ಭಾರತಕ್ಕೆ ಆಕ್ಸ್‌ಫರ್ಡ್, ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಂಥ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯಗಳು ಬರುವ ದಿನಗಳು ಹತ್ತಿರವಾಗುತ್ತಿವೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ) ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದ್ದು, ವಿದೇಶಿ ವಿವಿಗಳು ಭಾರತದಲ್ಲಿಯೂ ಕ್ಯಾಂಪಸ್ ತೆಗೆಯಲು ಅವಕಾಶ ನೀಡಿದೆ.
ಉನ್ನತ ಶಿಕ್ಷಣದಲ್ಲಿ ಈ ಬೆಳವಣಿಗೆ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಭಾರತಕ್ಕೆ ವಿದೇಶಿ ವಿವಿಗಳು ಬಂದರೆ ಉತ್ತಮವೇ? ಅಥವಾ ಇದರಿಂದ ಸ್ಥಳೀಯ ವಿವಿಗಳಿಗೆ ಸಮಸ್ಯೆಯಾದೀತೇ? ಒಂದು ವರ್ಗದ ಪ್ರಕಾರ, ವಿದೇಶಿ ವಿವಿಗಳು ಭಾರತಕ್ಕೆ ಬಂದರೆ ಕಲಿಕೆಯ ಗುಣಮಟ್ಟ ಹೆಚ್ಚಾಗುವುದರ ಜತೆಗೆ, ವಿದೇಶಕ್ಕೆ ಹೋಗಲಾರದ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಸಿಗುತ್ತದೆ. ಅಲ್ಲದೆ ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಜಗತ್ತಿನ ಅತ್ಯಂತ ಪ್ರಸಿದ್ಧ ವಿವಿಗಳಾದ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನಂಥ ವಿವಿಗಳಲ್ಲಿ ಕಲಿಯಬೇಕು ಎಂಬ ಮಹದಾಸೆ ಇರುತ್ತದೆ. ಆದರೆ ಇಂಥ ವಿವಿಗಳಿಗೆ ಕಲಿಯಲು ಹೋಗಬೇಕು ಎಂದರೆ ಹಣ, ವೀಸಾ ಸಮಸ್ಯೆಗಳ ಜತೆಗೆ ಇನ್ನೂ ಹಲವಾರು ಸಂಗತಿಗಳು ಕಾಡುತ್ತಿರುತ್ತವೆ. ಹೀಗಾಗಿ ಅವರ ಕನಸು ಕನಸಾಗಿಯೇ ಉಳಿಯಬಹುದು. ಹೀಗಾಗಿ ಇಲ್ಲಿ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್‌ನಂಥ ವಿವಿಗಳು ಇಲ್ಲಿಯೇ ಕ್ಯಾಂಪಸ್ ಆರಂಭಿಸುವುದರಿಂದ ಇಂಥ ವಿದ್ಯಾರ್ಥಿಗಳ ಕನಸು ನನಸಾಗಬಹುದು. ಹೀಗಾಗಿ ಇದೊಂದು ಉತ್ತಮ ನಿರ್ಧಾರ ಎಂದೇ ಹೇಳಬಹುದಾಗಿದೆ.
ಸದ್ಯ ಬೆಂಗಳೂರಿನ ಐಐಎಸ್‌ಸಿ ಹಾಗೂ ಕೆಲವು ಐಐಟಿಗಳನ್ನು ಬಿಟ್ಟರೆ ಜಗತ್ತಿನ ಟಾಪ್ 100ರ ಪಟ್ಟಿಯಲ್ಲಿ ಭಾರತದ ವಿವಿಗಳು ಕಾಣಿಸುತ್ತಿರುವುದು ಕಡಿಮೆಯೇ. ಯುಜಿಸಿಯ ಹೊಸ ನಿಯಮದಿಂದಾಗಿ ಟಾಪ್ 100ರಲ್ಲಿ ಇರುವ ವಿವಿಗಳು ಭಾರತವನ್ನು ಪ್ರವೇಶ ಮಾಡಬಹುದಾಗಿದೆ. ಅಂದರೆ ಇಂಗ್ಲೆಂಡ್, ಅಮೆರಿಕದ ಅತ್ಯುತ್ತಮ ವಿವಿಗಳು ಇಲ್ಲಿ ಸ್ವಾಯತ್ತತೆ ಆಧಾರದಲ್ಲಿಯೇ ಪಾಠ ಮಾಡಬಹುದು. ಭಾರತದ ವಿದ್ಯಾರ್ಥಿಗಳಿಗೆ ಇದೂ ಒಂದು ಲಾಭದಾಯಕ ಸಂಗತಿ ಎಂದು ಹೇಳಲು ಅಡ್ಡಿಯಿಲ್ಲ.
ಆದರೆ ವಿದೇಶಿ ವಿವಿಗಳ ಆಗಮನದಿಂದ ಭಾರತದಲ್ಲಿರುವ ವಿವಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಇವೆ. ಅಂದರೆ ಈಗಾಗಲೇ ದೇಶದಲ್ಲಿ ಬಹಳಷ್ಟು ಉತ್ತಮ ವಿವಿಗಳು ಇವೆ. ಐಐಟಿಗಳು, ಐಐಎಂಗಳನ್ನು ಈ ಸಾಲಿನಲ್ಲಿ ಪರಿಗಣಿಸಬಹುದು. ಈಗಾಗಲೇ ಇಲ್ಲಿ ಕಲಿತಿರುವ ಅಸಂಖ್ಯಾತ ಮಂದಿ ದೊಡ್ಡ ದೊಡ್ಡ ಕಂಪೆನಿಗಳ ಸಿಇಒಗಳಾಗಿದ್ದಾರೆ. ಇಲ್ಲಿಯೂ ಉತ್ತಮ ದರ್ಜೆಯ ಶಿಕ್ಷಣವೂ ಸಿಗುತ್ತಿದೆ. ಈ ವಿವಿಗಳು ಟಾಪ್ 10ರ ಒಳಗೆ ಬಂದಿರುವ ಸಾಧ್ಯತೆಗಳು ಕಡಿಮೆ ಇವೆ. ಒಂದು ವೇಳೆ ವಿದೇಶಿ ವಿವಿಗಳು ಇಲ್ಲಿಗೇ ಬಂದು ಕಾರ್ಯಾರಂಭ ಮಾಡಿದಾಗ ಆರೋಗ್ಯಕರ ಸ್ಪರ್ಧೆ ಏರ್ಪಟ್ಟು ಕಲಿಕೆಯ ಗುಣಮಟ್ಟ ಇನ್ನಷ್ಟು ಹೆಚ್ಚಬಹುದಾಗಿದೆ. ಇದನ್ನು ಆರೋಗ್ಯಕರ ಸ್ಪರ್ಧೆಯಾಗಿ ಪರಿಗಣಿಸಿದರೆ ಭಾರತದಲ್ಲಿರುವ ವಿವಿಗಳಿಗೆ ಅನುಕೂಲಕರವಾಗಬಹುದು.
ಯುಜಿಸಿ ಬಿಡುಗಡೆ ಮಾಡಿರುವ ಕರಡಿನಲ್ಲಿ ಕೆಲವೊಂದು ಉತ್ತಮ ಅಂಶಗಳಿವೆ. ಅಂದರೆ ಟಾಪ್ 500ರ ಒಳಗೆ ಇರುವ ವಿವಿಗಳು ಮಾತ್ರ ಭಾರತದಲ್ಲಿ ಕ್ಯಾಂಪಸ್ ತೆಗೆಯಬಹುದು. ಸಿಬಂದಿ ಮತ್ತು ವಿದ್ಯಾರ್ಥಿಗಳ ಆಯ್ಕೆಗಾಗಿ ತಮ್ಮದೇ ಆದ ವಿಧಾನ ಅನುಸರಿಸಿಕೊಳ್ಳಬಹುದು ಎಂಬ ಸಂಗತಿಗಳನ್ನು ಸೇರಿಸಲಾಗಿದೆ. ಏನೇ ಆಗಲಿ ವಿದೇಶಿ ವಿವಿಗಳು ಇಲ್ಲಿಗೆ ಬಂದು ಗುಣಮಟ್ಟಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು.