ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭಾನುವಾರ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ನಡೆದ ಪಂದ್ಯದಲ್ಲೂ ಸೋಲುವ ಮೂಲಕ ಮತ್ತೆ ಅಭಿಮಾನಿಗಳನ್ನು ಭಾರೀ ನಿರಾಸೆಗೆ ದೂಡಿದೆ.
ಚೆನ್ನೈನಲ್ಲಿ ನಡೆದ ಚೆನ್ನೈ ಕಿಂಗ್ಸ್ ವಿರುದ್ಧದ ಉದ್ಘಾಟನಾ ಪಂದ್ಯ, ತವರಿನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಆರ್‌ಸಿಬಿ ಆತಿಥೇಯ ಹೈದರಾಬಾದ್ ತಂಡದ ಎದುರು ಗೆಲ್ಲುವ ವಿಶ್ವಾಸ ಹೊಂದಿತ್ತು ಆದರೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರ ನಿರ್ಧಾರವೇ ಮುಳುವಾಯಿತು ಎನ್ನಬಹದು.
ಬ್ಯಾಟಿಂಗ್‌ಗೆ ಇಳಿಸಲ್‌ಪಟ್ಟ ಹೈದ್ರಾಬಾದ್ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೆರಿಸ್ಟೊ ಅವರ ಸ್ಫೋಟಕ ಶತಕಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 231 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡೇವಿಡ್ ವಾರ್ನರ್ 100 ರನ್‌ಗಳಿಸಿ ಅಜೇಯರಾಗಿ ಉಳಿದರೆ, ಜಾನಿ ಬೆರಿಸ್ಟೊ 114 ರನ್‌ಗಳಿಸಿ ಔಟಾದರು.
232 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೇವಲ 113 ರನ್‌ಗಳಿಗೆ ಆಲೌಟಾಗುವ ಮೂಲಕ 118 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಮಧ್ಯಮ ಕ್ರಮಾಂಕದ ಆಟಗಾರ ಕೊಲಿನ್ ಡೇ ಗ್ರಾಂಡ್ ಹೋಮ್ 37 , ಪ್ರಯಾಸ್ ಬರ್ಮನ್ 19, ಉಮೇಶ್ ಯಾದವ್ 14 , ಆರಂಭಿಕ ಪ್ರಥ್ವಿ ಪಟೇಲ್ 11 ರನ್ ಹೊರತು ಪಡಿಸಿದರೆ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ. ಕೊಹ್ಲಿ ಕೇವಲ 3 ರನ್‌ಗೆ ಔಟಾದರು. ಎಬಿಡಿ ವಿಲಿಯರ್ಸ್ 1 ರನ್‌ಗೆ ಆಟ ಮುಗಿಸಿದರು.
ಹೈದ್ರಾಬಾದ್ ಪರ ಮೊಹಮದ್ ನಬಿ 4 , ಸಂದೀಪ್ ಶರ್ಮಾ 3 ವಿಕೆಟ್ ಪಡೆದು ಗಮನ ಸೆಳೆದರು.