Advertisement

ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಪಣ ತೊಡಿ: ಪೋಷಕರಿಗೆ ಮುಖ್ಯಮಂತ್ರಿ ಸಲಹೆ

11:14 PM Nov 01, 2023 | Team Udayavani |

ಬೆಂಗಳೂರು: ಕನ್ನಡವು ಮಾತನಾಡುವ ಭಾಷೆಯ ಜತೆಗೆ ಉದ್ಯೋಗ ನೀಡುವ ಭಾಷೆಯೂ ಆಗಬೇಕು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪೋಷಕರು ಆಂಗ್ಲ ಮಾಧ್ಯಮ ವ್ಯಾಮೋಹ ಕಡಿಮೆ ಮಾಡಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಣ ತೊಡಬೇಕು. ಕನಿಷ್ಠ ಪಕ್ಷ 10ನೇ ತರಗತಿವರೆಗೆ ಕನ್ನಡ ಮಾಧ್ಯಮದ ಶಿಕ್ಷಣ ಮಕ್ಕಳಿಗೆ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

Advertisement

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಿಸಿದರು.

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್‌ ಕಾನ್ವೆಂಟ್‌ ವ್ಯಾಮೋಹ ಬೆಳೆಸಿಕೊಂಡಿರುವುದು ಸರಿಯಲ್ಲ. ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು ಎಂದು ಹೇಳಿದರು.

ಕೇಂದ್ರದ ಮಾನ್ಯತೆ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ಕನ್ನಡ ನಾಡಿನ ಅಸ್ಮಿತೆ ಬಿಂಬಿಸುವ ನಮ್ಮದೇ ಆದ ಕರ್ನಾಟಕದ ಧ್ವಜಕ್ಕೆ ಕೇಂದ್ರ ಸರಕಾರದ ಅಧಿಕೃತ ಮಾನ್ಯತೆ ದೊರೆಯಬೇಕು ಎಂದು ಹೇಳಿದರು.

ಬೆಂಕಿ ಹಚ್ಚುವುದು ಭಾಷಾಭಿಮಾನ ಅಲ್ಲ; ಡಿಕೆಶಿ
ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿ, ಬಸ್‌ ಮತ್ತು ರೈಲಿಗೆ ಬೆಂಕಿ ಹಚ್ಚುವುದು ಭಾಷೆ ಅಭಿಮಾನವಲ್ಲ ಎಂದು ಹೇಳುವ ಮೂಲಕ ಮರಾಠಿ ಮೀಸ ಲಾತಿ ಹೋರಾಟದಲ್ಲಿ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಬೆಂಕಿ ಹಚ್ಚಿರುವುದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದರು. ಕನ್ನಡದ ಅಭಿಮಾನ
ನ. 1ಕ್ಕಷ್ಟೇ ಸೀಮಿತವಾಗದೆ, ಕನ್ನಡ ಹೃದಯದ ಭಾಷೆಯಾಗಲಿ ಎಂದರು.

Advertisement

8 ಸಾವಿರ ಶಾಲಾ ಕೊಠಡಿ ನಿರ್ಮಾಣ: ಮಧು

ರಾಜ್ಯದ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮತ್ತು 8,311 ಶಾಲಾ ಕೊಠಡಿಗಳ ನಿರ್ಮಾಣ ಮಾಡಲು ಸರಕಾರ ಕ್ರಮ ವಹಿಸುತ್ತಿದೆ. ರಾಜ್ಯದಲ್ಲಿ 2,000 ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದರು. ಸಸ್ಯಶ್ಯಾಮಲ ಕಾರ್ಯಕ್ರಮದಡಿ 50 ಲಕ್ಷ ಸಸಿಗಳನ್ನು ಶಾಲೆಗಳ ಆವರಣದಲ್ಲಿ ನೆಡಲಾಗುತ್ತದೆ. ಎಸೆಸೆಲ್ಸಿ ಹಾಗೂ ಪಿಯುಸಿ ಮಕ್ಕಳ ಕ್ಷಮತೆ ಹೆಚ್ಚಿಸಲು ಮುಖ್ಯ ಪರೀಕ್ಷೆಯ ಮುನ್ನ ಮೂರು ಬಾರಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ ಸಿದ್ಧಗೊಳಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಜತೆಗೆ ಉದಾತ್ತ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.

ಅತ್ಯುತ್ತಮ ಶಾಲಾ ಪ್ರಶಸ್ತಿ ಪ್ರದಾನ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಂಠೀರವ ಹೊರಾಂಗಣ ಕ್ರೀಡಾಂಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಅತ್ಯುತಮ ಶಾಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ತಮ ಸರಕಾರಿ ಶಾಲೆಗಳಾದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ನಿಂಬಳಗೆರೆ ಗ್ರಾಮದ ಬಿಕೆವಿ ಸರಕಾರಿ ಪ್ರೌಢಶಾಲೆ ಹಾಗೂ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಲೆನಾಡ ಗಾಂಧಿ ಹಾಗೂ ಮಾಜಿ ಶಿಕ್ಷಣ ಸಚಿವರಾದ ದಿ. ಎಚ್‌.ಜಿ. ಗೋವಿಂದೇಗೌಡ ಸ್ಮರಣಾರ್ಥ ಅತ್ಯುತ್ತಮ ಶಾಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next