ಹೊಸದಿಲ್ಲಿ: ಮರಳಿ ಯತ್ನವ ಮಾಡು ಎಂಬ ಉಕ್ತಿಯಂತೆ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಗುರುವಾರ ತನ್ನ 6ನೇ ಪಂದ್ಯವನ್ನು ಆಡಲಿಳಿಯಲಿದೆ. ಗೆಲುವಿನ ಖಾತೆ ತೆರೆಯಲು ಮತ್ತೂಮ್ಮೆ ಪ್ರಯತ್ನಿಸಲಿದೆ. ಎದುರಾಳಿ ತಂಡ ಬಲಿಷ್ಠ ಕೋಲ್ಕತಾ ನೈಟ್‌ರೈಡರ್ ಎಂಬುದು ಡೆಲ್ಲಿಯ ಆತಂಕಕ್ಕೆ ಕಾರಣವಾಗಲೂಬಹುದು.
ಡೆಲ್ಲಿ ಈಗ “ಮಸ್ಟ್ ವಿನ್” ಸ್ಥಿತಿಯಲ್ಲಿದೆ. ಇನ್ನೊಂದು ಪಂದ್ಯ ಸೋತರೂ ಪ್ಲೇ-ಆಫ್ ಬಾಗಿಲು ಮುಚ್ಚುವ ಅಪಾಯವಿದೆ. ಆದರೆ ತಾನೆಣಿಸಿದಂತೆ ಏನೂ ಆಗದಿರುವುದೇ ಡೆಲ್ಲಿಯ ದೊಡ್ಡ ಸಮಸ್ಯೆಯಾಗಿದೆ. ಉಳಿದ ತಂಡಗಳೆಲ್ಲ ಗರಿಷ್ಠ 4, ಕನಿಷ್ಠ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೂ ಡೆಲ್ಲಿ ಮಾತ್ರ ಸೋಲಿನ ನಂಟನ್ನು ಇನ್ನೂ ಕಡಿದುಕೊಂಡಿಲ್ಲ. ಲಕ್ನೋ ವಿರುದ್ಧ 50 ರನ್, ಗುಜರಾತ್ ವಿರುದ್ಧ 6 ವಿಕೆಟ್, ರಾಜಸ್ಥಾನ್ ವಿರುದ್ಧ 57 ರನ್, ಮುಂಬೈ ವಿರುದ್ಧ 6 ವಿಕೆಟ್, ಆರ್‌ಸಿಬಿ ವಿರುದ್ಧ 23 ರನ್… ಹೀಗೆ ವಾರ್ನರ್ ಪಡೆಯ ಪತನ ಹಾಗೂ ದುರಂತ ಕಥನ ಮುಂದುವರಿಯುತ್ತ ಬಂದಿದೆ.
ಡೆಲ್ಲಿಯ ಗಂಭೀರ ಸಮಸ್ಯೆ ಓಪನಿಂಗ್‌ನಿಂದಲೇ ಶುರುವಾಗುತ್ತದೆ. 2021ರಲ್ಲಿ 479 ರನ್, ಕಳೆದ ವರ್ಷ 10 ಪಂದ್ಯಗಳಿಂದ 283 ರನ್ ಬಾರಿಸಿದ್ದ ಪೃಥ್ವಿ ಶಾ ಈ ಬಾರಿ ಬ್ಯಾಟಿಂಗೇ ಮರೆತಿದ್ದಾರೆ. ಮಿಚೆಲ್ ಮಾರ್ಷ್ ಸೊನ್ನೆಯ ನಂಟು ಬಿಟ್ಟಿಲ್ಲ. ಯಶ್ ಧುಲ್‌ಗೆ ಯಶಸ್ಸು ಸಿಗುತ್ತಿಲ್ಲ. ಆರ್‌ಸಿಬಿ ವಿರುದ್ಧ 2 ರನ್ನಿಗೆ ಈ ಮೂವರ ವಿಕೆಟ್ ಬಿದ್ದಿರುವುದು ಡೆಲ್ಲಿಯ ವೈಫಲ್ಯವನ್ನು ಬಿಚ್ಚಿಡುತ್ತದೆ. ಇಲ್ಲಿ ಪರಿಹಾರ ಕಾಣದೆ ಡೆಲ್ಲಿಗೆ ಯಶಸ್ಸು ಅಸಾಧ್ಯ.
ಪೃಥ್ವಿ ಶಾ ಬದಲು ಮನೀಷ್ ಪಾಂಡೆ ಅಥವಾ ಸಫìರಾಜ್ ಖಾನ್ ಅವರನ್ನು ಆರಂಭಿಕನನ್ನಾಗಿ ಕಳುಹಿಸಲು ಡೆಲ್ಲಿ ಯೋಚಿಸುತ್ತಿದೆ. ವಾರ್ನರ್ ಒಂದು ಕಡೆ ನಿಂತು ಆಡುವುದರಿಂದ ಇನ್ನೊಂದು ಬದಿಯಲ್ಲಿ ರನ್ ಪ್ರವಾಹ ಹರಿದು ಬರಬೇಕಿದೆ. ಡೆಲ್ಲಿಯ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೂಡ ಭರವಸೆದಾಯಕವಾಗಿಲ್ಲ. ಅಕ್ಷರ್ ಪಟೇಲ್ ಮಾತ್ರ ಒಂದಿಷ್ಟು ನಿರೀಕ್ಷೆ ಮೂಡಿಸುತ್ತಿದ್ದಾರೆ.
ಈ ವರ್ಷದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಕೆಕೆಆರ್, ಚಾಂಪಿಯನ್ ಗುಜರಾತ್ ತಂಡಕ್ಕೆ ಆಘಾತವಿಕ್ಕಿದ ಬಳಿಕ ಸತತ 2 ಪಂದ್ಯಗಳಲ್ಲಿ ಮುಗ್ಗರಿಸಿದೆ. ಹೈದರಾಬಾದ್ ವಿರುದ್ಧ ತವರಲ್ಲೇ 23 ರನ್ನುಗಳಿಂದ ಹಾಗೂ ಮುಂಬೈ ವಿರುದ್ಧ 5 ವಿಕೆಟ್‌ಗಳಿಂದ ಎಡವಿದೆ. ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ಕೆಕೆಆರ್ ಶತಪ್ರಯತ್ನ ಮಾಡುವುದು ಖಂಡಿತ.
ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ, ರಿಂಕು ಸಿಂಗ್, ರಸೆಲ್, ಸುನೀಲ್ ನಾರಾಯಣ್, ಚಕ್ರವರ್ತಿ ಅವರನ್ನೊಳಗೊಂಡ ಕೆಕೆಆರ್ ಡೆಲ್ಲಿಗಿಂತ ಬಲಾಡ್ಯ ಎಂಬುದರಲ್ಲಿ ಎರಡು ಮಾತಿಲ್ಲ.