Advertisement

ಸನ್‌ರೈಸರ್  ಹೈದರಾಬಾದ್‌ ವೇಗಕ್ಕೆ ಎದೆಯೊಡ್ಡಿ ನಿಂತೀತೇ ಚೆನ್ನೈ ಸೂಪರ್‌ ಕಿಂಗ್ಸ್‌?

08:49 AM May 01, 2022 | Team Udayavani |

ಪುಣೆ: ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಅಳಿವು ಉಳಿವಿನ ಅಂಚಿನಲ್ಲಿದೆ. ಇನ್ನೊಂದೆಡೆ ಕಳೆದ ಸಲ ತೀರಾ ಕಳಪೆ ಪ್ರದರ್ಶನ ನೀಡಿದ್ದ ಸನ್‌ರೈಸರ್ ಹೈದರಾಬಾದ್‌ ಈ ಬಾರಿ ಟಾಪ್‌-4 ಸ್ಥಾನಕ್ಕೆ ಗಟ್ಟಿಯಾಗಿ ಅಂಟಿಕೊಂಡು ಮುನ್ನಡೆಯ ಹಾದಿ ಹಿಡಿದಿದೆ.

Advertisement

ರವಿವಾರದಮುಖಾಮುಖಿಯಲ್ಲಿ ಚೆನ್ನೈ-ಹೈದರಾಬಾದ್‌ ಪರಸ್ಪರ ಎದುರಾಗಲಿದ್ದು, ಇಲ್ಲಿನ ಫಲಿತಾಂಶ ಕೂಟದ ಒಂದು ಹಂತದ ಸ್ಥಿತಿಗತಿಯನ್ನು ಖಾತ್ರಿಪಡಿಸಲಿದೆ.

ಇಲ್ಲಿ ಚೆನ್ನೈ ಸೋತರೆ ಅದು ಟೂರ್ನಿಯಿಂದ ತನ್ನ ನಿರ್ಗಮನವನ್ನು ಬಹುತೇಕ ಖಚಿತಗೊಳಿಸಲಿದೆ. ಇನ್ನೊಂದೆಡೆ ಕೇನ್‌ ವಿಲಿಯಮ್ಸನ್‌ ಪಡೆಯ ಟಾಪ್‌-4 ಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ.

ಫಲಿತಾಂಶವೇನಾದರೂ ಉಲ್ಟಾ ಹೊಡೆದರೆ ರವೀಂದ್ರ ಜಡೇಜ ಟೀಮ್‌ಗೆ ಒಂದು ಲೈಫ್‌ಲೈನ್‌ ಲಭಿಸಿದಂತಾಗುತ್ತದೆ. ಹೈದರಾಬಾದ್‌ಗೆ ಹೇಳಿಕೊಳ್ಳುವಂಥ ಹಿನ್ನಡೆಯೇನೂ ಆಗುವುದಿಲ್ಲ.

ವೇಗವೇ ಹೈದರಾಬಾದ್‌ ಅಸ್ತ್ರ
ಅನುಮಾನವೇ ಇಲ್ಲ, ವೇಗದ ಬೌಲಿಂಗೇ ಹೈದರಾಬಾದ್‌ ತಂಡದ ಪ್ರಧಾನ ಅಸ್ತ್ರ. ಈ ವೇಗವನ್ನು ನಿಭಾಯಿಸಿ ನಿಂತರಷ್ಟೇ ಎದುರಾಳಿಗೆ ಗೆಲುವು ಸಾಧ್ಯ. ಹಿಂದಿನ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವೇಗಕ್ಕೆ ಸಡ್ಡು ಹೊಡೆದೇ ಗೆದ್ದು ಬಂದುದನ್ನು ಮರೆಯುವಂತಿಲ್ಲ. ಅಂತಿಮ ಓವರ್‌ನಲ್ಲಿ ವೇಗಿ ಮಾರ್ಕೊ ಜಾನ್ಸೆನ್‌ಗೆ 22 ರನ್‌ ಕೂಡ ಉಳಿಸಿಕೊಳ್ಳಲಾಗಲಿಲ್ಲ. ರಶೀದ್‌ ಖಾನ್‌, ರಾಹುಲ್‌ ತೆವಾಟಿಯ ಸೇರಿಕೊಂಡು ಜಾನ್ಸೆನ್‌ ಎಸೆತಗಳಿಗೆ ಜಬರ್ದಸ್ತ್ ಉತ್ತರ ನೀಡಿ ತಂಡದ ಜಯಭೇರಿ ಮೊಳಗಿಸಿದ್ದರು. ಒಂದು ವೇಳೆ ಚೆನ್ನೈಗೂ ಇಂಥದೇ ಸನ್ನಿವೇಶ ಎದುರಾದರೆ ಯಶಸ್ವಿಯಾಗಿ ನಿಭಾಯಿಸೀತೇ, ಅಥವಾ ಇಂಥ ಪರಿಸ್ಥಿತಿಯನ್ನು ನಿಭಾಯಿಸುವವರು ಅಲ್ಲಿ ಯಾರಿದ್ದಾರೆ? ಇದು ಪ್ರಶ್ನೆ.

Advertisement

ಶರವೇಗದಲ್ಲಿ ಚೆಂಡನ್ನೆಸೆಯುವ ಉಮ್ರಾನ್‌ ಮಲಿಕ್‌ ಚೆನ್ನೈಗೆ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ. ಗುಜರಾತ್‌ ವಿರುದ್ಧ 5 ವಿಕೆಟ್‌ ಉಡಾಯಿಸಿದ್ದ ಮಲಿಕ್‌, ಪಂದ್ಯವನ್ನು ಹೈದರಾಬಾದ್‌ ಅಂಗಳಕ್ಕೆ ತಂದು ನಿಲ್ಲಿಸಿದ್ದರು. ಅಕಸ್ಮಾತ್‌ ಅಂತಿಮ ಓವರ್‌ ಮಲಿಕ್‌ಗೆ ಸಿಕ್ಕಿದ್ದರೆ ಪಂದ್ಯದ ಫಲಿತಾಂಶವೇ ಬೇರೆ ಆಗುತ್ತಿತ್ತು ಎಂಬುದು ಅನೇಕರ ಅನಿಸಿಕೆ.

ಉಳಿದಂತೆ ಭುವನೇಶ್ವರ್‌ ಕುಮಾರ್‌, ಟಿ. ನಟರಾಜನ್‌, ವಾಷಿಂಗ್ಟನ್‌ ಸುಂದರ್‌, ಸೀನ್‌ ಅಬೋಟ್‌, ಕಾರ್ತಿಕ್‌ ತ್ಯಾಗಿ ಮೊದಲಾದವರು ಹೈದರಾಬಾದ್‌ ಬೌಲಿಂಗ್‌ ಯೂನಿಟ್‌ನ ಪ್ರಮುಖರು. ಕರ್ನಾಟಕದ ಜಗದೀಶ್‌ ಸುಚಿತ್‌, ಶ್ರೇಯಸ್‌ ಗೋಪಾಲ್‌ ಆಲ್‌ರೌಂಡರ್‌ಗಳ ಸ್ಥಾನವನ್ನು ಭರ್ತಿಮಾಡಬಲ್ಲರು.

ತಂಡ ನಂಬುಗೆಯ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದೆ. ವಿಲಿಯಮ್ಸನ್‌, ಅಭಿಷೇಕ್‌ ಶರ್ಮ, ತ್ರಿಪಾಠಿ, ಮಾರ್ಕ್‌ರಮ್‌, ಪೂರಣ್‌ ಪ್ರಮುಖರು. ನಿಂತು ಆಡುವುದರಲ್ಲಿ ಹೈದರಾಬಾದ್‌ ತಂಡವನ್ನು ಬಿಟ್ಟರಿಲ್ಲ ಎಂಬುದು ಎಲ್ಲರ ಅಭಿಪ್ರಾಯ.

ಚೆನ್ನೈ ಹಾದಿ ಕಠಿನ
ಉಳಿದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತ ಹೋಗಬೇಕೆಂಬುದೇ ಚೆನ್ನೈಗೆ ಎದುರಾಗಿರುವ ದೊಡ್ಡ ಹಿನ್ನಡೆ. ಅಂಥ ಸಾಮರ್ಥ್ಯ ಕೂಡ ಈಗಿನ ತಂಡದಲ್ಲಿಲ್ಲ. ತಂಡ ಯಾರ ಮೇಲೆ ವಿಶ್ವಾಸವಿರಿಸಿತ್ತೋ ಅವರ್ಯಾರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಗಾಯಕ್ವಾಡ್‌, ಉತ್ತಪ್ಪ, ಮೊಯಿನ್‌ ಅಲಿ, ಶಿವಂ ದುಬೆ, ಬ್ರಾವೊ, ಜಡೇಜ, ಸ್ಯಾಂಟ್ನರ್‌, ಜೋರ್ಡನ್‌ ಪ್ರಿಟೋರಿಯಸ್‌… ಎಲ್ಲರೂ ತಮ್ಮ ಜವಾಬ್ದಾರಿಯನ್ನು ಮರೆತಂತೆ ಆಡುತ್ತಿದ್ದಾರೆ. ಧೋನಿ ತಾನೆ ಎಷ್ಟು ಪಂದ್ಯವನ್ನು ಫಿನಿಶ್‌ ಮಾಡಬಲ್ಲರು?!

Advertisement

Udayavani is now on Telegram. Click here to join our channel and stay updated with the latest news.

Next