ಮುಂಬೈ: ಹನ್ನೊಂದನೇ ಆವೃತ್ತಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕದನ ಈಗ ಪ್ಲೇ ಆಫ್ ಹಂತಕ್ಕೆ ಬಂದು ತಲುಪಿದೆ.
ಒಟ್ಟಾರೆ 8 ತಂಡಗಳ ನಡುವೆ ಪಂದ್ಯ ನಡೆದು ಲೀಗ್ ಕೂಟಗಳು ಮುಗಿದ ಬಳಿಕ ಉಳಿದಿರುವುದು ಕೇವಲ 4 ತಂಡ ಮಾತ್ರ. ಇವುಗಳಲ್ಲಿ 2 ತಂಡ ಅಂತಿಮವಾಗಿ ಫೈನಲ್ ಪ್ರವೇಶಿಸಲಿದೆ. ಆ ತಂಡಗಳು ಯಾವುವು? ಎನ್ನುವ ಕುತೂಹಲ ಆರಂಭವಾಗಿರುವ ಬೆನ್ನಲ್ಲೇ ಮಂಗಳವಾರ ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಸನ್‌ರೈಸರ್ ಹೈದರಾಬಾದ್ ತಂಡವನ್ನು ಎರಡನೇ ಸ್ಥಾನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡ ಕ್ವಾಲಿಫೈಯರ್ 2ರಲ್ಲಿ ಆಡುವ ಮತ್ತೂಂದು ಅವಕಾಶ ಗಿಟ್ಟಿಸಿಕೊಳ್ಳಲಿದೆ. ಮೇ23ಕ್ಕೆ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ ಹಾಗೂ ರಾಜಸ್ಥಾನ್ ರಾಯಲ್ಸ್ ಕಾಳಗ ನಡೆಯಲಿದೆ. ಇಲ್ಲಿ ಗೆದ್ದವರು ಕ್ವಾಲಿಫೈಯರ್ 2ರಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದವರಿಗೆ ಫೈನಲ್ ಭಾಗ್ಯ ದೊರಕಲಿದೆ.
ಸಮಾನ ವೀರರ ನಡುವೆ ಸ್ಪರ್ಧೆ: ಕ್ವಾಲಿಫೈಯರ್ 1ರಲ್ಲಿ ಸೆಣಸಾಟ ನಡೆಸಲಿರುವ ಹೈದರಾಬಾದ್ ಮತ್ತು ಚೆನ್ನೈತಂಡಗಳಲ್ಲಿ ಬಲಿಷ್ಠ ಯಾರು? ಎನ್ನುವುದನ್ನು ಪ್ರಸ್ತುತ ಆವೃತ್ತಿಯ ಪ್ರಕಾರ ವಿಶ್ಲೇಷಿಸುವುದು ಕಷ್ಟ. ಏಕೆಂದರೆ ಲೀಗ್ ಹಂತ ಮುಗಿದ ಬಳಿಕ ಎರಡೂ ತಂಡಗಳ ಸಾಧನೆಯನ್ನು ನೋಡುವುದಾದರೆ ಇವರಿಬ್ಬರು ಸಮಾನ ಪಂದ್ಯಗಳಲ್ಲಿ ( ತಲಾ 9 ಗೆಲುವು, 5 ಸೋಲು) ಗೆದ್ದಿದ್ದಾರೆ ಮತ್ತು ಸೋತಿದ್ದಾರೆ. ಸಮಾನ ಅಂಕವನ್ನೂ ಪಡೆದಿದ್ದಾರೆ. ಹೀಗಿದ್ದರೂ ಹೆಚ್ಚು ರನ್‌ರೇಟ್ ಹೊಂದಿರುವ ಹೈದರಾಬಾದ್ ಅಂಕಪಟ್ಟಿಯ ಅಗ್ರಸ್ಥಾನಿಯಾಯಿತು.
ಚೆನ್ನೈನಲ್ಲಿದ್ದಾರೆ ಸೂಪರ್ ಸ್ಟಾರ್: ಚೆನ್ನೈ ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಸದೃಢವಾಗಿದೆ. ಜತೆಗೆ ಧೋನಿಯ ಚಾಣಾಕ್ಷ ನಾಯಕತ್ವ ಚೆನ್ನೈ ತಂಡವನ್ನು ಫೈನಲ್‌ಗೆ ತಲುಪುವ ಹಾಗೆ ಮಾಡುವ ಸಾಮರ್ಥ್ಯ ಹೊಂದಿದೆ. ಬ್ಯಾಟಿಂಗ್‌ನಲ್ಲಿ ಅಂಬಾಟಿ ರಾಯುಡು ಉತ್ತಮ ಫಾರ್ಮ್ನಲ್ಲಿದ್ದಾರೆ. ಒಟ್ಟಾರೆ 14 ಪಂದ್ಯದಿಂದ ಒಟ್ಟು 586 ರನ್ ಬಾರಿಸಿದ್ದಾರೆ. ಉಳಿದಂತೆ ಸ್ವತಃ ನಾಯಕ ಧೋನಿ (ಪಂದ್ಯ: 14, ರನ್: 446) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ (ಪಂದ್ಯ:13, ರನ್: 438) ಸಿಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ (ಪಂದ್ಯ:13, ರನ್: 391) ಭರವಸೆ ಇಡಬಹುದಾಗಿದೆ. ಇನ್ನು ಬೌಲಿಂಗ್‌ನಲ್ಲಿ ಚೆನ್ನೈಗೆ ಸ್ವಲ್ಪ ತಲೆ ನೋವು ಇದ್ದೇ ಇದೆ. ಠಾಕೂರ್ ಒಟ್ಟಾರೆ 11 ಪಂದ್ಯ ಆಡಿ 14 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಡ್ವೇನ್ ಬ್ರಾವೋ 14 ಪಂದ್ಯದಿಂದ 11 ವಿಕೆಟ್ ಕಬಳಿಸಿ ಅಲ್ಪ ಯಶಸ್ಸು ಸಾಧಿಸಿದ್ದಾರೆ. ದೀಪಕ್ ಚಾಹರ್, ರವೀಂದ್ರ ಜಡೇಜ ಕೂಡ ಸಮಯ ಬಂದಾಗ ಎದುರಾಳಿಗಳಿಗೆ ಅಪಾಯಕಾರಿಯಾಗಬಲ್ಲರು. ಆದರೆ ಲುಂಗಿ ಎನ್‌ಗಿಡಿ ಪಂಜಾಬ್ ವಿರುದ್ಧ 4 ವಿಕೆಟ್ ಕಬಳಿಸಿ ಪ್ರಚಂಡ ಫಾರ್ಮ್ಕಂಡುಕೊಂಡಿರುವುದು ಎದುರಾಳಿ ತಂಡಕ್ಕೆ ಅಪಾಯದ ಸೂಚನೆಯೇ ಸರಿ.
ಎದುರೇಟಿಗೆ ಸನ್ ಸಜ್ಜು: ಚೆನ್ನೈತಂತ್ರಕ್ಕೆ ಪ್ರತಿತಂತ್ರ ಹೂಡಿ ಪಂದ್ಯವನ್ನು ಕೈವಶ ಮಾಡಿಕೊಳ್ಳಲು ಸನ್‌ರೈಸರ್ ಹೈದರಾಬಾದ್ ಸಜ್ಜಾಗಿದೆ. ನಾಯಕ ಕೇನ್ ವಿಲಿಯಮ್ಸನ್ (ಪಂದ್ಯ: 14, ರನ್: 661), ಶಿಖರ್ ಧವನ್ (ಪಂದ್ಯ:13, ರನ್: 437), ಮನೀಶ್ ಪಾಂಡೆ (ಪಂದ್ಯ: 14, ರನ್: 276), ಯೂಸುಫ್ ಪಠಾಣ್ (ಪಂದ್ಯ: 12, ರನ್: 188), ಶಕೀಬ್ ಅಲ್ ಹಸನ್ (ಪಂದ್ಯ:14, ರನ್: 176) ತಂಡದ ಬ್ಯಾಟಿಂಗ್ ವಿಭಾಗ ಸದೃಢವಾಗಿದೆ. ಸಿದ್ದಾರ್ಥ್ ಕೌಲ್ (ಪಂದ್ಯ:14, ವಿಕೆಟ್: 17) ಹಾಗೂ ರಶೀದ್ ಖಾನ್ (ಪಂದ್ಯ: 14, ವಿಕೆಟ್:16) ಬೌಲಿಂಗ್‌ನಲ್ಲಿ ಎಂತಹ ಬಲಾಡ್ಯರಿಗೂ ನೀರು ಕುಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಚೆನ್ನೈಗೆ ಹೋಲಿಸಿದರೆ ಹೈದರಾಬಾದ್ ಮೇಲ್ನೋಟಕ್ಕೆ ಬಲಿಷ್ಠರಂತೆ ಕಂಡು ಬರುತ್ತಿದೆ.