ದುಬೈ : ಚೆನ್ನೈ -ಹೈದರಾಬಾದ್ ಸೆಣೆಸಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ಚೆನ್ನೈ ಬೌಲರ್ ಗಳ ಬಿಗುದಾಳಿಗೆ ಪ್ರಾರಂಭಿಕ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿ 165 ರ ಗುರಿ ಬಿಟ್ಟು ಕೊಟ್ಟಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ ಆಮೆಗತಿಯ ಆರಂಭವನ್ನು ಪಡೆದುಕೊಂಡಿತ್ತು. ಆರಂಭದಲ್ಲೇ ದೀಪಕ್ ಚಹರ್ ಎಸೆತಕ್ಕೆ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ ಜಾನಿ ಬ್ರೆಸ್ಟೋ ವಿಕೆಟ್ ನಿಂದ ಹೈದರಾಬಾದ್ ತಂಡ ಒತ್ತಡಕ್ಕೆ ಸಿಲುಕಿತ್ತು. ಬಳಿಕ ಬಂದ ಮನೀಶ್ ಪಾಂಡೆ ತಂಡಕ್ಕೆ ಚೇತರಿಕೆಯ ಆಟ ನೀಡಿ 29 ರನ್ ಗಳಿಸಿ ಶಾರ್ದೂಲ್ ಠಾಕೂರ್ ಎಸೆತಕ್ಕೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು. ನಿಧಾನವಾಗಿಯೇ ಬ್ಯಾಟ್ ಬೀಸಿದ ವಾರ್ನರ್ 28 ರನ್ ಗಳಿಸಿ ಚಾವ್ಲಾ ಎಸೆತಕ್ಕೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಕಪ್ತಾನನ ಜೊತೆ ಬ್ಯಾಟ್ ಬೀಸಿದ ಅನುಭವಿ ಕೇನ್ ವಿಲಿಯಮ್ಸನ್ ಕೇವಲ 9 ರನ್ ಗಳಿಸಿ ರನ್ ಔಟ್ ಆದರು.
ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಹೈದರಾಬಾದ್ ತಂಡಕ್ಕೆ ಯುವ ಆಟಗಾರರಾದ ಪ್ರಿಯಮ್ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಜೊತೆಯಾಟ ನೀಡಿ ತಂಡದ ಖಾತೆ ಮುಂದುವರಿಕೆಗೆ ನೆರವಾದರು. ಪ್ರಿಯಮ್ ಗರ್ಗ್ ಅಜೇಯ 51 ರನ್ ಗಳಿಸಿದ್ರೆ, ಅಭಿಷೇಕ್ 31 ರನ್ ಗಳಿಸಿ ಚಹರ್ ಎಸೆತಕ್ಕೆ ಧೋನಿಗೆ ಕ್ಯಾಚ್ ಕೊಟ್ಟು ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಸನ್ ರೈಸರ್ಸ್ ತಂಡ 20 ಓವರ್ ಗಳಲ್ಲಿ 5 ನಷ್ಟಕ್ಕೆ 164 ರನ್ ಪೇರಿಸಿ 165 ರ ಟಾರ್ಗೆಟ್ ಬಿಟ್ಟು ಕೊಟ್ಟಿದೆ.
ಚೆನ್ನೈ ಪರ ದೀಪಕ್ ಚಹರ್ 2 ವಿಕೆಟ್ ಪಡೆದ್ರೆ ,ಶಾರ್ದೂಲ್ ಠಾಕೂರು ,ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಪಡೆದರು.