ಹೊಸದಿಲ್ಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಕೂಟವಾದ
ಐಪಿಎಲ್‌ನ ಬಹುಮಾನ ಮೊತ್ತದಲ್ಲಿ ಭಾರೀ ಕಡಿತವಾಗಿದೆ. ಬುಧವಾರದ ದಿಢೀರ್ ಬೆಳವಣಿಗೆಯೊಂದರಲ್ಲಿ ಇದನ್ನು ಶೇ. 50ರಷ್ಟು ಕಡಿತಗೊಳಿಸಿದ
ಬಿಸಿಸಿಐ, ಫ್ರಾಂಚೈಸಿ ಹಾಗೂ ತಂಡದ ಮಾಲಕರಿಗೆ ಭಾರೀ ಶಾಕ್ ನೀಡಿದೆ. ಮಾ. 29ರಿಂದ ಆರಂಭವಾಗಲಿರುವ 13ನೇ ಆವೃತ್ತಿಯಿಂದಲೇ ಇದು ಜಾರಿಗೆ ಬರಲಿದೆ.
ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಸಿಸಿಐ ಈ ದಿಟ್ಟ ಕ್ರಮ ಕೈಗೊಂಡಿದೆ. ಅದರಂತೆ ಈ ಬಾರಿಯ ಐಪಿಎಲ್ ಚಾಂಪಿಯನ್ ತಂಡಕ್ಕೆ 20 ಕೋಟಿ ರೂ. ಬದಲು ಕೇವಲ 10 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ.
ರನ್ನರ್ ಆಫ್ ತಂಡಕ್ಕೆ ನೀಡಲಾಗುತ್ತಿದ್ದ 12.5 ಕೋಟಿ ರೂ. ಬಹುಮಾನವನ್ನು 6.25 ಕೋಟಿ ರೂ.ಗೆ ಇಳಿಸಲಾಗಿದೆ. 3ನೇ ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ 4.3 ಕೋ.ರೂ. ಲಭಿಸಲಿದೆ. ಈ ಹಿಂದೆ 8.75 ಕೋ. ರೂ. ನೀಡಲಾಗುತ್ತಿತ್ತು.
ಬಿಸಿನೆಸ್ ಕ್ಲಾಸ್ ಪ್ರಯಾಣ ಇಲ್ಲ
ಐಪಿಎಲ್ ಪಂದ್ಯಗಳ ವೇಳೆ ಬಿಸಿಸಿಐ ಅಧಿಕಾರಿಗಳಿಗೆ ಒದಗಿಸಲಾಗುತ್ತಿದ್ದ ವಿಮಾನದ ಬಿಸಿನೆಸ್ ಕ್ಲಾಸ್ ಟಿಕೆಟ್ ಪ್ರಯಾಣಕ್ಕೂ ಕತ್ತರಿ ಹಾಕಲಾಗಿದೆ.