Advertisement

SRH VS KKR: ಹೊಸ ಹುರುಪಿನಲ್ಲಿ ಹೈದರಾಬಾದ್‌

10:16 PM Apr 14, 2022 | Team Udayavani |

ಮುಂಬಯಿ: ಸನ್‌ರೈಸರ್ ಹೈದರಾಬಾದ್‌ ಹೊಸ ಹುರುಪಿನಲ್ಲಿದೆ. ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡ ಬಳಿಕ ಲಯ ಕಂಡುಕೊಂಡ ಕೇನ್‌ ವಿಲಿಯಮ್ಸನ್‌ ಪಡೆ ಸತತ ಎರಡು ಪಂದ್ಯಗಳನ್ನು ಗೆದ್ದ ಖುಷಿಯಲ್ಲಿದೆ. ಇದೇ ಖುಷಿಯಲ್ಲಿ ಶುಕ್ರವಾರ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲಿದೆ.

Advertisement

4 ಪಂದ್ಯಗಳಲ್ಲಿ 2 ಗೆಲುವು ಕಂಡಿರುವ ಹೈದರಾಬಾದ್‌ 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಕೆಕೆಆರ್‌ ಐದರಲ್ಲಿ 3 ಜಯ ಸಾಧಿಸಿ ದ್ವಿತೀಯ ಸ್ಥಾನ ಅಲಂಕರಿಸಿದೆ. ಈ ಲೆಕ್ಕಾಚಾರದಲ್ಲಿ ಶ್ರೇಯಸ್‌ ಅಯ್ಯರ್‌ ಪಡೆಯೇ ಫೇವರಿಟ್‌. ಆದರೆ ಈ ಚುಟುಕು ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು.

ಅಮೋಘ ಚೇತರಿಕೆ :

ಸನ್‌ರೈಸರ್ ತನ್ನ ಮೊದಲೆರಡು ಪಂದ್ಯಗಳಲ್ಲಿ ರಾಜಸ್ಥಾನ್‌ ಮತ್ತು ಲಕ್ನೋಗೆ ಶರಣಾಗಿತ್ತು. ಆದರೆ ಚೆನ್ನೈ ಹಾಗೂ ಗುಜರಾತ್‌ಗೆ ಸೋಲುಣಿಸಿ ಅಮೋಘ ಚೇತರಿಕೆ ಕಂಡಿತು. ಗೆಲುವಿನ ನಾಗಾಲೋಟದಲ್ಲಿದ್ದ ಗುಜರಾತ್‌ಗೆ ಮೊದಲ ಸೋಲುಣಿಸಿದ್ದು ಹೈದರಾಬಾದ್‌ ಹೆಗ್ಗಳಿಕೆ.

ಆದರೆ ತಂಡದ ಪ್ರಧಾನ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಕೈಗೆ ಏಟು ಅನುಭವಿಸಿ ಹೊರಗುಳಿದಿರುವುದು ಹೈದರಾಬಾದ್‌ಗೆ ಎದುರಾದ ದೊಡ್ಡ ಆಘಾತ. ತಮ್ಮ ಸ್ಪಿನ್‌ ಬೌಲಿಂಗ್‌ನಿಂದ ಬ್ಯಾಟರ್‌ಗಳನ್ನು ನಿಯಂತ್ರಿಸಿ, ಬಳಿಕ ಉಪಯುಕ್ತ ರನ್‌ ಕೂಡ ಗಳಿಸುತ್ತಿದ್ದ ವಾಷಿಂಗ್ಟನ್‌ ತಂಡದ ದೊಡ್ಡ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸೀಸನ್‌ನಲ್ಲಿ 4 ವಿಕೆಟ್‌ ಜತೆಗೆ ಒಂದು ಅರ್ಧ ಶತಕ ಬಾರಿಸಿದ ಹೆಗ್ಗಳಿಕೆ ವಾಷಿಂಗ್ಟನ್‌ ಅವರದಾಗಿದೆ.

Advertisement

ವಾಷಿಂಗ್ಟನ್‌ ಸುಂದರ್‌ ಸ್ಥಾನಕ್ಕೆ ಉತ್ತಮ ಎನ್ನಬಹುದಾದ ಬದಲಿ ಆಯ್ಕೆಗಳಿವೆ. ಕರ್ನಾಟಕದ ಶ್ರೇಯಸ್‌ ಗೋಪಾಲ್‌ ಮತ್ತು ಜಗದೀಶ್‌ ಸುಚಿತ್‌ ಇವರಲ್ಲಿ ಪ್ರಮುಖರು. ಇವರಿಬ್ಬರೂ ಆಲ್‌ರೌಂಡರ್‌ಗಳಾಗಿದ್ದಾರೆ.

ಹೈದರಾಬಾದ್‌ ಸೋಲಿಗೆ ಓಪನಿಂಗ್‌ ವೈಫ‌ಲ್ಯ ಮುಖ್ಯ ಕಾರಣವಾಗಿತ್ತು. ಆದರೆ ಅಭಿಷೇಕ್‌ ಶರ್ಮ ಮತ್ತು ಕೇನ್‌ ವಿಲಿಯಮ್ಸನ್‌ ಜತೆಗೂಡಿ ಕಳೆದೆರಡು ಪಂದ್ಯಗಳಲ್ಲಿ ಇದಕ್ಕೆ ಪರಿಹಾರ ಒದಗಿಸಿದ್ದಾರೆ. ಅಭಿಷೇಕ್‌ 75 ಮತ್ತು 42 ರನ್‌, ವಿಲಿಯಮ್ಸನ್‌ 32 ಮತ್ತು 57 ರನ್‌ ಬಾರಿಸಿ ಗಮನ ಸೆಳೆದಿದ್ದಾರೆ.

ರಾಹುಲ್‌ ತ್ರಿಪಾಠಿ ಪಾತ್ರವೂ ನಿರ್ಣಾಯಕವಾಗಲಿದೆ. ಗುಜರಾತ್‌ ಎದುರಿನ ಪಂದ್ಯದ ವೇಳೆ ಅವರು ಗಾಯಾಳಾಗಿದ್ದರು. ಈಗ ಚೇತರಿಸಿಕೊಂಡಿದ್ದಾರೆ. ಪೂರಣ್‌, ಮಾರ್ಕ್‌ರಮ್‌ ಮತ್ತಿಬ್ಬರು ಪ್ರಮುಖ ಬ್ಯಾಟರ್. ಬೌಲಿಂಗ್‌ನಲ್ಲಿ ವೇಗವೇ ಹೈದರಾಬಾದ್‌ನ ಪ್ರಮುಖ ಅಸ್ತ್ರ. ಜಾನ್ಸೆನ್‌, ಭುವನೇಶ್ವರ್‌, ನಟರಾಜನ್‌, ಉಮ್ರಾನ್‌ ಮಲಿಕ್‌ ಇಲ್ಲಿನ ಹೀರೋಸ್‌.

ಹಳಿ ತಪ್ಪಿದ ಬೌಲಿಂಗ್‌ :

ಇನ್ನೊಂದೆಡೆ ಕೆಕೆಆರ್‌ ತನ್ನ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 44 ರನ್ನುಗಳ ಸೋಲಿಗೆ ಸಿಲುಕಿದ ಆಘಾತದಲ್ಲಿದೆ. ಡೆಲ್ಲಿಗೆ 215 ರನ್‌ ಬಿಟ್ಟುಕೊಡುವ ಮೂಲಕ ತಂಡದ ಬೌಲಿಂಗ್‌ ಹಳಿ ತಪ್ಪಿದಂತೆ ಕಂಡುಬಂದಿದೆ. ಉಮೇಶ್‌ಯಾದವ್‌ ಪಾಲಿಗೆ ಇದು ಮೊದಲ ಬ್ಯಾಡ್‌ ಮ್ಯಾಚ್‌ ಆಗಿತ್ತು. ಕಮಿನ್ಸ್‌, ಚಕ್ರವರ್ತಿ ಕೂಡ ದುಬಾರಿಯಾಗಿದ್ದರು. ಹೈದರಾಬಾದ್‌ ವಿರುದ್ಧ ಆಡುವಾಗ ಈ ವೈಫ‌ಲ್ಯವನ್ನು ಮೊದಲು ಹೊಡೆದೋಡಿಸಬೇಕಿದೆ.

ಕೆಕೆಆರ್‌ ಮಿಡ್ಲ್ ಆರ್ಡರ್‌ ಗಟ್ಟಿಯಾಗಿದ್ದರೂ ಓಪನಿಂಗ್‌ ಜೋಶ್‌ ಸಾಲದು. ರಹಾನೆ-ವೆಂಕಟೇಶ್‌ ಅಯ್ಯರ್‌ ಸಿಡಿದು ನಿಲ್ಲಬೇಕಾದ ಅಗತ್ಯವಿದೆ. ಆಗ ಶ್ರೇಯಸ್‌ ಅಯ್ಯರ್‌, ರಾಣಾ, ರಸೆಲ್‌, ಬಿಲ್ಲಿಂಗ್ಸ್‌ ಮೊದಲಾದವರ ಕೆಲಸ ಸುಲಭವಾಗಲಿದೆ. ಕಮಿನ್ಸ್‌, ಸುನೀಲ್‌ ನಾರಾಯಣ್‌ ಬಿರುಸಿನ ಆಟವಾಡಿದರೆ ಅದು ತಂಡಕ್ಕೊಂದು ಬೋನಸ್‌!

Advertisement

Udayavani is now on Telegram. Click here to join our channel and stay updated with the latest news.

Next