Advertisement

IPL 2023: ಜಯಕ್ಕೆ ಕಾದಿವೆ ಚೆನ್ನೈ-ರಾಜಸ್ಥಾನ್‌

09:51 PM Apr 26, 2023 | Team Udayavani |

ಜೈಪುರ: ಐಪಿಎಲ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನ ಕಾವು ಏರತೊಡಗಿದೆ. ಇವೆಲ್ಲವೂ ಸೇಡಿನ ಪಂದ್ಯಗಳಾಗಿರುವುದರಿಂದ ಕುತೂಹಲವೂ ಇಮ್ಮಡಿಗೊಂಡಿದೆ. ಇಂಥದೊಂದು ತುರುಸಿನ ಮುಖಾಮುಖೀಗೆ ರಾಜಸ್ಥಾನ್‌ ರಾಯಲ್ಸ್‌-ಚೆನ್ನೈ ಸೂಪರ್‌ ಕಿಂಗ್ಸ್‌ ಸಾಕ್ಷಿಯಾಗಲಿವೆ. ಗುರುವಾರದ ಈ ಸ್ಪರ್ಧೆ ರಾಜಸ್ಥಾನ್‌ ತಂಡದ ತವರಾದ ಜೈಪುರದಲ್ಲಿ ನಡೆಯಲಿದೆ.

Advertisement

ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ರಾಜಸ್ಥಾನ್‌ 3 ರನ್ನುಗಳ ರೋಚಕ ಗೆಲುವು ಸಾಧಿಸಿತ್ತು. ಈಗ ರಾಜಸ್ಥಾನ್‌ ತವರಲ್ಲಿ ಚೆನ್ನೈ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದೆ.

ಚೆನ್ನೈಯಲ್ಲಿ ನಡೆದ ಮುಖಾಮುಖೀಯಲ್ಲಿ ರಾಜಸ್ಥಾನ್‌ 8 ವಿಕೆಟಿಗೆ 175 ರನ್‌ ಪೇರಿಸಿತ್ತು. ಇದನ್ನು ಬೆನ್ನಟ್ಟಿಕೊಂಡು ಹೋದ ಚೆನ್ನೈ 6 ವಿಕೆಟಿಗೆ 172 ರನ್‌ ಮಾಡಿ ಸೋಲಿನ ಮುಖ ಕಾಣಬೇಕಾಯಿತು. ನಾಯಕ ಮಹೇಂದ್ರ ಸಿಂಗ್‌ ಧೋನಿ ಮತ್ತು ರವೀಂದ್ರ ಜಡೇಜ ಕೊನೆಯ 5 ಓವರ್‌ಗಳಲ್ಲಿ ಕ್ರೀಸ್‌ ಆಕ್ರಮಿಸಿಕೊಂಡಿದ್ದರೂ ತಂಡವನ್ನು ದಡ ಸೇರಿಸಲು ವಿಫ‌ಲರಾಗಿದ್ದರು. ಡೆತ್‌ ಓವರ್‌ಗಳಲ್ಲಿ ಚೆನ್ನೈ 63 ರನ್‌ ಬಾರಿಸಬೇಕಾದ ಒತ್ತಡದಲ್ಲಿತ್ತು. ಸಿಡಿದು ನಿಂತ ಧೋನಿ 17 ಎಸೆತಗಳಿಂದ ಅಜೇಯ 32 ರನ್‌ ಹಾಗೂ ಜಡೇಜ 15 ಎಸೆತಗಳಿಂದ ಅಜೇಯ 25 ರನ್‌ ಮಾಡಿ ಬಾರಿಸಿದರು. ಆದರೆ ಅದೃಷ್ಟ ರಾಜಸ್ಥಾನ್‌ ಪಾಳಯವನ್ನು ಸೇರಿಕೊಂಡಿತ್ತು.

ಕೆಳಗಿಳಿದ ರಾಜಸ್ಥಾನ್‌:
ಅನಂತರ ಐಪಿಎಲ್‌ನಲ್ಲಿ ಸಾಕಷ್ಟು ಏರುಪೇರು ಸಂಭವಿಸಿದೆ. ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ರಾಜಸ್ಥಾನ್‌ ರಾಯಲ್ಸ್‌ ಅಗ್ರಸ್ಥಾನದಿಂದ ಕೆಳಗಿಳಿದಿದೆ. ಚೆನ್ನೈ ಏಳರಲ್ಲಿ 5 ಪಂದ್ಯ ಗೆದ್ದು, ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಇನ್ನು ಜೈಪುರದ ವಿಷಯ. ತವರಿನಂಗಳದಲ್ಲಿ 3 ವರ್ಷಗಳ ಬಳಿಕ ಮೊದಲ ಪಂದ್ಯವಾಡಿದ ರಾಜಸ್ಥಾನ್‌ 10 ರನ್ನುಗಳಿಂದ ಲಕ್ನೋಗೆ ಶರಣಾಗಿತ್ತು. ಹೀಗಾಗಿ ತವರಿನ ಅಭಿಮಾನಿಗಳನ್ನು ಮತ್ತೆ ನಿರಾಸೆಗೊಳಿಸಲು ಸಂಜು ಸ್ಯಾಮ್ಸನ್‌ ಪಡೆ ಬಯಸದು.

Advertisement

ಆದರೆ ರಾಜಸ್ಥಾನ್‌ ತನ್ನ ಬ್ಯಾಟಿಂಗ್‌ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸತತವಾಗಿ ವಿಫ‌ಲವಾಗುತ್ತಿದೆ. ಆರಂಭಕಾರ ಜಾಸ್‌ ಬಟ್ಲರ್‌ ಅವರ ಶೀಘ್ರ ನಿರ್ಗಮನ ತಂಡದ ಮೇಲೆ ಒತ್ತಡ ಹೇರುವಂತೆ ಮಾಡುತ್ತದೆ. ಜೈಸ್ವಾಲ್‌, ಸ್ಯಾಮ್ಸನ್‌, ಹೆಟ್‌ಮೈರ್‌, ಜುರೆಲ್‌ ಅವರೆಲ್ಲ ಈ ಒತ್ತಡವನ್ನು ನಿಭಾಯಿಸಲು ಅಶಕ್ತರಾದವರೇನೂ ಅಲ್ಲ. ಆದರೂ ರಾಜಸ್ಥಾನ್‌ ಬ್ಯಾಟಿಂಗ್‌ ಸ್ಫೋಟಿಸಲು ವಿಫ‌ಲವಾಗುತ್ತಿರುವುದು ಅಚ್ಚರಿಯ ಸಂಗತಿ.

ಚೆನ್ನೈ ಪ್ರಗತಿಯ ಪಥ:
ಚೆನ್ನೈಯದ್ದು ಇದಕ್ಕೆ ವ್ಯತಿರಿಕ್ತ ಸಾಧನೆ. ಅದು ಹಂತ ಹಂತವಾಗಿ ಪ್ರಗತಿಯ ಪಥದಲ್ಲಿ ಸಾಗುತ್ತ ಇದೀಗ ಟೇಬಲ್‌ ಟಾಪರ್‌ ಎನಿಸಿದೆ. ಡೇವನ್‌ ಕಾನ್ವೇ ಅವರ ಅರ್ಧ ಶತಕಗಳ ಸರಮಾಲೆ, ಅಜಿಂಕ್ಯ ರಹಾನೆ ಅವರ ಅಚ್ಚರಿಯ ಬಿಗ್‌ ಹಿಟ್ಟಿಂಗ್‌, ಶಿವಂ ದುಬೆ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಚೆನ್ನೈ ಬ್ಯಾಟಿಂಗ್‌ ಸರದಿಯ ಹೈಲೈಟ್ಸ್‌. ಗಾಯಕ್ವಾಡ್‌, ಜಡೇಜ, ಧೋನಿ, ರಾಯುಡು, ಮೊಯಿನ್‌ ಅಲಿ ಕೂಡ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಶ್ರೀಲಂಕಾದ ಇಬ್ಬರು ಬೌಲರ್‌ಗಳಿಂದ ಚೆನ್ನೈ ದಾಳಿ ಬಹಳ ಹರಿತಗೊಂಡಿದೆ. ಮಹೀಶ್‌ ತೀಕ್ಷಣ ಮತ್ತು ಮತೀಶ ಪತಿರಣ ಅವರನ್ನು ನಿಭಾಯಿಸುವುದು ಎದುರಾಳಿಗಳಿಗೆ ನಿಜಕ್ಕೂ ದೊಡ್ಡ ಸಮಸ್ಯೆಯಾಗಿ ಕಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next