Advertisement

ಕೆಕೆಆರ್‌ –ಹೈದರಾಬಾದ್‌: ಸೋತ ತಂಡಗಳ ಸೆಣಸು

03:38 AM Sep 26, 2020 | Hari Prasad |

ಅಬುಧಾಬಿ: ಶನಿವಾರ ರಾತ್ರಿ ಅಬುಧಾಬಿಯಲ್ಲಿ ನಡೆಯುವುದು ಸೋತವರ ಸೆಣಸು.

Advertisement

ಸನ್‌ರೈಸರ್ ಹೈದರಾಬಾದ್‌ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳ ಫೈಟ್‌.

ಈ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಕ್ರಮವಾಗಿ ಆರ್‌ಸಿಬಿ ಮತ್ತು ಮುಂಬೈ ವಿರುದ್ಧ ಎಡವಿದ್ದವು.
ಹೀಗಾಗಿ ಜಯದ ಖಾತೆ ತೆರೆಯುವ ತಂಡ ಯಾವುದು ಎಂಬುದು ಈ ಪಂದ್ಯದ ಕುತೂಹಲ. ಜತೆಗೆ ಒಂದು ತಂಡಕ್ಕೆ ಸತತ ಎರಡು ಸೋಲಿನ ಕಂಟಕ ತಪ್ಪಿದ್ದಲ್ಲ!

ಕೆಕೆಆರ್‌ ವಿಶ್ವ ದರ್ಜೆಯ ಕ್ರಿಕೆಟಿಗರನ್ನು ಹೊಂದಿರುವ ತಂಡ. ರಸೆಲ್‌, ಮಾರ್ಗನ್‌, ಕಮಿನ್ಸ್‌, ಸುನೀಲ್‌ ನಾರಾಯಣ್‌… ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ ಮೊದಲ ಪಂದ್ಯದಲ್ಲಿ ಇವರ್ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.

ಬೌಲಿಂಗ್‌ ವೇಳೆ ಕಮಿನ್ಸ್‌ 3 ಓವರ್‌ಗಳಿಂದ 49 ರನ್‌ ಬಿಟ್ಟುಕೊಟ್ಟು ದುಬಾರಿಯಾದರೆ, ಚೇಸಿಂಗ್‌ ಸಂದರ್ಭದಲ್ಲಿ ನಾರಾಯಣ್‌ (9), ಮಾರ್ಗನ್‌ (16), ರಸೆಲ್‌ (11) ಮೋಡಿ ಮಾಡುವಲ್ಲಿ ವಿಫ‌ಲರಾದರು. ಇವರೆಲ್ಲ ಹೈದರಾಬಾದ್‌ ವಿರುದ್ಧ ಕ್ಲಿಕ್‌ ಆಗಬೇಕಾದುದು ಅನಿವಾರ್ಯ.

Advertisement

ಮುಖ್ಯವಾಗಿ ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸಬಲ್ಲ ರಸೆಲ್‌ ಸಿಡಿದು ನಿಲ್ಲಬೇಕಾದುದು ಅತ್ಯಗತ್ಯ.
ಈ ಜಮೈಕನ್‌ ಕ್ರಿಕೆಟಿಗ ಕಳೆದ ವರ್ಷ ಕೆಕೆಆರ್‌ ಪರ 249 ಎಸೆತಗಳಿಂದ ಸರ್ವಾಧಿಕ 510 ಬಾರಿಸಿದ್ದರು. ಸ್ಟ್ರೈಕ್‌ರೇಟ್‌ 204.81ರಷ್ಟು ಮೇಲ್ಮಟ್ಟದಲ್ಲಿತ್ತು. ಇದು 2019ರ ಕೂಟದ ದಾಖಲೆಯೂ ಆಗಿತ್ತು. ಸಾಮಾನ್ಯವಾಗಿ 6ನೇ ಕ್ರಮಾಂಕದಲ್ಲಿ ಬರುವ ರಸೆಲ್‌ ಅವರಿಗೆ ಭಡ್ತಿ ನೀಡಿದರೆ ಲಾಭವಿದೆ ಎಂಬುದು ತಂಡದ ಲೆಕ್ಕಾಚಾರ.

ತಂಡದ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಶುಭಮನ್‌ ಗಿಲ್‌, ನಾಯಕ ದಿನೇಶ್‌ ಕಾರ್ತಿಕ್‌, ನಿತೀಶ್‌ ರಾಣಾ ಪ್ರಮುಖರು. ಆರಂಭಿಕನಾಗಿ ಬರುವ ಗಿಲ್‌ ಮೇಲೆ ಬಹಳ ನಂಬಿಕೆ ಇರಿಸಲಾಗಿದೆ. ಆದರೆ ಮುಂಬೈ ವಿರುದ್ಧ ಗಿಲ್‌ ಗಳಿಕೆ ಕೇವಲ 7 ರನ್‌. ಜತೆಗಾರ ನಾರಾಯಣ್‌ ಕೂಡ ಎರಡಂಕೆಯ ಗಡಿ ತಲುಪಿರಲಿಲ್ಲ. ತಂಡಕ್ಕೆ ಗಟ್ಟಿಮುಟ್ಟಾದ ಅಡಿಪಾಯ ನಿರ್ಮಿಸುವುದನ್ನು ಇವರಿಬ್ಬರು ಸವಾಲಾಗಿ ಸ್ವೀಕರಿಸಬೇಕಿದೆ. ಮುಂಬೈ ವಿರುದ್ಧ ಬೌಲಿಂಗ್‌ನಲ್ಲಿ ಮಿಂಚಿದ್ದು ನಾರಾಯಣ್‌ ಮತ್ತು ಶಿವಂ ಮಾವಿ ಮಾತ್ರ.

ರೇಸ್‌ನಲ್ಲಿ ವಿದೇಶಿಗರು
ಆರ್‌ಸಿಬಿ ವಿರುದ್ಧ ಹೈದರಾಬಾದ್‌ ಸೋಲಿಗೆ ಕಾರಣವೂ ಬ್ಯಾಟಿಂಗ್‌ ಕುಸಿತ. ಅದೊಂದು ನಾಟಕೀಯ ಕುಸಿತವಾಗಿತ್ತು. ಅಂತಿಮ 5 ಓವರ್‌ಗಳಲ್ಲಿ ಕೇವಲ 43 ರನ್‌ ಮಾಡಬೇಕಿದ್ದಾಗ 32 ರನ್‌ ಅಂತರದಲ್ಲಿ ಅಂತಿಮ 7 ವಿಕೆಟ್‌ ಕಳೆದುಕೊಂಡ ಸಂಕಟ ಹೈದರಾಬಾದ್‌ನದ್ದಾಗಿತ್ತು. ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಕೂಟದಿಂದಲೇ ನಿರ್ಗಮಿಸಿದ್ದು ವಾರ್ನರ್‌ ಬಳಗಕ್ಕೆ ಎದುರಾದ ದೊಡ್ಡ ಹೊಡೆತ. ಆದರೀಗ ವಿಂಡೀಸಿನ ಜಾಸನ್‌ ಹೋಲ್ಡರ್‌ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್‌, ನಬಿ ರೇಸ್‌ನಲ್ಲಿರುವ ವಿದೇಶಿ ಆಟಗಾರರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಕೆ.ಎಲ್‌. ರಾಹುಲ್‌ ಐಪಿಎಲ್‌ ಪಂದ್ಯವೊಂದರಲ್ಲಿ ಅತ್ಯಧಿಕ ರನ್‌ ಬಾರಿಸಿದ ನಾಯಕ, ಕೀಪರ್‌ ಹಾಗೂ ಭಾರತದ ಆಟಗಾರ. ಹಿಂದಿನ ಕೀಪರ್‌ ಹಾಗೂ ಭಾರತೀಯನ ದಾಖಲೆ ರಿಷಭ್‌ ಪಂತ್‌ ಅವರದಾಗಿತ್ತು (128). ನಾಯಕನ ದಾಖಲೆ ವೀರೇಂದ್ರ ಸೆಹವಾಗ್‌ ಹೆಸರಲ್ಲಿತ್ತು (119).

– ರಾಹುಲ್‌ 2 ದೇಶಗಳಲ್ಲಿ ಶತಕ ಬಾರಿಸಿದ ಒಟ್ಟಾರೆ 2ನೇ ಹಾಗೂ ಭಾರತದ ಮೊದಲ ಆಟಗಾರ. ಎಬಿ ಡಿ ವಿಲಿಯರ್ ಮೊದಲಿಗ. ರಾಹುಲ್‌ ಅವರ ಮೊದಲ ಶತಕ ಕಳೆದ ವರ್ಷ ಮುಂಬಯಿಯಲ್ಲಿ ದಾಖಲಾಗಿತ್ತು (ಅಜೇಯ 100). ಎಬಿಡಿ ದಕ್ಷಿಣ ಆಫ್ರಿಕಾ (2009) ಮತ್ತು ಭಾರತದಲ್ಲಿ ಶತಕ ಹೊಡೆದಿದ್ದರು (2015 ಮತ್ತು 2016).

– ರಾಹುಲ್‌ ಐಪಿಎಲ್‌ನಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಿಂದ 2 ಸಾವಿರ ರನ್‌ ಪೂರ್ತಿಗೊಳಿಸಿದ ಭಾರತದ ಕ್ರಿಕೆಟಿಗ (60 ಇನ್ನಿಂಗ್ಸ್‌). ಸಚಿನ್‌ ತೆಂಡುಲ್ಕರ್‌ ಅವರ ದಾಖಲೆ ಪತನಗೊಂಡಿತು (63 ಇನ್ನಿಂಗ್ಸ್‌).

– ಯುಎಇಯಲ್ಲಿ ನಡೆದ ಟಿ20 ಪಂದ್ಯವೊಂದರಲ್ಲಿ ರಾಹುಲ್‌ ಅತ್ಯಧಿಕ ವೈಯಕ್ತಿಕ ರನ್‌ ದಾಖಲೆ ಸ್ಥಾಪಿಸಿದರು (ಅಜೇಯ 132). ಯುಎಸ್‌ಎ ವಿರುದ್ಧ ಐರ್ಲೆಂಡ್‌ ತಂಡದ ವಿಲಿಯಂ ಪೋರ್ಟರ್‌ಫೀಲ್ಡ್‌ ಅಜೇಯ 127 ರನ್‌ ಗಳಿಸಿದ್ದು ಹಿಂದಿನ ದಾಖಲೆ.

– ರಾಹುಲ್‌ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ರನ್‌ ಗಳಿಸಿದ 4ನೇ ನಾಯಕ, ಏಶ್ಯದ ಮೊದಲಿಗ.

– ರಾಹುಲ್‌ 132 ರನ್‌ ಹೊಡೆದರೆ, ಕೊಹ್ಲಿ ಕೇವಲ ಒಂದು ರನ್ನಿಗೆ ಔಟಾದರು. ಇದು ಐಪಿಎಲ್‌ ಪಂದ್ಯವೊಂದರ ನಾಯಕರ ಮೊತ್ತದ ಅತೀ ದೊಡ್ಡ ಅಂತರ (131 ರನ್‌). 2017ರ ಹೈದರಾಬಾದ್‌-ಕೆಕೆಆರ್‌ ಪಂದ್ಯದಲ್ಲಿ ವಾರ್ನರ್‌ (126) ಮತ್ತು ಗಂಭೀರ್‌ (11) ನಡುವೆ 115 ರನ್ನುಗಳ ಅಂತರವಿದ್ದದ್ದು ದಾಖಲೆಯಾಗಿತ್ತು.

– ರಾಹುಲ್‌ ಪಂಜಾಬ್‌ ಪರ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಸ್ಥಾಪಿಸಿದರು. ಹಿಂದಿನ ಸಾಧಕ ವೀರೇಂದ್ರ ಸೆಹವಾಗ್‌ (122).

– ಎಬಿಡಿ ಟಿ20ಯಲ್ಲಿ 400 ಸಿಕ್ಸರ್‌ ಬಾರಿಸಿದ 6ನೇ ಬ್ಯಾಟ್ಸ್‌ಮನ್‌ ಎನಿಸಿದರು. ಉಳಿದವರೆಂದರೆ ಕ್ರಿಸ್‌ ಗೇಲ್‌ (978), ಕೈರನ್‌ ಪೊಲಾರ್ಡ್‌ (673), ಬ್ರೆಂಡನ್‌ ಮೆಕಲಮ್‌ (485), ಶೇನ್‌ ವಾಟ್ಸನ್‌ (458) ಮತ್ತು ಆ್ಯಂಡ್ರೆ ರಸೆಲ್‌ (441).

– ಡೇಲ್‌ ಸ್ಟೇನ್‌ ಐಪಿಎಲ್‌ನಲ್ಲಿ ತಮ್ಮ ದುಬಾರಿ ಸ್ಪೆಲ್‌ ದಾಖಲಿಸಿದರು (57 ರನ್‌). 2014ರಲ್ಲಿ ಹೈದರಾಬಾದ್‌ ಪರ ಆಡುತ್ತಿದ್ದಾಗ ಪಂಜಾಬ್‌ ವಿರುದ್ಧ 51 ರನ್‌ ನೀಡಿದ್ದು ಅವರ ದುಬಾರಿ ಬೌಲಿಂಗ್‌ ಆಗಿತ್ತು.

ಮುಖಾಮುಖಿ: 17
ಕೆಕೆಆರ್‌ ಜಯ: 10
ಹೈದರಾಬಾದ್‌ಜಯ: 07

ತಂಡಗಳು
ಕೆಕೆಆರ್‌: ಶುಭಮನ್‌ ಗಿಲ್‌, ಸುನೀಲ್‌ ನಾರಾಯಣ್‌, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌ (ನಾಯಕ), ಆ್ಯಂಡ್ರೆ ರಸೆಲ್‌, ಇಯಾನ್‌ ಮಾರ್ಗನ್‌, ನಿಖೀಲ್‌ ನಾೖಕ್‌, ಪ್ಯಾಟ್‌ ಕಮಿನ್ಸ್‌, ಕುಲದೀಪ್‌, ಶಿವಂ ಮಾವಿ, ಸಂದೀಪ್‌ ವಾರಿಯರ್‌.

ಹೈದರಾಬಾದ್‌
ಡೇವಿಡ್‌ ವಾರ್ನರ್‌ (ನಾಯಕ), ಜಾನಿ ಬೇರ್‌ಸ್ಟೊ, ಮನೀಷ್‌ ಪಾಂಡೆ, ಪ್ರಿಯಂ ಗರ್ಗ್‌, ವಿಜಯ್‌ ಶಂಕರ್‌, ಮೊಹಮ್ಮದ್‌ ನಬಿ, ಅಭಿಷೇಕ್‌ ಶರ್ಮ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಸಂದೀಪ್‌ ಶರ್ಮ, ಖಲೀಲ್‌ ಅಹ್ಮದ್‌.

Advertisement

Udayavani is now on Telegram. Click here to join our channel and stay updated with the latest news.

Next