ಶುಕ್ರವಾರದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಡೆ 17.5 ಓವರ್‌ಗಳಲ್ಲಿ 118ಕ್ಕೆ ಆಲೌಟ್ ಆಯಿತು. ಇದು ತವರಿನ ಜೈಪುರ ಅಂಗಳದಲ್ಲಿ ರಾಜಸ್ಥಾನ್ ದಾಖಲಿಸಿದ ಕನಿಷ್ಠ ಗಳಿಕೆ. ಚೆನ್ನೈ ಎದುರಿನ 2012ರ ಪಂದ್ಯದಲ್ಲಿ 6ಕ್ಕೆ 126 ರನ್ ಗಳಿಸಿದ್ದು ಈವರೆಗಿನ ಕಡಿಮೆ ಸ್ಕೋರ್ ಆಗಿತ್ತು. ಜವಾಬಿತ್ತ ಗುಜರಾತ್ 13.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 119 ರನ್ ಬಾರಿಸಿತು. ಇದು 10 ಪಂದ್ಯಗಳಲ್ಲಿ ಗುಜರಾತ್ ಸಾಧಿಸಿದ 7ನೇ ಗೆಲುವು. 14 ಅಂಕಗಳೊಂದಿಗೆ ಅದು ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಚೇಸಿಂಗ್ ವೇಳೆ ಗುಜರಾತ್ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಸಾಹಾ-ಗಿಲ್ ಸೇರಿಕೊಂಡು 71 ರನ್ ಪೇರಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ಸಿಡಿದು ನಿಂತರು. ಬ್ಯಾಟಿಂಗ್‌ನಂತೆ ರಾಜಸ್ಥಾನ್ ಬೌಲಿಂಗ್ ಕೂಡ ದಿಕ್ಕು ತಪ್ಪಿತು.
Advertisement
ರಶೀದ್ ಖಾನ್ (14ಕ್ಕೆ 3), ನೂರ್ ಅಹ್ಮದ್ (25ಕ್ಕೆ 2) ಸೇರಿಕೊಂಡು ಆತಿಥೇಯರ ಮೇಲೆ ಘಾತಕವಾಗಿ ಎರಗಿದರು. ಪವರ್ ಪ್ಲೇ ತನಕ ರಾಜಸ್ಥಾನ್ ಬ್ಯಾಟಿಂಗ್ ಉತ್ತಮ ಮಟ್ಟದಲ್ಲೇ ಇತ್ತು. 2 ವಿಕೆಟಿಗೆ ಭರ್ತಿ 50 ರನ್ ಒಟ್ಟುಗೂಡಿತ್ತು. ಆದರೆ ಅರ್ಧ ಹಾದಿ ಕ್ರಮಿಸುವಷ್ಟರಲ್ಲಿ ರಾಜಸ್ಥಾನ್ ಸ್ಥಿತಿ ಬಿಗಡಾಯಿಸತೊಡಗಿತು. 69 ರನ್ನಿಗೆ 5 ಪ್ರಮುಖ ವಿಕೆಟ್ ಉರುಳಿ ಹೋಯಿತು.
ರವಿಚಂದ್ರನ್ ಅಶ್ವಿನ್ (2), ರಿಯಾನ್ ಪರಾಗ್ (4) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. ದೇವದತ್ತ ಪಡಿಕ್ಕಲ್ ಎಸೆತಕ್ಕೊಂದರಂತೆ 12 ರನ್ ಮಾಡಿ ವಾಪಸಾದರು (ಒಂದು ಬೌಂಡರಿ). ಚೈನಾಮನ್ ಬೌಲರ್ ನೂರ್ ಅಹ್ಮದ್ ಮೊದಲ ಓವರ್‌ನಲ್ಲೇ ಪಡಿಕ್ಕಲ್ ವಿಕೆಟ್ ಉಡಾಯಿಸಿ ರಾಜಸ್ಥಾನ್ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದರು. ಧ್ರುವ ಜುರೆಲ್, ಶಿಮ್ರನ್ ಹೆಟ್‌ಮೈರ್ ಕೂಡ ಸಿಡಿಯಲು ವಿಫಲರಾದರು.