Advertisement

ಹೆಚ್ಚುತ್ತಿರುವ ಕೋವಿಡ್ ಪ್ರಕರಣ : ಮುಂದುವರಿಯಲಿದೆ ಕಿವೀಸ್‌, ಇಂಗ್ಲೆಂಡ್‌ ಕ್ರಿಕೆಟಿಗರ ಆಟ

11:18 PM Apr 27, 2021 | Team Udayavani |

ಹೊಸದಿಲ್ಲಿ : ಭಾರತದಲ್ಲಿ ಮಿತಿಮೀರುತ್ತಿರುವ ಕೊರೊನಾ ಕೇಸ್‌ಗಳಿಂದಾಗಿ ಆಸ್ಟ್ರೇಲಿಯದ ಕೆಲವು ಕ್ರಿಕೆಟಿಗರ ಜತೆಗೆ ತವರಿನ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಐಪಿಎಲ್‌ನಿಂದ ಹಿಂದೆ ಸರಿದ ಒಂದೇ ದಿನದಲ್ಲಿ ಗಮನಾರ್ಹ ಬೆಳವಣಿಗೆಯೊಂದು ಸಂಭವಿಸಿದೆ. ಕೋವಿಡ್‌ ಆತಂಕವಿದ್ದರೂ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

Advertisement

ನ್ಯೂಜಿಲ್ಯಾಂಡ್‌ ಪ್ರಕಟನೆ
ಮಂಗಳವಾರ ಪ್ರಕಟನೆಯೊಂದನ್ನು ಹೊರಡಿಸಿದ ನ್ಯೂಜಿಲ್ಯಾಂಡ್‌ ಪ್ಲೇಯರ್ ಅಸೋಸಿಯೇಶನ್‌ ಅಧ್ಯಕ್ಷ ಹೀತ್‌ ಮಿಲ್ಸ್‌, “ಭಾರತದಲ್ಲಿ ಹಬ್ಬಿರುದ ಕೊರೊನಾ ತೀವ್ರ ತೆಯ ನಡುವೆಯೂ ತಮ್ಮ ದೇಶದ ಯಾವುದೇ ಆಟಗಾರರು ಐಪಿಎಲ್‌ ಬಿಟ್ಟು ಸ್ವದೇಶಕ್ಕೆ ಮರಳುವ ನಿರ್ಧಾರಕ್ಕೆ ಬಂದಿಲ್ಲ. ಭಾರತದಲ್ಲಿ ಕಲ್ಪಿಸಲಾದ ಜೈವಿಕ ಸುರಕ್ಷಾ ವ್ಯವಸ್ಥೆ ಬಗ್ಗೆ ಸಂಪೂರ್ಣ ತೃಪ್ತಿ ಹೊಂದಿದ್ದಾರೆ’ ಎಂದಿದ್ದಾರೆ.

“ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣದ ಬಗ್ಗೆ ನಮ್ಮ ಕ್ರಿಕೆಟಿಗರಿಗೆ ಖಂಡಿತವಾಗಿಯೂ ಆತಂಕವಿದೆ. ಆದರೆ ಫ್ರಾಂಚೈಸಿಗಳು ತಮ್ಮನ್ನು ಅತ್ಯಂತ ಕಾಳಜಿ ಹಾಗೂ ಮುತುವರ್ಜಿಯಿಂದ ನೋಡಿಕೊಳ್ಳುತ್ತಿರುವ ಬಗ್ಗೆ ಸಮಾಧಾನವಿದೆ. ತಾವು ಬಯೋ ಬಬಲ್‌ ಏರಿಯಾದಲ್ಲಿ ಅತ್ಯಂತ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಹೊಂದಿದ್ದಾರೆ’ ಎಂದು ಹೀತ್‌ ಮಿಲ್ಸ್‌ ಹೇಳಿದ್ದಾರೆ.

“ಹೊಟೇಲ್‌ನಲ್ಲಿ 4 ತಂಡಗಳು ಉಳಿದುಕೊಂಡಿವೆ. ಈ ಹೊಟೇಲನ್ನು ಲಾಕ್‌ಡೌನ್‌ ಮಾಡಲಾಗಿದೆ. ಹೀಗಾಗಿ ಸಮಸ್ಯೆ ಇಲ್ಲ. ಆದರೆ ಇನ್ನೊಂದು ನಗರಕ್ಕೆ ತೆರಳುವಾಗ ಸಮಸ್ಯೆ ಕಂಡು ಬಂದೀತು. ಆಗ ಪಿಪಿಇ ಕಿಟ್‌ ಧರಿಸಬೇಕಾದೀತು. ಆದರೆ ಈ ವರೆಗೆ ನ್ಯೂಜಿಲ್ಯಾಂಡಿನ ಯಾವ ಕ್ರಿಕೆಟಿಗರೂ ಐಪಿಎಲ್‌ ಕೂಟವನ್ನು ನಡುವಲ್ಲಿ ತೊರೆಯುವ ಬಗ್ಗೆ ಮಾತಾಡಿಲ್ಲ’ ಎಂದು ಮಿಲ್ಸ್‌ ಹೇಳಿದರು.

ಮೌನ ಮುರಿದ ಇಸಿಬಿ
ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಕೂಡ ಮೌನ ಮುರಿದಿದೆ. ತಮ್ಮ ದೇಶದ ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಇವರೆಲ್ಲರ ಸುರಕ್ಷತೆ ಬಗ್ಗೆ ದಿನಂಪ್ರತಿ ಮಾಹಿತಿ ಪಡೆಯಲಾಗುತ್ತಿದೆ ಎಂದಿದೆ.

Advertisement

“ಇಸಿಬಿ ಪಾಲಿಗೆ ಇದೊಂದು ಅತ್ಯಂತ ಸೂಕ್ಷ್ಮ ಪರಿಸ್ಥಿತಿ. ಭಾರತದಲ್ಲಿರುವ ಪ್ರತಿಯೊಬ್ಬ ಆಟಗಾರನೊಂದಿಗೆ ವೈಯಕ್ತಿ ಕವಾಗ ಚರ್ಚಿಸಿ ಅಭಿಪ್ರಾಯವನ್ನು ತಿಳಿದುಕೊಳ್ಳುತ್ತಿದ್ದೇವೆ. ಸದ್ಯ ಯಾರೂ ಐಪಿಎಲ್‌ನಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿಲ್ಲ ಎಂಬುದಾಗಿ ಇಸಿಬಿ ವಕ್ತಾರರೊಬ್ಬರು “ನ್ಪೋರ್ಟ್ಸ್ ಮೇಲ್‌’ಗೆ ತಿಳಿಸಿದ್ದಾರೆ.

ವಿದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ಭರವಸೆ
ಭಾರತದಲ್ಲಿ ಕೊರೊನಾ ಪ್ರಕರಣಗಳು ಮಿತಿಮೀರುತ್ತಿವೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯದ ಮೂವರು ಕ್ರಿಕೆಟಿಗರು ಐಪಿಎಲ್‌ ತ್ಯಜಿಸಿ ಸ್ವದೇಶಕ್ಕೆ ಮರಳಿದ್ದಾರೆ. ಈ ಘಟನೆಯ ಅನಂತರ ವಿದೇಶಿ ಕ್ರಿಕೆಟಿಗರಿಗೆ ಬಿಸಿಸಿಐ ಬಲವಾದ ಭರವಸೆ ನೀಡಿದೆ. “ವಿದೇಶದ ಪ್ರತಿಯೊಬ್ಬ ಆಟಗಾರನೂ ಸುರಕ್ಷಿತವಾಗಿ, ಸುಗಮವಾಗಿ ತನ್ನ ದೇಶವನ್ನು ಸೇರಿಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿ. ಅದು ಸಾಧ್ಯವಾಗುವವರೆಗೆ ಐಪಿಎಲ್‌ ಮುಗಿದಿಲ್ಲವೆಂದೇ ನಾವು ಭಾವಿಸುತ್ತೇವೆಂದು’ ಬಿಸಿಸಿಐ ಸಿಒಒ ಹೇಮಾಂಗ್‌ ಅಮೀನ್‌ ಹೇಳಿದ್ದಾರೆ.

“ಸ್ವಂತ ವ್ಯವಸ್ಥೆಯಲ್ಲಿ ದೇಶಕ್ಕೆ ಮರಳಬೇಕು’
ಪ್ರಸ್ತುತ ಭಾರತದಲ್ಲಿನ ಕೊರೊನಾ ಪರಿಸ್ಥಿತಿಯಿಂದ ಕಂಗಾಲಾಗಿರುವ ಆಸ್ಟ್ರೇಲಿಯ, ಭಾರತದಿಂದ ಬರುವ ವಿಮಾನಗಳನ್ನು ನಿಷೇಧಿಸಿದೆ. ಇದೇ ವೇಳೆ ಆಸೀಸ್‌ ಪ್ರಧಾನಿ ಸ್ಕಾಟ್‌ ಮಾರಿಸನ್‌, ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯ ಆಟಗಾರರು ತಮ್ಮ ಸ್ವಂತ ವ್ಯವಸ್ಥೆಯಲ್ಲಿ ದೇಶಕ್ಕೆ ಮರಳಬೇಕೆಂದು ಸೂಚಿಸಿದ್ದಾರೆ. ಇದು ಆಸೀಸ್‌ ಕ್ರಿಕೆಟಿಗರಿಗೆ ಆತಂಕ ತಂದರೂ ಬಿಸಿಸಿಐ ಭರವಸೆಯಿಂದ ಆಟಗಾರರು ನೆಮ್ಮದಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next