Advertisement

ಹೂಡಿಕೆ ಎಂಬ ಆಟ

04:16 PM Dec 18, 2017 | |

ಹೂಡಿಕೆ ಎಂಬುದು ಜಿಮ್ನಾಸ್ಟಿಕ್ಸ್‌ ಆಟದಂತೆಯೇ. ಅದರ ಪಟ್ಟು-ಮಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಅದಕ್ಕೆ ಅಪೂರ್ವವಾದ ಏಕಾಗ್ರತೆ ಮತ್ತು ಮನೋಸ್ಥಿಮಿತತೆ ಇರಬೇಕು, ದೈಹಿಕ ಕ್ಷಮತೆಯೂ ಇರಬೇಕು. ಕೊಂಚ ಆಯ ತಪ್ಪಿದರೆ ಮುಗ್ಗರಿಸಿ ಬಿದ್ದು ಅಪಹಾಸ್ಯಕ್ಕೆ, ಮುಜುಗರಕ್ಕೆ ಈಡಾಗುವ ಎಲ್ಲ ಸಾಧ್ಯತೆಗಳೂ ಇವೆ.

Advertisement

ಜಿಮ್ನಾಸ್ಟಿಕ್ಸ್‌ ಆಟ ಸಾಮಾನ್ಯವಾದದ್ದಲ್ಲ. ದೇಹವನ್ನು ಸಾಕಷ್ಟು ಹುರಿಗೊಳಿಸಬೇಕು. ಬೇಕಾದಂತೆ ದೇಹವನ್ನು ಬಾಗಿ, ಬಳುಕಿಸಿ ಜಿಗಿದಾಡಿ ಸ್ಥಿತಿ ತಪ್ಪದೇ, ಮುಗ್ಗರಿಸಿ ಬೀಳದೇ ನಿಲ್ಲಬೇಕು. ಅದಕ್ಕೆ ಸಾಕಷ್ಟು ಪೂರ್ವತಯಾರಿ, ತಾಲೀಮು ಎಲ್ಲವೂ ಅಗತ್ಯ. ಇದನ್ನೇ ಹಣಕಾಸು ಹೂಡಿಕೆಯ ವಿಚಾರಕ್ಕೆ ಅನ್ವಯಿಸಿ ಹೇಳುವುದಾದರೆ, ಇದು ಕೂಡ ಜಿಮ್ನಾಸ್ಟಿಕ್ಸ್‌ ಆಟದಂತೆಯೇ ಬಲು ಕಠಿಣವಾದ ತಾಲೀಮು. ಅದರ ಪಟ್ಟು-ಮಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಅದಕ್ಕೆ ಅಪೂರ್ವವಾದ ಏಕಾಗ್ರತೆ ಮತ್ತು ಮನೋಸಿದ್ಧತೆ ಇರಬೇಕು, ದೈಹಿಕ ಕ್ಷಮತೆಯೂ ಇರಬೇಕು. ಕೊಂಚ ಆಯ ತಪ್ಪಿದರೂ ಮುಗ್ಗರಿಸಿ ಬಿದ್ದು ಅಪಹಾಸ್ಯಕ್ಕೆ, ಮುಜುಗರಕ್ಕೆ ಈಡಾಗುವ ಎಲ್ಲ ಸಾಧ್ಯತೆಗಳೂ ಇವೆ.

ಹಾಗಿದ್ದರೆ, ಹಣ ಹೂಡಿಕೆಯನ್ನು ಹೇಗೆ ಜಿಮ್ನಾಸ್ಟಿಕ್‌ ಆಟಕ್ಕೆ ಹೋಲಿಸಬಹುದು ಎಂಬುದನ್ನು ವಿಸ್ತರಿಸಬಹುದೇ? ಖಂಡಿತ.
ಹೂಡಿಕೆಯ ವಿಚಾರದಲ್ಲಿ ಏಕಾಗ್ರತೆ, ಮನೋಸ್ಥಿತಿ ಮತ್ತು ಕ್ಷಮತೆ ಎಷ್ಟು ಮುಖ್ಯವೋ ಪ್ರಚಲಿತ ವಿದ್ಯಮಾನಗಳ ಬಗ್ಗೆ ವ್ಯಾಪಕವಾದ ಅರಿವು ಕೂಡ ಇರಬೇಕು. ಜಿಮ್ನಾಸ್ಟಿಕ್‌ ಆಟವನ್ನು ಹಗ್ಗದ ಮೇಲಿನ ನಡಿಗೆ ಎಂದು ಇಲ್ಲಿ ಸರಳವಾಗಿ ಕರೆದಿದ್ದೇನೆ. ದೊಂಬರಾಟವನ್ನು ನೀವೆಲ್ಲ ನೋಡಿಯೇ ಇರುತ್ತೀರಿ. ರಸ್ತೆಬದಿಯಲ್ಲಿ ದೊಂಬರಾಟವಾಡುವವರು ಹಗ್ಗವೊಂದನ್ನು ಕಟ್ಟಿ, ಪುಟ್ಟ ಹುಡುಗಿಯನ್ನು ಹಗ್ಗದ ಮೇಲೆ ನಡೆಸುತ್ತಾರೆ. ಆಕೆಯ ಕೈಯಲ್ಲಿ ಕೋಲನ್ನು ಕೊಟ್ಟಿರುತ್ತಾರೆ. ಆಕೆ ಅದನ್ನು ಸಮತೋಲನದಲ್ಲಿ ಇರಿಸಿಕೊಂಡು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಮುನ್ನಡೆಯುತ್ತಾಳೆ. ಆಕೆಯ ಕೈಯಲ್ಲಿರುವ ಕೋಲು ಸ್ವಲ್ಪ ಸಮತೋಲನ ಕಳೆದುಕೊಂಡರೂ ಆಕೆ ಬೀಳುವುದು ನಿಶ್ಚಿತ. ಹೂಡಿಕೆಯೂ ಹೀಗೆಯೇ, ಅದಕ್ಕೆ ವಿಶೇಷವಾದತಾಲೀಮು ಅಗತ್ಯವಿದೆ. ಜಿಮ್ನಾಸ್ಟಿಕ್ಸ್‌ ಆಟದ ನಿಯಮಗಳನ್ನು ಹೂಡಿಕೆಗೂ ತುಲನಾತ್ಮಕವಾಗಿ ಅನ್ವಯಿಸಬಹುದು. 

ನಿಯಮ-1 ಹಂತ ಹಂತ ಗೆಲುವು ಬರಲಿ
ಸಣ್ಣ ಸಣ್ಣ ಗೋಲ್‌ ಗಳನ್ನಿಟ್ಟುಕೊಂಡು, ಅವುಗಳಲ್ಲಿ ಯಶವನ್ನು ಸಾಬೀತು ಮಾಡಿದ ನಂತರ ದೊಡ್ಡ ಎತ್ತರಕ್ಕೇರಲು ಪ್ರಯತ್ನ ಮಾಡಬೇಕು. ಜಿಮ್ನಾಸ್ಟಿಕ್‌ ಆಟದಲ್ಲಿ ಒಂದೇ ಬಾರಿಗೆ ಇಪ್ಪತ್ತೆ„ದು ಅಡಿ ಎತ್ತರಕ್ಕೆ ದೇಹವನ್ನು ಚಿಮ್ಮಿಸುವುದು ಸಾಧ್ಯವಾಗದು. ಹೈ ಜಂಪ್‌ ಆಟವಾಡುವಾಗ ಹೇಗೆ ಹಾರುವ ಎತ್ತರವನ್ನು ಅನುಕ್ರಮವಾಗಿ ಎತ್ತರಿಸುತ್ತಾ ಹೋಗುತ್ತೇವೆಯೋ ಹಾಗೆಯೇ ನಮ್ಮ ಹೂಡಿಕೆಯಲ್ಲಿಯೂ ಹಂತಹಂತವಾಗಿ ಮುನ್ನಡೆಯುವ ಕ್ರಮ ಅನುಸರಿಸಬೇಕು. ಅದು ಹೇಗೆಂದರೆ, ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (ಎಸ್‌.ಐ.ಪಿ) ಮೂಲಕ ನಮ್ಮ ಮಾಸಿಕ ಆದಾಯದಲ್ಲಿ ಉಳಿತಾಯಕ್ಕೆ ಮೀಸಲಿಡಬಹುದಾದ ಗರಿಷ್ಠ ಮೊತ್ತ ಎಷ್ಟೆಂಬುದನ್ನು ಮೊದಲೇ ನಿರ್ಧರಿಸಿಕೊಂಡು, ಅಷ್ಟನ್ನು ಮಾತ್ರ ಹೂಡಿಕೆಗೆ ವಿನಿಯೋಗಿಸಬೇಕು. ಅದು ಒಂದು ಸಾವಿರವೂ ಆಗಬಹುದು, ಐವತ್ತುಸಾವಿರವೂ ಆಗಿರಬಹುದು. ವ್ಯಕ್ತಿಯ ಆರ್ಥಿಕ ಕ್ಷಮತೆ ಅನುಸರಿಸಿ ಅದು ವ್ಯತ್ಯಯವಾಗುವಂಥಹುದು. ಇದನ್ನು ಮೊದಲು ಅರ್ಥ ಮಾಡಿಕೊಂಡಿರಬೇಕು. 

ನಿಯಮ-2 ಯಾವುದಕ್ಕೆ ಎಷ್ಟು ಹೂಡಬೇಕು ಗೊತ್ತಾ?
ಜಿಮ್ನಾಸ್ಟಿಕ್‌ ಆಟದಲ್ಲಿ ಶಕ್ತಿ, ಬೇಕಾದಂತೆ ಬಾಗುವ ಗುಣ, ಚುರುಕುತನ, ತಾಳ್ಮೆ, ಸಹಿಷ್ಣುತೆಯ ಜೊತೆಗೆ ಗಟ್ಟಿಯಾದ ನಿಯಂತ್ರಣ ಇವೆಲ್ಲದರ ಸೇರಿದಾಗ ಮಾತ್ರ ಅಂದುಕೊಂಡಂತೆ ಗುರಿ ತಲುಪುವುದು ಸಾಧ್ಯ. ಹಣ ಹೂಡಿಕೆಯ ವಿಚಾರದಲ್ಲೂ ಇದು ಬೇಕು. ಯಾವುದರಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದು ನಮ್ಮ ಸ್ಥಿಮಿತದಲ್ಲಿರಬೇಕು. ಯಾರದೋ ಮಾತು ಕೇಳಿ ಏನನ್ನೋ ಮಾಡಲು ಮುಂದಾಗಬಾರದು. ಶೇರು, ಡಿಪಾಜಿಟ್ಟು, ಚಿನ್ನ, ಭೂಮಿ, ಕಮಾಡಿಟಿ ಹೀಗೆ ಯಾವುದರಲ್ಲಿ ಎಷ್ಟು ಪ್ರಮಾಣದ ಮೊತ್ತ ಹೂಡಬೇಕು, ಅದರಿಂದ ಬರಬಹುದಾದ ಲಾಭದ ಪ್ರಮಾಣ ಎಷ್ಟಿರಬಹುದು ಎಂಬುದನ್ನು ನಾವು ಮೊದಲೇ ತೀರ್ಮಾನಿಸಿಕೊಂಡಿರಬೇಕು. ಅದರಂತೆ ನಮ್ಮ ಹೂಡಿಕೆ ಸರಿಯಾದ ಹಾದಿಯಲ್ಲಿ ಸಾಗಬೇಕು. ಯಾವ ಹೂಡಿಕೆಯಿಂದ ಯಾವಾಗ ಹೊರಬರಬೇಕು ಎಂಬುದರ ಬಗ್ಗೆ ತಿಳಿದಿರಬೇಕು. 

Advertisement

ನಿಯಮ-3 ಎಲ್ಲವೂ ನಿಮ್ಮ ಕೈಯಲ್ಲೇ ಇರಲಿ
ದೇಹ ಮತ್ತು ಚಿತ್ತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಜಿಮ್ನಾಸ್ಟಿಕ್‌ನಲ್ಲಿ ಬಹುಮುಖ್ಯ ಅಂಶ. ಸ್ಪ್ರಿಂಗ್‌ ಬೋರ್ಡಿನಿಂದ ಹೊರಕ್ಕೆ ಚಿಮ್ಮುವಾಗ ಹೇಗೆ ಎಚ್ಚರವಿರಬೇಕೋ, ಹಾಗೆಯೇ ಆ ಚಿಮ್ಮುಹಲಗೆಯಿಂದ ಹೊರಕ್ಕೆ ದೇಹವನ್ನು ಚಾಚಿ ಹಲವಾರು ಬಾರಿ ಪಲ್ಟಿ ಹೊಡೆದು ಮತ್ತೆ ಮುಗ್ಗರಿಸದೇ ನೆಲದ ಮೇಲೆ ಗಟ್ಟಿಯಾಗಿ ಕಾಲೂರಿ ನಿಲ್ಲಬೇಕು. ಇದೇ ಚಿತ್ತನಿಷ್ಠೆ ಮತ್ತು ಏಕಾಗ್ರತೆ ಹೂಡಿಕೆ ಮಾಡುವಾಗ ಇರಬೇಕು. ನಾವು ನಮ್ಮ ಕಷ್ಟಾರ್ಜಿತ ಮೊತ್ತದ ನಿಯೋಜನೆಯಿಂದ ಮಾಡುವ ಹೂಡಿಕೆಯ ಕುರಿತಾದ
ಆಮೂಲಾಗ್ರ ಮಾಹಿತಿ ನಮ್ಮ ಬಳಿ ಇರಬೇಕು. ಯಾವ ರೀತಿ ಹೆಜ್ಜೆ ಮುಂದಿಟ್ಟರೆ ಪರಿಣಾಮ ಏನಾದೀತು ಎಂಬುದರ ಸ್ಪಷ್ಟ ಮುನ್ನರಿವು ನಮಗೆ ಇರಬೇಕು. ಈ ರೀತಿಯಾಗಿ ಗಟ್ಟಿಯಾದ ಆರ್ಥಿಕ ನಿಯಂತ್ರಣ ನಮ್ಮಲ್ಲಿದ್ದರೆ ನಾವು ಮುಗ್ಗರಿಸಲಾರೆವು.

ನಿಯಮ-4 ಹೂಡಿಕೆ ಏತಕ್ಕೆ ಅನ್ನೋದು ತಿಳಿಯಿರಿ
ಆಟದಲ್ಲಿ ನಮ್ಮ ಅಂತಿಮ ಗುರಿ ಏನು ಎಂಬುದರ ಸ್ಪಷ್ಟ ಕಲ್ಪನೆ ಇದ್ದವರು, ಅದನ್ನು ನಿಯಮಿತ ಕಾಲಮಿತಿಯಲ್ಲಿ ತಲುಪುವುದು ಸಾಧ್ಯ. 400 ಮೀಟರ್‌ ರೇಸಿನಲ್ಲಿ ಓಡುವವರು ತಮ್ಮ ಓಟದ ಗತಿಯನ್ನು ಮೊದಲೇ ನಿರ್ಧರಿಸಿಕೊಂಡು ಓಡಬೇಕು. ಮೊದಲಿಗೇ ಅತ್ಯಂತ ವೇಗವಾಗಿ ಓಟ ಶುರು ಮಾಡಿದರೆ ಕೊನೆಕೊನೆಗೆ ಸುಸ್ತಾಗಲೂ ಬಹುದು. ಹಾಗೆಯೇ, ಹಣ ಹೂಡುವವರೂ ತಮ್ಮ ಅಂತಿಮ ಗುರಿ ಏನು, ಈ ಹೂಡಿಕೆ ಯಾವ ಉದ್ದೇಶಕ್ಕೆ ಎಂಬುದರ ಸ್ಪಷ್ಟ ಕಲ್ಪನೆಯನ್ನು ಮೊದಲೇ ಮನಸ್ಸಿನಲ್ಲಿ ಮಾಡಿಕೊಂಡಿರಬೇಕು. ಮಗಳ 
ಮದುವೆಗೋ, ಮಕ್ಕಳ ವಿದ್ಯಾಭ್ಯಾಸಕ್ಕೋ, ಮನೆ ಕೊಳ್ಳುವುದಕ್ಕೋ, ಕಾರು ಕೊಳ್ಳುವುದಕ್ಕೋ ಹೀಗೆ ಯಾವುದಕ್ಕೆ ಈ ಹೂಡಿಕೆ ಎಂಬ ಬಗೆಗಿನ ನೀಲನಕಾಶೆ ಮನಸ್ಸಿನಲ್ಲಿ ಭದ್ರವಾಗಿರಬೇಕು. ಅದು ಸಾರ್ಥಕವಾಗಿ ಈಡೇರುವುದು ಆಗ ಸಾಧ್ಯವಾಗುತ್ತದೆ.

ನಿಯಮ-5 ನಿಮ್ಮ ಸ್ಥಿತಿ ನೋಡಿಕೊಳ್ಳಿ
ಎಲ್ಲ ಆಟಗಳಲ್ಲೂ ಸ್ಪರ್ಧಿ ತನ್ನ ನಿರ್ವಹಣಾ ಕ್ಷಮತೆಯನ್ನು ಆಗಿಂದಾಗೆ ಒರೆಗೆ ಹಚ್ಚಿ ಪರೀಕ್ಷಿಸಿ, ಅರಕೊರೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯುತ್ತಿರಬೇಕು. ಆಗ ಗೆಲುವು ಸುಲಭವಾಗುತ್ತದೆ. ಇದು ಉತ್ತಮ ಸ್ಕೋರು ಪಡೆಯುವುದಕ್ಕೆ ಇರುವ ಕೀಲಿಕೈ. ಹಾಗೆಯೇ, ಹೂಡಿಕೆಯ ವಿಚಾರದಲ್ಲು. ಹೂಡಿಕೆದಾರ ತನ್ನ ಹೂಡಿಕೆಯ ಪ್ರಸ್ತುತ ಸ್ಥಿತಿ ಹೇಗಿದೆ, ಅದು ಆರ್ಥಿಕ ನೆಲೆಗಟ್ಟಿನಲ್ಲಿ ಕುಗ್ಗಿದೆಯೇ, ಗ್ಗುತ್ತಿದೆಯೇ? ಉತ್ತಮ ಇಳುವರಿ ಕೊಡುವಂತಿದೆಯೇ ಎಂಬುದರ ಟೆಸ್ಟ್‌ ಕೂಡ ಮಾಡುತ್ತಿರಬೇಕು. ಮಾರುಕಟ್ಟೆ ಎಂದ ಮೇಲೆ
ಏಳುಬೀಳುಗಳು ಸಹಜ. ಆದರೆ ಅವೆಲ್ಲವನ್ನೂ ಮೆಟ್ಟಿನಿಲ್ಲುವ ಮತ್ತು ಗಟ್ಟಿಯಾಗಿ ಮುನ್ನಡೆಯುವ ಕ್ಷಮತೆ ನಿಯಮ-1 ಮತ್ತು 2ರ ಪಾಲನೆಯಿಂದ ಸಾಧ್ಯ. ಆದರೆ, ನಿಯಮ-3 ರ ಹೇಳುವಂತೆ ಆಗಿಂದಾಗ್ಗೆ ಅದನ್ನು ಪರಿಶೀಲನೆಗೆ ಒಳಪಡಿಸುವುದರಿಂದ ಇನ್ನಷ್ಟು ಉತ್ತಮ ಸಾಧನೆಯನ್ನು ನಮ್ಮದಾಗಿಸಿಕೊಳ್ಳಬಹುದು.  

ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next