Advertisement

IPL‌ ಉದ್ಘಾಟನಾ ಪಂದ್ಯ: ಮುಂಬೈ ಇಂಡಿಯನ್ಸ್‌ ಎದುರು ಸಿಎಸ್ ಕೆ ಬದಲು ಆರ್‌ಸಿಬಿ?

04:45 PM Aug 31, 2020 | sudhir |

ಹೊಸದಿಲ್ಲಿ: ಐಪಿಎಲ್‌ಗಾಗಿ ಈಗಾಗಲೇ ಯುಎಇ ತಲುಪಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೋವಿಡ್ ಆಕ್ರಮಣದಿಂದ ತತ್ತರಿಸಿದೆ. ಹೀಗಾಗಿ ಸೆ. 19ರ ಉದ್ಘಾಟನಾ ಪಂದ್ಯದಲ್ಲಿ ಅದು ಮುಂಬೈ ಇಂಡಿಯನ್ಸ್‌ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ದೂರಾಗಿದೆ. ಸಿಎಸ್‌ಕೆ ತಂಡದ ಕ್ವಾರಂಟೈನ್‌ ಅವಧಿ ವಿಸ್ತರಣೆಯಾಗಿದ್ದು, ಇದರಿಂದ ಅಭ್ಯಾಸ ಕೂಡ ವಿಳಂಬವಾಗುವುದೇ ಇದಕ್ಕೆ ಕಾರಣ.

Advertisement

ಹಾಗಾದರೆ 2020ನೇ ಸಾಲಿನ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಎದುರಾಗುವ ತಂಡಗಳು ಯಾವುದು ಎಂಬ ಕುತೂಹಲ ತೀವ್ರಗೊಂಡಿದೆ. ಒಂದು ಕಡೆ ಮುಂಬೈ ಇಂಡಿಯನ್ಸ್‌ ತಂಡವಂತೂ ಇದ್ದೇ ಇರುತ್ತದೆ. ಕಾರಣ, ಅದು ಹಾಲಿ ಚಾಂಪಿಯನ್‌. ರೋಹಿತ್‌ ಶರ್ಮ ಪಡೆಯ ಎದುರಾಳಿ ಯಾವುದು ಎಂಬುದು ಸದ್ಯದ ಪ್ರಶ್ನೆ.

ವರದಿಗಳ ಪ್ರಕಾರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಬದಲು ವಿರಾಟ್‌ ಕೊಹ್ಲಿ ಸಾರಥ್ಯದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮೊದಲ ಪಂದ್ಯದಿಂದಲೇ ಜೋಶ್‌
“ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್‌ಸಿಬಿ ಆಡಲಿಳಿಯಬಹುದು. ಯಾವತ್ತೂ ಈ ಶ್ರೀಮಂತ ಕೂಟದ ಉದ್ಘಾಟನಾ ಪಂದ್ಯದಲ್ಲಿ ಸ್ಟಾರ್‌ ಆಟಗಾರರನ್ನು ಒಳಗೊಂಡ ತಂಡಗಳು ಮುಖಾಮುಖೀ ಆಗುವುದು ಸಂಪ್ರದಾಯ. ಮೊದಲ ಪಂದ್ಯದಿಂದಲೇ ಕೂಟದ ಜೋಶ್‌ ಹೆಚ್ಚಬೇಕು ಎಂಬುದು ಇದರ ಉದ್ದೇಶ. ಧೋನಿ ನೇತೃತ್ವದ ಸಿಎಸ್‌ಕೆ ಆಡದೇ ಹೋದರೆ, ಸ್ಟಾರ್‌ ಕ್ರಿಕೆಟಿಗರನ್ನು ಹೊಂದಿರುವ ಮತ್ತೂಂದು ತಂಡವೆಂದರೆ ಆರ್‌ಸಿಬಿ. ಆದರೆ ಚೆನ್ನೈ ಆರಂಭಿಕ ಪಂದ್ಯದಲ್ಲಿ ಆಡುವ ಅಥವಾ ಆಡದಿರುವ ವಿಚಾರ ಇನ್ನೂ ಅಧಿಕೃತಗೊಂಡಿಲ್ಲ. ಐಪಿಎಲ್‌ ಆಡಳಿತ ಮಂಡಳಿ ಈ ಕುರಿತು ಗಂಭೀರವಾಗಿ ಚಿಂತಿಸುತ್ತಿದೆ’ ಎಂಬುದಾಗಿ ಮೂಲವೊಂದರಿಂದ ತಿಳಿದು ಬಂದಿದೆ.

2019ರ ಫೈನಲಿಸ್ಟ್‌ ತಂಡಗಳನ್ನೇ 2020ರ ಉದ್ಘಾಟನಾ ಪಂದ್ಯದಲ್ಲಿ ಆಡಿಸುವುದು ಬಿಸಿಸಿಐ ಯೋಜನೆಯಾಗಿತ್ತು. ಕಳೆದ ವರ್ಷ ಮುಂಬೈ ಮತ್ತು ಚೆನ್ನೈ ತಂಡಗಳು ಹೈದರಾಬಾದ್‌ನಲ್ಲಿ ನಡೆದ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಿದ್ದವು. ರೋಹಿತ್‌ ಪಡೆ ಒಂದು ರನ್ನಿನ ರೋಚಕ ಜಯ ದಾಖಲಿಸಿ ಟ್ರೋಫಿಯನ್ನೆತ್ತಿತ್ತು.

Advertisement

ಸ್ಟಾರ್‌ ಆಟಗಾರರ ಪಡೆ
ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಈವರೆಗೆ ಚಾಂಪಿಯನ್‌ ಆಗದೇ ಹೋದರೂ ವಿಶ್ವ ದರ್ಜೆಯ ಸ್ಟಾರ್‌ ಆಟಗಾರರನ್ನು ಹೊಂದಿದೆ. ಆರನ್‌ ಫಿಂಚ್‌, ಎಬಿ ಡಿ ವಿಲಿಯರ್, ಮೊಯಿನ್‌ ಅಲಿ, ಕ್ರಿಸ್‌ ಮಾರಿಸ್‌, ಡೇಲ್‌ ಸ್ಟೇನ್‌, ಯಜುವೇಂದ್ರ ಚಹಲ್‌, ಇಸುರು ಉದಾನ ಅವರೊಂದಿಗೆ ನವದೀಪ್‌ ಸೈನಿ, ಶಿವಂ ದುಬೆ, ದೇವದತ್ತ ಪಡಿಕ್ಕಲ್‌, ವಾಷಿಂಗ್ಟನ್‌ ಸುಂದರ್‌ ಮೊದಲಾದ ಭರವಸೆಯ ಆಟಗಾರರಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಮುಂಬೈಯನ್ನು ಎದುರಿಸಲು ಆರ್‌ಸಿಬಿಯೇ ಸೂಕ್ತ ಎಂಬುದು ಬಿಸಿಸಿಐ ನಿರ್ಧಾರವಾದರೆ ಅಚ್ಚರಿಯೇನಿಲ್ಲ.

ಸ್ಟಾರ್‌ ಕ್ರಿಕೆಟಿಗರ ಪಡೆಯನ್ನೇ ಹೊಂದಿರುವ ಸನ್‌ರೈಸರ್ ಹೈದರಾಬಾದ್‌ ಕೂಡ ರೇಸ್‌ನಲ್ಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next