ಬೆಂಗಳೂರು: ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅರಣ್ಯ ಇಲಾಖೆಯ ಸಹಾಯವಾಣಿಗೆ ನೂರಾರು ಕರೆಗಳು ಬರಲಾರಂಭಿಸಿವೆ.
ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಬಂಧನಕ್ಕೊಳಗಾದ ಬೆನ್ನಲ್ಲೇ ಹುಲಿ ಉಗುರು ಧರಿಸಿ ಫೊಸ್ ಕೊಟ್ಟ ಹಲವು ಸೆಲೆಬ್ರೆಟಿಗಳೂ ಇಕ್ಕಟ್ಟಿದೆ ಸಿಲುಕುವಂತಾಗಿದೆ. ಈ ಸುದ್ದಿ ಬಿರುಗಾಳಿಯಂತೆ ಎಲ್ಲೆಡೆ ಸದ್ದು ಮಾಡಿದ ನಂತರ ರಾಜ್ಯದ ಮೂಲೆ ಮೂಲೆಗಳಿಂದ ಹುಲಿ ಉಗುರು ಧರಿಸಿದವರ ವಿರುದ್ಧ ಅರಣ್ಯ ಇಲಾಖೆಯ ಸಹಾಯವಾಣಿ 1926ಗೆ ಸಾರ್ವಜನಿಕರಿಂದ ದೂರುಗಳ ಸುರಿಮಳೆಯೇ ಬರುತ್ತಿವೆ. ಇದುವರೆಗೆ ಕೇವಲ ಮರ ಕಳ್ಳ ಸಾಗಣೆ, ಕಾಡ್ಗಿಚ್ಚಿನಂತಹ ಅವಘಡ ಸಂಭವಿಸಿದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಸೀಮಿತವಾಗಿದ್ದ ಸಹಾಯವಾಣಿಯು ಕಳೆದೊಂದು ವಾರದಿಂದ ಫುಲ್ ಆ್ಯಕ್ಟಿವ್ ಆಗಿದೆ.
ಕರೆ ಸ್ವೀಕರಿಸಿ ದೂರು ಪಡೆದು ಅರಣ್ಯ ಅಧಿಕಾರಿಗಳ ಗಮನಕ್ಕೆ ತರುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ಕೆಲಸವಾಗಿದೆ.
ಪ್ರತಿನಿತ್ಯ 10ಕ್ಕೂ ಹೆಚ್ಚು ಕರೆಗಳು: ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಹಾಸನ, ಮಲೆನಾಡು ಭಾಗಗಳು ಸೇರಿ ಕರ್ನಾಟಕದ ಹಲವು ಪ್ರದೇಶಗಳಿಂದ ಸಾರ್ವಜನಿಕರು ಅರಣ್ಯ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ನಮ್ಮ ಊರಿನಲ್ಲಿ ಇಂತಹ ವ್ಯಕ್ತಿಯ ಬಳಿ ಹುಲಿ ಉಗುರಿದೆ, ಜಿಂಕೆ ಚರ್ಮವಿದೆ, ವನ್ಯ ಜೀವಿಗಳ ಕೋಡುಗಳಿವೆ ಎಂಬಿತ್ಯಾದಿ ಮಾಹಿತಿ ನೀಡುತ್ತಿದ್ದಾರೆ. ಬಹುತೇಕ ದೂರುದಾರರು ತಮ್ಮ ಮಾಹಿತಿಯನ್ನು ಗೌಪ್ಯವಾಗಿಡುವಂತೆ ಸೂಚಿಸುತ್ತಾರೆ.
ಈ ಪೈಕಿ ಕೆಲವೊಂದು ಸುಳ್ಳು ದೂರುಗಳೂ ಬರುತ್ತಿವೆ. ಅರಣ್ಯ ಅಧಿಕಾರಿಗಳು ಗಂಭೀರವಾಗಿರುವ ದೂರುಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ವಾರಕ್ಕೆ ಒಂದೆರಡು ಕರೆಗಳು ಬರುತ್ತಿದ್ದವು. ಇದೀಗ ಪ್ರತಿನಿತ್ಯ 10 ರಿಂದ 15 ಕರೆಗಳು ಬರುತ್ತಿವೆ. ಇದುವರೆಗೆ ಅಂದಾಜು 100ಕ್ಕೂ ಹೆಚ್ಚಿನ ದೂರುಗಳು ಬಂದಿರಬಹುದು. ಶನಿವಾರದಿಂದ ಇದರ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ ಎಂದು ಅರಣ್ಯ ಇಲಾಖೆ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.