Advertisement

IPL 2022: ಇಂದು ಅಗರ್ವಾಲ್‌-ಅಯ್ಯರ್‌ ಪಡೆಗಳ ಮೇಲಾಟ

10:41 PM Mar 31, 2022 | Team Udayavani |

ಮುಂಬಯಿ: ಒಂದೇ ದಿನದ ವಿರಾಮದ ಬಳಿಕ ಕೋಲ್ಕತಾ ನೈಟ್‌ರೈಡರ್ ಪ್ರಸಕ್ತ ಐಪಿಎಲ್‌ ಋತುವಿನ 3ನೇ ಪಂದ್ಯವನ್ನು ಆಡಲಿಳಿಯಬೇಕಿದೆ. ಶುಕ್ರ ವಾರದ ಮುಖಾಮುಖಿಯಲ್ಲಿ ಅದು ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ. ಮಾಯಾಂಕ್‌ ಅಗರ್ವಾಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಪಡೆಗಳ ಕಾಳಗ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಅತ್ಯಂತ ಬಲಿಷ್ಠ ಪಡೆಯನ್ನು ಹೊಂದಿರುವ ಪಂಜಾಬ್‌ ಕಿಂಗ್ಸ್‌ ತನ್ನ ಏಕೈಕ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 206 ರನ್‌ ಬೆನ್ನಟ್ಟಿ ವಿಜಯಿಯಾದ ಉತ್ಸಾಹದಲ್ಲಿದೆ. ಇನ್ನೊಂದೆಡೆ ಕೆಕೆಆರ್‌ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಗೆ ಸೋಲುಣಿಸಿದರೂ ಕಳೆದ ರಾತ್ರಿಯಷ್ಟೇ ಆರ್‌ಸಿಬಿಗೆ 3 ವಿಕೆಟ್‌ಗಳಿಂದ ಸೋತ ಆಘಾತದಲ್ಲಿದೆ.

ಪಂಜಾಬ್‌ ಬ್ಯಾಟಿಂಗ್‌ ಬಲಿಷ್ಠ :

ಆರ್‌ಸಿಬಿ ಎದುರಿನ ದೊಡ್ಡ ಮಟ್ಟದ ಮೇಲಾಟದಲ್ಲಿ ಪಂಜಾಬ್‌ ತಂಡದ ಬ್ಯಾಟಿಂಗ್‌ ಕ್ಲಿಕ್‌ ಆಗಿತ್ತೇನೋ ನಿಜ, ಆದರೆ ಬೌಲಿಂಗ್‌ ವಿಭಾಗ ತೀರಾ ದುರ್ಬಲವಾಗಿ ಗೋಚರಿಸಿತ್ತು. ಡು ಪ್ಲೆಸಿಸ್‌ ಪಡೆ ಬರೀ ಎರಡೇ ವಿಕೆಟಿಗೆ 205 ರನ್‌ ಪೇರಿಸಿತ್ತು. ಒಡಿಯನ್‌ ಸ್ಮಿತ್‌, ಹರ್‌ಪ್ರೀತ್‌ ಬ್ರಾರ್‌, ಆರ್ಷದೀಪ್‌ ಸಿಂಗ್‌, ಸಂದೀಪ್‌ ಶರ್ಮ ಕ್ಲಿಕ್‌ ಆಗಿರಲಿಲ್ಲ. ನಿಯಂತ್ರಣ ಸಾಧಿಸಿದ್ದು ರಾಹುಲ್‌ ಚಹರ್‌ ಮಾತ್ರ.

ಗೆಲುವಿನ ನಡುವೆಯೂ ಪಂಜಾಬ್‌ ಪಾಲಿಗೆ ಇದೊಂದು ಚಿಂತೆಯ ಸಂಗತಿಯಾಗಿಯೇ ಉಳಿದಿತ್ತು. ಆದರೆ… ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕಾಗಿಸೊ ರಬಾಡ ಆಗಮನದಿಂದ ತಂಡಕ್ಕೊಂದು “ಬಿಗ್‌ ಬೂಸ್ಟ್‌’ ಸಿಕ್ಕಿದೆ. ಬೌಲಿಂಗ್‌ ಚಿಂತೆ ಬಗೆಹರಿಯುವ ಸಾಧ್ಯತೆ ಇದೆ.

Advertisement

ಆರ್‌ಸಿಬಿ ವಿರುದ್ಧ ಪಂಜಾಬ್‌ ಮೂರೇ ವಿದೇಶಿ ಆಟಗಾರರನ್ನು ಕಣಕ್ಕಿಳಿಸಿತ್ತು. ಈಗ ರಬಾಡ ಅವರಿಗಾಗಿ ಆರ್ಷದೀಪ್‌ ಸಿಂಗ್‌ ಹೊರಗುಳಿಯಬಹುದು.

ಪಂಜಾಬ್‌ ಬ್ಯಾಟಿಂಗ್‌ ಸದೃಢವಾಗಿದೆ. ಅಗರ್ವಾಲ್‌, ಧವನ್‌, ರಾಜಪಕ್ಸ, ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌, ಒಡಿಯನ್‌ ಸ್ಮಿತ್‌ ಅವರೆಲ್ಲ ದೈತ್ಯ ಬ್ಯಾಟರ್‌ಗಳಾಗಿದ್ದಾರೆ. ಕಿರಿಯರ ವಿಶ್ವಕಪ್‌ನಲ್ಲಿ ಮಿಂಚಿದ ರಾಜ್‌ ಬಾವಾ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರೂ ಇನ್ನೊಂದು ಅವಕಾಶ ಪಡೆಯುವ ಸಾಧ್ಯತೆ ಇದೆ.

ಕೆಕೆಆರ್‌ ಬೌಲಿಂಗ್‌ ಘಾತಕ :

ಕೆಕೆಆರ್‌ನ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವಿಭಾಗ ನಿರೀಕ್ಷಿತ ಯಶಸ್ಸು ಪಡೆದಿರಲಿಲ್ಲ. ಚೆನ್ನೈ ವಿರುದ್ಧ ಲಭಿಸಿದ್ದು ಸಣ್ಣ ಮೊತ್ತದ ಚೇಸಿಂಗ್‌. ಅಲ್ಲಿ ರಹಾನೆ ಗರಿಷ್ಠ 44 ರನ್‌ ಮಾಡಿದ್ದರು. ಆರ್‌ಸಿಬಿ ಎದುರು ಮೊದಲು ಬ್ಯಾಟಿಂಗ್‌ ನಡೆಸಿದರೂ ಗಳಿಸಿದ್ದು 128 ರನ್‌ ಮಾತ್ರ. ಇಲ್ಲಿ ಆ್ಯಂಡ್ರೆ ರಸೆಲ್‌ ಅವರ 25 ರನ್ನೇ ದೊಡ್ಡ ಮೊತ್ತವಾಗಿತ್ತು. ರಹಾನೆ, ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ, ಶ್ರೇಯಸ್‌ ಅಯ್ಯರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಶೆಲ್ಡನ್‌ ಜಾಕ್ಸನ್‌, ಆ್ಯಂಡ್ರೆ ರಸೆಲ್‌, ಸುನೀಲ್‌ ನಾರಾಯಣ್‌ ಅವರೆಲ್ಲ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಬೇಕಾದ ಅಗತ್ಯವಿದೆ.

ಕೆಕೆಆರ್‌ ಬೌಲಿಂಗ್‌ ಹೆಚ್ಚು ಘಾತಕವಾಗಿ ಗೋಚರಿಸಿದೆ. ಚೆನ್ನೈಯನ್ನು 131ಕ್ಕೆ ನಿಯಂತ್ರಿಸಿದ್ದು, 129 ಟಾರ್ಗೆಟ್‌ ವೇಳೆ ಆರ್‌ಸಿಬಿಯ 7 ವಿಕೆಟ್‌ ಉಡಾಯಿಸಿದ್ದೆಲ್ಲ ಇದಕ್ಕೆ ಸಾಕ್ಷಿ. ಉಮೇಶ್‌ ಯಾದವ್‌ ಪವರ್‌ ಪ್ಲೇಯಲ್ಲಿ ಬೌಲಿಂಗ್‌ ಪವರ್‌ ತೋರಿಸಿರುವುದು ಕೆಕೆಆರ್‌ ಪಾಲಿಗೊಂದು ಪ್ಲಸ್‌ ಪಾಯಿಂಟ್‌.

Advertisement

Udayavani is now on Telegram. Click here to join our channel and stay updated with the latest news.

Next