Advertisement

ಸವಾರಿಯ ತಯಾರಿಯಲ್ಲಿ  ಡೆಲ್ಲಿ-ರಾಜಸ್ಥಾನ್‌ 

10:20 PM Apr 21, 2022 | Team Udayavani |

ಮುಂಬಯಿ: “ಕೊರೊನಾ ಕೋ ಗೋಲಿ ಮಾರೋ’ ಎಂಬ ರೀತಿಯಲ್ಲಿ ಒಮ್ಮೆಲೇ ಸಿಡಿದು ನಿಂತ ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ರಾತ್ರಿಯ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ಗೆ ಯಾವ ರೀತಿ ಹೊಡೆತವಿಕ್ಕಿತು ಎಂಬುದನ್ನು ಎಲ್ಲರೂ ಬಲ್ಲರು. ರಿಷಭ್‌ ಪಂತ್‌ ಪಡೆಯ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಅಷ್ಟೊಂದು ಘಾತಕವಾಗಿ ಪರಿಣಮಿಸಿತ್ತು. ಇದೇ ಜೋಶ್‌ನಲ್ಲಿ ಶುಕ್ರವಾರ ಬಲಿಷ್ಠ ರಾಜಸ್ಥಾನ್‌ ರಾಯಲ್ಸ್‌ಗೂ ಹೊಡೆತವಿಕ್ಕುವ ಯೋಜನೆ ಡೆಲ್ಲಿಯದ್ದು.

Advertisement

ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಈ ಕೂಟದ ಅತ್ಯಂತ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ತಕ್ಕ ಪ್ರದರ್ಶನ ನೀಡುತ್ತಲೇ ಬಂದಿದೆ. ಆಡಿದ ಆರರಲ್ಲಿ ನಾಲ್ಕನ್ನು ಜಯಿಸಿದ್ದು, ಎರಡನ್ನಷ್ಟೇ ಸೋತಿದೆ. ಆರೇಂಜ್‌ ಹಾಗೂ ಪರ್ಪಲ್‌ ಕ್ಯಾಪ್‌ಧಾರಿಗಳಿಬ್ಬರೂ ರಾಜಸ್ಥಾನ್‌ ತಂಡದಲ್ಲೇ ಇದ್ದಾರೆಂಬುದು ವಿಶೇಷ. ಇವರೆಂದರೆ ಅವಳಿ ಶತಕವೀರ ಜಾಸ್‌ ಬಟ್ಲರ್‌ (375 ರನ್‌) ಮತ್ತು ಹ್ಯಾಟ್ರಿಕ್‌ ಹೀರೋ ಯಜುವೇಂದ್ರ ಚಹಲ್‌ (17 ವಿಕೆಟ್‌). ಇನ್ನೊಂದೆಡೆ ಡೆಲ್ಲಿ ಆರರರಲ್ಲಿ 3 ಪಂದ್ಯಗಳನ್ನು ಜಯಿಸಿದೆ.

ರಾಜಸ್ಥಾನ್‌ ಅಮೋಘ ಆಟ :

ಡೆಲ್ಲಿಯಂತೆ ರಾಜಸ್ಥಾನ್‌ ಕೂಡ ಕಳೆದ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಕೆಕೆಆರ್‌ ವಿರುದ್ಧದ ಬ್ಯಾಟಿಂಗ್‌ ಮೇಲಾಟದಲ್ಲಿ ಅದು 7 ರನ್ನುಗಳ ರೋಚಕ ಜಯ ಸಾಧಿಸಿತ್ತು. ಬಟ್ಲರ್‌ ಅವರ ಶತಕ, ಚಹಲ್‌ ಅವರ ಹ್ಯಾಟ್ರಿಕ್‌ ಸಾಧನೆ ಹಾಗೂ 5 ವಿಕೆಟ್‌ ಬೇಟೆಯಿಂದ ರಾಜಸ್ಥಾನ್‌ಗೆ ಗೆಲುವು ಒಲಿದಿತ್ತು. ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸೇರಿದಂತೆ 4 ವಿಕೆಟ್‌ ಉಡಾಯಿಸಿದ ಚಹಲ್‌ “ಮ್ಯಾಚ್‌ ಟರ್ನರ್‌’ ಆಗಿ ಮೂಡಿಬಂದಿದ್ದರು. ಚಹಲ್‌ ಅವರ ಈ ಮ್ಯಾಜಿಕಲ್‌ ಸ್ಪೆಲ್‌ ಅಲ್ಲದೇ ಹೋಗಿದ್ದರೆ ರಾಜಸ್ಥಾನ್‌ಗೆ ಗೆಲುವು ಒಲಿಯುವುದು ಅನುಮಾನವಿತ್ತು.

ಈ ಪಂದ್ಯದಲ್ಲಿ ಟಾಸ್‌ ಪಾತ್ರ ಅಷ್ಟೇನೂ ಮಹತ್ವದ್ದಲ್ಲ. ಬೃಹತ್‌ ಮೊತ್ತವನ್ನು ಪೇರಿಸುವ ಸಾಮರ್ಥ್ಯ ಎರಡೂ ತಂಡಗಳಿಗಿದೆ. ರಾಜಸ್ಥಾನ್‌ ಬಳಗ ಬಟ್ಲರ್‌, ಪಡಿಕ್ಕಲ್‌, ಸ್ಯಾಮ್ಸನ್‌, ಹೆಟ್‌ಮೈರ್‌ ಅವರನ್ನು ನಂಬಿದೆ. ಡೆಲ್ಲಿಯಲ್ಲಿ ವಾರ್ನರ್‌, ಪೃಥ್ವಿ ಶಾ, ಪಂತ್‌, ಪೊವೆಲ್‌ ಇದ್ದಾರೆ. ಆದರೆ ಎರಡೂ ತಂಡಗಳ ಮಿಡ್ಲ್ ಆರ್ಡರ್‌ ಹೇಳುವಷ್ಟು ಗಟ್ಟಿಯಾಗಿಲ್ಲ. ಅಕಸ್ಮಾತ್‌ ಅಗ್ರ ಕ್ರಮಾಂಕ ವೈಫ‌ಲ್ಯ ಅನುಭವಿಸಿದ್ದೇ ಆದರೆ ಅಪಾಯ ತಪ್ಪಿದ್ದಲ್ಲ.

Advertisement

ಬೌಲಿಂಗ್‌ ಘಾತಕ :

ಎರಡೂ ತಂಡಗಳ ಬೌಲಿಂಗ್‌ ಘಾತಕ ಹಾಗೂ ವೈವಿಧ್ಯಮಯ. ಫಾಸ್ಟ್‌, ಸ್ಪಿನ್‌, ಆಲ್‌ರೌಂಡರ್ ಹೇರಳವಾಗಿದ್ದಾರೆ. ಡೆಲ್ಲಿ ತಂಡದ ಶಾದೂìಲ್‌ ಠಾಕೂರ್‌, ಖಲೀಲ್‌ ಅಹ್ಮದ್‌, ಲಲಿತ್‌ ಯಾದವ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಮುಸ್ತಫಿಜುರ್‌ ಕಳೆದ ಪಂದ್ಯದಲ್ಲಿ ಜಾದೂ ಮಾಡಿದ್ದಾರೆ. ಇವರೆಲ್ಲ ಸೇರಿ ರಾಜಸ್ಥಾನ್‌ ತಂಡದ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ನಿಯಂತ್ರಿಸಿದರೆ ಅದು ಡೆಲ್ಲಿಗೆ ಸಲ್ಲಲಿರುವ ದೊಡ್ಡ ಯಶಸ್ಸು.

ಹಾಗೆಯೇ ಡೆಲ್ಲಿಯ ಬ್ಯಾಟಿಂಗ್‌ ಕೂಡ ಸ್ಫೋಟಕ. ಇವರನ್ನ ತಡೆದು ನಿಲ್ಲಲು ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಸ್ಪಿನ್‌ದ್ವಯರಾದ ಅಶ್ವಿ‌ನ್‌, ಚಹಲ್‌ ಯಶಸ್ವಿಯಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next