Advertisement

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

02:09 PM Nov 05, 2024 | Team Udayavani |

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿದ ಸೈಬರ್‌ ವಂಚಕರು ಮಹಿಳೆ ಹಾಗೂ ನಿವೃತ್ತ ಉದ್ಯೋಗಿಗೆ 93 ಲಕ್ಷ ರೂ. ವಂಚಿಸಿರುವ ಕೇಸು ಈ ಸಂಬಂಧ ದಕ್ಷಿಣ ಮತ್ತು ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

ನಗರದ ಬನಶಂಕರಿಯ ಮಹಿಳೆಯೊಬ್ಬರಿಗೆ 74 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ದಕ್ಷಿಣ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ದೂರುದಾರ ಮಹಿಳೆ ಹಣ ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಪ್ರಚಾರದ ವಿಡಿಯೋ ನೋಡಿದ್ದಾರೆ. ಬಳಿಕ ಅದರಲ್ಲಿನ ಲಿಂಕ್‌ ಕ್ಲಿಕ್‌ ಮಾಡಿದ್ದು, ಆ ಬಳಿಕ ಅಲ್ಲಿ ಅಪ್ಲಿಕೇಷನ್‌ಲ್ಲಿ ತಮ್ಮ ಸ್ವ-ವಿವರಗಳನ್ನು ದಾಖಲಿಸಿದ್ದಾರೆ. ಕೆಲ ನಿಮಿಷದ ಬಳಿಕ ಆಕೆಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದು ಆತ ಕಂಪನಿಯ ಏಜೆಂಟ್‌ ಎಂದು ಹೇಳಿಕೊಂಡು ಹೆಚ್ಚಿನ ಆದಾಯಕ್ಕಾಗಿ ಹಣ ಹೂಡಿಕೆ ಮಾಡಲು ಮನವೊಲಿಸಿದ್ದಾನೆ. ಆತನ ಮಾತಿಗೆ ಮರುಳಾಗಿ ಆರಂಭದಲ್ಲಿ 1.4 ಲಕ್ಷ ರೂ., 2ನೇ ಬಾರಿಗೆ 6.7 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಯಾವುದೇ ಲಾಭಾಂಶ ವಾಪಸ್‌ ಬಂದಿಲ್ಲ. ಹೀಗಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ.

ಇನ್ನು ಈ ಮಹಿಳೆ ಇದೇ ರೀತಿ ಸಾಮಾಜಿಕ ಜಾಲತಾಣದ ಮತ್ತೂಂದು ವೇದಿಕೆಯಲ್ಲಿ 67 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

19 ಲಕ್ಷ ರೂ. ವಂಚನೆ: ಇನ್ನೊಂದು ಪ್ರಕರಣದಲ್ಲಿ ಖಾಸಗಿ ಕಂಪನಿಯ ನಿವೃತ್ತ ಉದ್ಯೋಗಿಯೊಬ್ಬರು ಷೇರು ಮಾರುಕಟ್ಟೆ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ನಂಬಿ 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ದೂರುದಾರ ಮೊಬೈಲ್‌ ನಂಬರ್‌ ಅನ್ನು ಶೇರು ಮಾರುಕಟ್ಟೆ ವಹಿವಾಟಿನ ಕುರಿತ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ. ಅದರಲ್ಲಿ ಆಕರ್ಷಕ ಲಾಭಾಂಶದ ಆಸೆಗೊಳಗಾಗಿ, ವೆಬ್‌ಸೈಟ್‌ ಸಂಪರ್ಕಿಸಿ, ವಂಚಕರು ಸೂಚಿಸಿದ ವಿವಿಧ ಖಾತೆಗಳಿಗೆ 19 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಆದರೆ, ಹಣದ ಲಾಭಾಂಶವಾಗಲಿ, ಅಸಲು ಹಣವಾಗಲಿ ವಾಪಸ್‌ ಬಂದಿಲ್ಲ. ಹೀಗಾಗಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೈಬರ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next