Advertisement

ಬಲಿಷ್ಠ ಕಮ್‌ಬ್ಯಾಕ್‌ ಅಗತ್ಯವಿದೆ: ರವೀಂದ್ರ ಜಡೇಜ

11:10 PM Apr 04, 2022 | Team Udayavani |

ಮುಂಬಯಿ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಬಲಿಷ್ಠ ಕಮ್‌ಬ್ಯಾಕ್‌ ಮಾಡಬೇಕಾದ ಅಗತ್ಯವಿದೆ ಎಂಬುದಾಗಿ ತಂಡದ ನೂತನ ನಾಯಕ ರವೀಂದ್ರ ಜಡೇಜ ಅಭಿಪ್ರಾಯಪಟ್ಟಿದ್ದಾರೆ.

Advertisement

ರವಿವಾರ ರಾತ್ರಿ ಪಂಜಾಬ್‌ ಕಿಂಗ್ಸ್‌ ವಿರುದ್ಧ 54 ರನ್‌ ಸೋಲನುಭವಿಸಿದ ಬಳಿಕ ರವೀಂದ್ರ ಜಡೇಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

“ಪವರ್‌ ಪ್ಲೇ ಅವಧಿಯಲ್ಲಿ 4 ವಿಕೆಟ್‌ ಕಳೆದುಕೊಂಡದ್ದು ನಮಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿತು. ಮೊದಲ ಎಸೆತದಿಂದ ಹಿಡಿತ ಸಾಧಿಸುವಲ್ಲೂ ನಾವು ವಿಫ‌ಲರಾದೆವು. ಇದೂ ಸೇರಿದಂತೆ ಸಾಕಷ್ಟು ವೈಫ‌ಲ್ಯವನ್ನು ನೀಗಿಸಿಕೊಂಡು ನಾವು ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಬೇಕಾದ ಅಗತ್ಯವಿದೆ. ಇಂಥದೊಂದು ವಿಶ್ವಾಸವಿದೆ’ ಎಂಬುದಾಗಿ ಸತತ 3 ಸೋಲನುಭವಿಸಿದ ಒತ್ತಡದಲ್ಲಿದ್ದ ಜಡೇಜ ಹೇಳಿದರು.

“ಋತುರಾಜ್‌ ಗಾಯಕ್ವಾಡ್‌ ಅವರಲ್ಲಿ ಹೊಸ ಆತ್ಮವಿಶ್ವಾಸ ತುಂಬಿಸಿ, ಅವರನ್ನು ಫಾರ್ಮ್ಗೆ ಮರಳುವಂತೆ ಮಾಡಬೇಕು. ಅವರೋರ್ವ ಅತ್ಯುತ್ತಮ ಬ್ಯಾಟರ್‌ ಎಂಬುದು ಎಲ್ಲರಿಗೂ ತಿಳಿದಿದೆ. ಒಮ್ಮೆ ರನ್‌ ಪೇರಿಸಲಾರಂಭಿಸಿದರೆ ಅವರಿಂದ ತಂಡಕ್ಕೆ ದೊಡ್ಡ ಲಾಭವೇ ಆಗಲಿದೆ. ಶಿವಂ ದುಬೆ ಒತ್ತಡದ ಸಂದರ್ಭದಲ್ಲೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದೊಂದು ಪ್ಲಸ್‌ ಪಾಯಿಂಟ್‌. ಆದರೆ ದೀಪಕ್‌ ಚಹರ್‌ ಗೈರು ನಮ್ಮನ್ನು ತೀವ್ರವಾಗಿ ಕಾಡುತ್ತಿದೆ’ ಎಂದು ಜಡೇಜ ಹೇಳಿದರು.

ಇದನ್ನೂ ಓದಿ:ಗರಿಷ್ಠ ಬೌಂಡರಿ ದಾಖಲೆಯ ಸನಿಹ ಶಿಖರ್‌ ಧವನ್‌

Advertisement

“ಪವರ್‌ ಪ್ಲೇಯಲ್ಲಿ ವಿಕೆಟ್‌ ಉರುಳಿಸುವುದು ಅತೀ ಮುಖ್ಯ. ಇಲ್ಲಿ 2-3 ವಿಕೆಟ್‌ ಬೀಳಲೇಬೇಕು. ದೀಪಕ್‌ ಚಹರ್‌ ಇಲ್ಲದಿರುವುದರಿಂದ ನಮ್ಮ ಯೋಜನೆ ಕೈಗೂಡುತ್ತಿಲ್ಲ. ಹೊಸ ಚೆಂಡಿನಲ್ಲಿ ವಿಕೆಟ್‌ ಉರುಳಿಸುವ ಸಾಮರ್ಥ್ಯ ಚಹರ್‌ ಅವರಲ್ಲಿದೆ. ಅವರು ಬೇಗನೇ ತಂಡಕ್ಕೆ ಮರಳಲಿದ್ದಾರೆ’ ಎಂದರು ರವೀಂದ್ರ ಜಡೇಜ.

ಚೆನ್ನೈಗೆ ಹ್ಯಾಟ್ರಿಕ್‌ ಸೋಲು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌ 8 ವಿಕೆಟಿಗೆ 180 ರನ್‌ ಗಳಿಸಿದರೆ, ಚೆನ್ನೈ 18 ಓವರ್‌ಗಳಲ್ಲಿ 126ಕ್ಕೆ ಕುಸಿಯಿತು. ಶಿವಂ ದುಬೆ ಏಕಾಂಗಿಯಾಗಿ ಹೋರಾಡಿ 57 ರನ್‌ ಬಾರಿಸಿದರು. ರಾಹುಲ್‌ ಚಹರ್‌ 3, ಲಿವಿಂಗ್‌ಸ್ಟೋನ್‌ ಮತ್ತು ವೈಭವ್‌ ಅರೋರ ತಲಾ 2 ವಿಕೆಟ್‌ ಉಡಾಯಿಸಿ ಪಂಜಾಬ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಚೆನ್ನೈಗೆ ಎದುರಾದ ಸತತ 3ನೇ ಸೋಲು. ಉದ್ಘಾಟನ ಪಂದ್ಯದಲ್ಲಿ ಕೆಕೆಆರ್‌ಗೆ 6 ವಿಕೆಟ್‌ಗಳಿಂದ ಶರಣಾಗಿದ್ದ ಚೆನ್ನೈ, ಬಳಿಕ ಲಕ್ನೋಗೂ ಇಷ್ಟೇ ಅಂತರದಿಂದ ಸೋತಿತ್ತು.

ಎಕ್ಸ್‌ಟ್ರಾ ಇನ್ಸಿಂಗ್ಸ್‌
ಪಂಜಾಬ್‌-ಚೆನ್ನೈ
– ಚೆನ್ನೈ ರನ್‌ ಅಂತರದಲ್ಲಿ ತನ್ನ 2ನೇ ಅತೀ ದೊಡ್ಡ ಸೋಲನುಭವಿಸಿತು (54 ರನ್‌). 2013ರಲ್ಲಿ ಮುಂಬೈಗೆ 60 ರನ್ನುಗಳಿಂದ ಸೋತದ್ದು ದಾಖಲೆ.
– 2018ರ ಬಳಿಕ ಚೆನ್ನೈ ಕೇವಲ 2ನೇ ಸಲ ಆಲೌಟ್‌ ಆಯಿತು.
– ಪಂಜಾಬ್‌ ಪ್ರಸಕ್ತ ಐಪಿಎಲ್‌ನಲ್ಲಿ 10 ಓವರ್‌ಗಳಲ್ಲಿ 100 ರನ್‌ ಪೇರಿಸಿದ ಮೊದಲ ತಂಡವಾಗಿ ಮೂಡಿಬಂತು.
– ಎಂ.ಎಸ್‌. ಧೋನಿ 250 ಟಿ20 ಪಂದ್ಯ ಆಡಿದ ಭಾರತದ 2ನೇ ಆಟಗಾರನೆನಿಸಿದರು. ರೋಹಿತ್‌ ಶರ್ಮ ಅಗ್ರಸ್ಥಾನಿಯಾಗಿದ್ದಾರೆ (372 ಪಂದ್ಯ).
– ಲಿಯಮ್‌ ಲಿವಿಂಗ್‌ಸ್ಟೋನ್‌ ಐಪಿಎಲ್‌ನಲ್ಲಿ ಅತ್ಯುತ್ತಮ ವೈಯಕ್ತಿಕ ಬ್ಯಾಟಿಂಗ್‌ ಸಾಧನೆಗೈದರು (60 ರನ್‌). ಜತೆಗೆ ಈ ಐಪಿಎಲ್‌ನಲ್ಲಿ 4ನೇ ಅತೀ ವೇಗದ ಅರ್ಧ ಶತಕ ದಾಖಲಿಸಿದರು (27 ಎಸೆತ). ಬಳಿಕ ಶಿವಂ ದುಬೆ ಈ ಸ್ಥಾನಕ್ಕೆ ಏರಿದರು (26 ಎಸೆತ).
– ಲಿವಿಂಗ್‌ಸ್ಟೋನ್‌ ಟಿ20 ಪಂದ್ಯಗಳಲ್ಲಿ 250 ಸಿಕ್ಸರ್‌ ಪೂರ್ತಿಗೊಳಿಸಿದರು.
– ಡ್ವೇನ್‌ ಬ್ರಾವೊ ಪಂಜಾಬ್‌ ವಿರುದ್ಧ 24 ವಿಕೆಟ್‌ ಉರುಳಿಸಿ 4ನೇ ಸ್ಥಾನಿಯಾದರು. ಭುವನೇಶ್ವರ್‌ ಕುಮಾರ್‌ 5ನೇ ಸ್ಥಾನಕ್ಕೆ ಇಳಿದರು (23 ವಿಕೆಟ್‌).
– ಶಿವಂ ದುಬೆ ಐಪಿಎಲ್‌ನಲ್ಲಿ ದ್ವಿತೀಯ ಅತ್ಯುತ್ತಮ ವೈಯಕ್ತಿಕ ಬ್ಯಾಟಿಂಗ್‌ ಪ್ರದರ್ಶನವಿತ್ತರು (57). ಕಳೆದ ವರ್ಷ ಚೆನ್ನೈ ವಿರುದ್ಧ ಅಜೇಯ 64 ರನ್‌ ಬಾರಿಸಿದ್ದು ಅತ್ಯುತ್ತಮ ಸಾಧನೆಯಾಗಿದೆ.
– ಋತುರಾಜ್‌ ಗಾಯಕ್ವಾಡ್‌ ಸತತ 3 ಐಪಿಎಲ್‌ ಋತುಗಳ ಪ್ರಥಮ 3 ಪಂದ್ಯಗಳಲ್ಲಿ 10 ರನ್‌ ಗಡಿ ದಾಟಲು ವಿಫ‌ಲರಾದರು. (2020ರಲ್ಲಿ 0, 5, 0 ರನ್‌; 2021ರಲ್ಲಿ 5, 5, 10 ರನ್‌; ಈ ಬಾರಿ 0, 1 ಮತ್ತು 1 ರನ್‌).

Advertisement

Udayavani is now on Telegram. Click here to join our channel and stay updated with the latest news.

Next