ್ಗದ ಕಾಮೆಂಟರಿಗಳು ಭೋಜ್‌ಪುರಿಯನ್ನು ಪ್ರಚಾರ ಮಾಡುವ ಸಂಪೂರ್ಣ ಉದ್ದೇಶವನ್ನು ಹಾಳು ಮಾಡುತ್ತದೆ” ಎಂದು ಕಿಡಿಕಾರಿದ್ದಾರೆ.