ಲಕ್ನೋ: ಸತತ ಎರಡು ಸೋಲುಗಳಿಂದ ದಿಕ್ಕೆಟ್ಟಿರುವ ಪಂಜಾಬ್ ಕಿಂಗ್ಸ್ ಶನಿವಾರದ ದ್ವಿತೀಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅವರದೇ ಅಂಗಳದಲ್ಲಿ ಎದುರಿಸಲಿದೆ. ಶಿಖರ್ ಧವನ್ ಪಡೆಯ ಒಟ್ಟು ಸಮಸ್ಯೆ ಬ್ಯಾಟಿಂಗ್ ವಿಭಾಗದಲ್ಲಿ ದಟ್ಟವಾಗಿ ಗೋಚರಿಸುತ್ತಿದೆ. ಆರಂಭದ ಎರಡು ಪಂದ್ಯಗಳನ್ನು ಗೆದ್ದು ಭರ್ಜರಿ ಓಪನಿಂಗ್ ಪಡೆದ ಪಂಜಾಬ್ ಬಳಿಕ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿದೆ. ಅದರಲ್ಲೂ ಗುಜರಾತ್ ವಿರುದ್ಧ ಒಂದು ದಿನದ ಹಿಂದಷ್ಟೇ ತವರಿನ ಮೊಹಾಲಿ ಅಂಗಳದಲ್ಲೇ ಲಾಗ ಹಾಕಿದೆ.
ಇನ್ನೊಂದೆಡೆ ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ತಂಡ ನಾಲ್ಕರಲ್ಲಿ ಮೂರನ್ನು ಗೆದ್ದು ತನ್ನ “ಲಕ್’ ತೆರೆದಿರಿಸಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಗಳೂರು ಅಂಗಳದಲ್ಲೇ ಒಂದು ವಿಕೆಟ್‌ನಿಂದ ರೋಚಕವಾಗಿ ಮಣಿಸಿದ ಹುರುಪಿನಲ್ಲಿದೆ. ಪಂಜಾಬ್ ವಿರುದ್ಧ ತವರಿನ ಅಂಗಳದಲ್ಲೇ ಆಡುವುದರಿಂದ ಸಹಜವಾಗಿಯೇ ಲಕ್ನೋ ಮೇಲುಗೈ ನಿರೀಕ್ಷೆ ಇರಿಸಿಕೊಂಡಿದೆ.
ಆರ್‌ಸಿಬಿ ಎದುರು 213 ರನ್ ಚೇಸಿಂಗ್ ವೇಳೆ 105ಕ್ಕೆ 5 ವಿಕೆಟ್ ಉರುಳಿಸಿಕೊಂಡೂ ಗೆದ್ದು ಬಂದದ್ದು ಲಕ್ನೋ ತಾಕತ್ತಿಗೆ ಸಾಕ್ಷಿ. ಮಾರ್ಕಸ್ ಸ್ಟಾಯಿನಿಸ್, ನಿಕೋಲಸ್ ಪೂರನ್ ಬೆಂಗಳೂರು ಅಂಗಳದಲ್ಲಿ ಸುಂಟರಗಾಳಿಯಾಗಿದ್ದರು. ಆಯುಶ್ ಬದೋನಿ ಕೂಡ ರನ್ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆತಂಕವೆಂದರೆ, ಈ ವೆಸ್ಟ್ ಇಂಡೀಸ್ ಕ್ರಿಕೆಟಿಗರ ಸಾಹಸ ಒಂದು ಪಂದ್ಯಕ್ಕಷ್ಟೇ ಮೀಸಲಾಗಿರುವುದು. ಉದಾಹರಣೆಗೆ ಕೈಲ್ ಮೇಯರ್. ಆರ್‌ಸಿಬಿ ವಿರುದ್ಧ ಇವರದು ಶೂನ್ಯ ಸಂಪಾದನೆ. ಪೂರನ್ ಕೂಡ ಈ ಸಾಲಿಗೆ ಸೇರಿದರೆ ಲಕ್ನೋಗೆ ಕಷ್ಟವಿದೆ.
ಮೇಯರ್ ಸಿಡಿದರೆ ಮಾತ್ರ ಲಕ್ನೋಗೆ ದಿಟ್ಟ ಆರಂಭ ಸಾಧ್ಯ. ಇನ್ನೊಂದೆಡೆ ಕೆ.ಎಲ್. ರಾಹುಲ್ ತೀರಾ ನಿಧಾನಗತಿಯಿಂದ ಸಾಗುತ್ತಿದ್ದಾರೆ. ದೀಪಕ್ ಹೂಡಾ ಇನ್ನೂ ಹೊಡಿಬಡಿ ಪ್ರದರ್ಶನ ನೀಡಿಲ್ಲ. ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಒಮ್ಮೊಮ್ಮೆ ಎರಡರಲ್ಲೂ ಮಿಂಚುತ್ತಾರೆ, ಇಲ್ಲವೇ ಎರಡರಲ್ಲೂ ಕೈಕೊಡುತ್ತಾರೆ. ಆರ್‌ಸಿಬಿ ವಿರುದ್ಧ ಲಕ್ನೋ ಬೌಲಿಂಗ್ ಸಂಪೂರ್ಣ ಕೈಕೊಟ್ಟಿತ್ತು. ಎರಡೇ ವಿಕೆಟ್ ಕಿತ್ತು 212 ರನ್ ನೀಡಿದ್ದರು. ಲಕ್ನೋದ ಈ ವೈಫಲ್ಯವನ್ನೆಲ್ಲ ಪಂಜಾಬ್ ತನ್ನ ಲಾಭಕ್ಕೆ ಬಳಸಿಕೊಂಡರೆ ಪಂದ್ಯ ತೀವ್ರ ಪೈಪೋಟಿ ಕಂಡೀತು.
ಲಕ್ನೋ ಸೂಪರ್ ಜೈಂಟ್ಸ್ ತವರಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಡೆಲ್ಲಿಯನ್ನು 50 ರನ್ನುಗಳಿಂದ, ಹೈದರಾಬಾದನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಇವು ಅಷ್ಟೇನೂ ಪ್ರಬಲ ತಂಡಗಳಾಗಿರಲಿಲ್ಲ. ಇವರೆಡಕ್ಕಿಂತ ಪಂಜಾಬ್ ಬಲಿಷ್ಠ ಎಂದು ತೀರ್ಮಾನಿಸುವ ಹಾಗೂ ಇಲ್ಲ. ಇದರಿಂದ ತವರಿನಂಗಳದಲ್ಲಿ ರಾಹುಲ್ ಪಡೆಗೆ ಹ್ಯಾಟ್ರಿಕ್ ಗೆಲುವು ಒಲಿದರೆ ಅಚ್ಚರಿಯೇನಿಲ್ಲ.
* ಓಪನಿಂಗ್ ವೈಫಲ್ಯ: ಆರಂಭಿಕ ಪ್ರಭ್‌ಸಿಮ್ರಾನ್ ಸಿಂಗ್ ಅವರ ಸತತ ವೈಫಲ್ಯ ಪಂಜಾಬ್‌ಗ ಮುಳುವಾಗಿದೆ. ಶಾರ್ಟ್, ರಾಜಪಕ್ಸ, ಜಿತೇಶ್ ಶರ್ಮ, ಸ್ಯಾಮ್ ಕರನ್ ಅವರೆಲ್ಲ ಇನಿಂಗ್ಸ್ ಬೆಳೆಸಲು ವಿಫಲರಾಗುತ್ತಿದ್ದಾರೆ. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ಕ್ಯಾಗಿಸೊ ರಬಾಡ ಮಾತ್ರ ಯಶಸ್ಸು ಕಂಡರೆ ಪ್ರಯೋಜನವಿಲ್ಲ.