Advertisement

ಕಡುಬಡತನದ ಕನಸುಗಾರರಿಗೆ ನೋಟಿನ ಕಂತೆ

10:09 AM Dec 21, 2019 | Sriram |

ಕೋಲ್ಕತಾ: ಗುರುವಾರ ನಡೆದ ಐಪಿಎಲ್‌ ಹರಾಜು ಹಲವು ವಿಶೇಷಗಳನ್ನು ದಾಖಲಿಸಿದೆ. ಇದು ಹಲವು ಕನಸುಕಂಗಳನ್ನು ಅರಳಿಸಿದೆ. ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್‌ ತ್ಯಾಗಿ, ವಾಹನ ಚಾಲಕನ ಪುತ್ರ ಪ್ರಿಯಂ ಗರ್ಗ್‌, 3 ವರ್ಷ ಟೆಂಟ್‌ನಲ್ಲಿ ಮಲಗಿ, ಪಾನಿಪುರಿ ಮಾರಿ ಕ್ರಿಕೆಟ್‌ ಕಲಿತ ಯಶಸ್ವಿ ಜೈಸ್ವಾಲ್‌ ಇವರೆಲ್ಲ ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ. ಒಂದು ಕಾಲದಲ್ಲಿ ಕಷ್ಟಗಳನ್ನಷ್ಟೇ ನೋಡಿದ್ದ ಈ ಹದಿಹರೆಯದ ಹುಡುಗರು, ಭಾರತದ ಅಂಡರ್‌-19 ವಿಶ್ವಕಪ್‌ ತಂಡದ ಸದಸ್ಯರು ಎನ್ನುವುದು ಗಮನಾರ್ಹ.

Advertisement

ಪಾನಿಪುರಿ ಮಾರಿದ ಬಳಿಕ ಕ್ರಿಕೆಟ್‌
ಬರೀ ಕನಸುಗಳನ್ನೇ ಹೊತ್ತ ಯಶಸ್ವಿ ಜೈಸ್ವಾಲ್‌ ಉತ್ತರಪ್ರದೇಶದಿಂದ ಮುಂಬಯಿಗೆ ಬಂದಾಗ ಕೇವಲ 11 ವರ್ಷ. ಆ ವೇಳೆ ಅವರು ಸಂಬಂಧಿಕರೊಬ್ಬರ ಹಾಲಿನ ಡೈರಿಯಲ್ಲಿ ಇರುತ್ತಿದ್ದರು. ಇನ್ನು ಇಲ್ಲಿರಬೇಡ ಎಂದು ಹೇಳಿದ್ದರಿಂದ, ಆಜಾದ್‌ ಮೈದಾನದ ಟೆಂಟ್‌ಗೆ ತೆರಳಿದರು.

ಮುಂದಿನ 3 ವರ್ಷ ಬಡತನ, ಹಸಿವಿನೊಂದಿಗೆ ಏಗುತ್ತ ಕ್ರಿಕೆಟ್‌ ಅಭ್ಯಾಸ ನಡೆಸಿದರು. ಜೀವನ ನಿರ್ವಹಣೆಗೆ ತಂದೆಯೊಂದಿಗೆ ಪಾನಿಪುರಿ ಮಾರಾಟ ಮಾಡತೊಡಗಿದರು. ಅನಂತರವಷ್ಟೇ ಕ್ರಿಕೆಟ್‌ ಅಂಗಳಕ್ಕೆ ಓಡುತ್ತಿದ್ದರು. ಅವರಿಗೆ ಕ್ರಿಕೆಟ್‌ ತರಬೇತಿ ನೀಡಿದ್ದು ಜ್ವಾಲಾ ಸಿಂಗ್‌. ಈಗ ಅವರ ಜತೆಯೇ ಜೈಸ್ವಾಲ್‌ ವಾಸಿಸುತ್ತಾರೆ. ಅವರನ್ನು ರಾಜಸ್ಥಾನ್‌ ರಾಯಲ್ಸ್‌ 2.40 ಕೋಟಿ ರೂ. ನೀಡಿ ಖರೀದಿಸಿದೆ. ಈ ಹಣವನ್ನು ಏನು ಮಾಡುವುದೆಂದು ನನಗೆ ಗೊತ್ತಿಲ್ಲ, ಅದರ ಹೊಣೆ ತರಬೇತುದಾರರದ್ದು ಎಂದು ಜೈಸ್ವಾಲ್‌ ಹೇಳಿದ್ದಾರೆ.

ಎಲ್ಲವೂ ಮಗನ ಕ್ರಿಕೆಟಿಗಾಗಿ
ಭಾರತದ ಅಂಡರ್‌-19 ತಂಡದ ನಾಯಕ ಪ್ರಿಯಂ ಗರ್ಗ್‌. ಮಗನಿಗಾಗಿ ತಂದೆ ಮಾಡದ ಕೆಲಸಗಳೇ ಇಲ್ಲ. ಹಾಲು ಹಾಕುವುದು, ಶಾಲಾ ವಾಹನಗಳನ್ನು ಓಡಿಸುವುದು, ಮೂಟೆ ಹೊರುವುದು… ಎಲ್ಲವೂ ಮಗನ ಕ್ರಿಕೆಟ್‌ ಏಳಿಗೆಗಾಗಿ. ಹಾಗೆ ದುಡಿದು ದಿನಾ ಸಂಜೆ 10 ರೂ.ಗಳನ್ನು ನೀಡುತ್ತಿದ್ದರು. ಅದನ್ನು ಪಡೆದು ಗರ್ಗ್‌ ಮರುದಿನ ಮೀರತ್‌ಗೆ ಹೋಗಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದರು. ಹಣವಿಲ್ಲದ ದಿನಾ ಗರ್ಗ್‌ ಬಸ್ಸಿನ ಮೇಲೆ ಕುಳಿತು ಹೋಗಿದ್ದಾರೆ!

ಈಗ ತಂದೆ ಆರೋಗ್ಯ ಇಲಾಖೆಯಲ್ಲಿ ವಾಹನ ಓಡಿಸುತ್ತಾರೆ. ಗರ್ಗ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ 1.9 ಕೋಟಿ ರೂ. ನೀಡಿ ಖರೀದಿಸಿದೆ.

Advertisement

ತ್ಯಾಗಿಗಾಗಿ ತಂದೆಯ ತ್ಯಾಗ
“ನನ್ನ ತಂದೆ ಸಣ್ಣ ರೈತ, ಉತ್ತರಪ್ರದೇಶದ ಹಪುರ್‌ನವರು. ಈ ಹಪುರ್‌ ಹೆಸರನ್ನು ನನ್ನ ಸಹ ಕ್ರಿಕೆಟಿಗರು ಕೇಳಿಯೇ ಇರಲಿಲ್ಲ. ಹರಾಜು ಮುಗಿದ ಮೇಲೆಯೇ ಹಲವರಿಗೆ ಗೊತ್ತಾದದ್ದು…’ ಎಂದು 19 ವರ್ಷದ ಮಧ್ಯಮ ವೇಗಿ ಕಾರ್ತಿಕ್‌ ತ್ಯಾಗಿ ಹೇಳುತ್ತಾರೆ. ಅವರನ್ನು ರಾಜಸ್ಥಾನ್‌ ರಾಯಲ್ಸ್‌ 1.3 ಕೋಟಿ ರೂ. ನೀಡಿ ಖರೀದಿಸಿದೆ.
ಆದರೆ ಇಷ್ಟು ಹಣವನ್ನು ತನಗೆ ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ. ಇದರ ಉಸ್ತುವಾರಿಯೆಲ್ಲ ಅಪ್ಪನದ್ದೇ ಎಂದು ಕಾರ್ತಿಕ್‌ ಹೇಳಿಕೊಂಡಿದ್ದಾರೆ. ಕಾರ್ತಿಕ್‌ಗೆ ತನ್ನಪ್ಪ ತನಗಾಗಿ ಮಾಡಿದ ತ್ಯಾಗಗಳೆಲ್ಲ ಚೆನ್ನಾಗಿ ನೆನಪಿದೆ. ಸತತ 2 ವರ್ಷ ಬೆನ್ನುನೋವಿಗೆ ಸಿಲುಕಿದ್ದ ಅವರಿಗೆ, ತಂದೆ ಸಾಲಮಾಡಿ ಚಿಕಿತ್ಸೆ ಕೊಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next