ಮುಂಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಟಿ20 ಕ್ರಿಕೆಟ್ ಆಟವನ್ನು ಸೇರ್ಪಡೆ ಮಾಡಬೇಕು ಎಂಬ ಸಲಹೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸ್ವೀಕರಿಸಿದೆ. ಈ ಮೂಲಕ ಕ್ರಿಕೆಟ್ ಆಟವು ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ಭಾಗಿಯಾಗಲು ವೇದಿಕೆ ಸಜ್ಜಾಗಿದೆ.
ಮುಂಬೈನಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಮುಂಬೈನಲ್ಲಿ ಅಕ್ಟೋಬರ್ 14-16 ರಂದು ನಿಗದಿಯಾಗಿರುವ ತನ್ನ ಅಧಿವೇಶನದಲ್ಲಿ ಸಮಿತಿ ತನ್ನ ಮತಗಳನ್ನು ಚಲಾಯಿಸುತ್ತದೆ.
ಇದನ್ನೂ ಓದಿ:Bengaluru 42 ಕೋಟಿ ರೂ.ಪತ್ತೆ; ತೆಲಂಗಾಣಕ್ಕೆ ಕರ್ನಾಟಕದಿಂದ ಹಣ: ಟಿಆರ್ ಎಸ್ ಆರೋಪ
ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028 ರಲ್ಲಿ ಕ್ರಿಕೆಟ್‌ನ ಸೇರ್ಪಡೆಯು ಕ್ರೀಡೆಯ ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ. ಟಿ20 ಕ್ರಿಕೆಟ್ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿರುವ ಕ್ರೀಡೆಗೆ ಇದೀಗ ಒಲಿಂಪಿಕ್ಸ್‌ನ ಭವ್ಯ ವೇದಿಕೆಯು ಕೌಶಲ್ಯ ಮತ್ತು ಆಟದ ಉತ್ಸಾಹವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತಿದೆ. ಈ ಕ್ರಮವು ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವುದು ಮಾತ್ರವಲ್ಲದೆ ಉದಯೋನ್ಮುಖ ಕ್ರಿಕೆಟ್ ರಾಷ್ಟ್ರಗಳು ಆಟದಲ್ಲಿ ಬೆಳಗಲು ಬಾಗಿಲು ತೆರೆಯುತ್ತದೆ. ಅಲ್ಲದೆ ಜಾಗತಿಕ ಕ್ರೀಡೆಯಾಗಿ ಅದರ ಸ್ಥಾನಮಾನವನ್ನು ಗಟ್ಟಿಗೊಳಿಸುತ್ತದೆ.
“ಲಾಸ್ ಏಂಜಲೀಸ್ ಸಮಿತಿಯು ಲಾಸ್ ಏಂಜಲೀಸ್ ಒಲಿಂಪಿಕ್ಸ್ ನ ಭಾಗವಾಗಬಹುದಾದ ಐದು ಆಟಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಕ್ರಿಕೆಟ್ ಸೇರಿದೆ. ಕಾರ್ಯನಿರ್ವಾಹಕ ಮಂಡಳಿ ನಾಳೆಯ ಸಭೆಯಲ್ಲಿ ಈ ವಿಷಯವನ್ನು ತೆಗೆದುಕೊಳ್ಳುತ್ತದೆ” ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕ್ರೀಡಾ ನಿರ್ದೇಶಕ ಕಿಟ್ ಮೆಕ್‌ಕಾನ್ನೆಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.