Advertisement

ಪ್ರಜಾಪ್ರಭುತ್ವ ಪರಿಚಯಿಸಿದ್ದುಲಿಂಗಾಯತ

12:52 PM Oct 07, 2017 | |

ಬೀದರ: ವಿಶ್ವಕ್ಕೆ ಪ್ರಜಾಪ್ರಭುತ್ವ ಪರಿಚಯಿಸಿದ ಹೆಗ್ಗಳಿಕೆ ಲಿಂಗಾಯತ ಧರ್ಮದ್ದು. ಸಮಾಜದಲ್ಲಿನ ಮೇಲು-ಕೀಳು, ಮೂಢನಂಬಿಕೆ-ಮೂಢ ಆಚಾರಗಳನ್ನು ಅಲ್ಲಗಳೆದು ಸರ್ವಸಮಾನತೆ ಸಾರಿದ ಬಸವಣ್ಣ 900 ವರ್ಷಗಳ ಹಿಂದೆಯೇ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ ಎಂದು ಕಲಬುರಗಿಯ ಪಿಡಿಎ ಕಾಲೇಜಿನ ಉಪನ್ಯಾಸಕ ಸಂಜಯ ಮಾಕಾಲ ಹೇಳಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಜರುಗಿದ ಶರಣ ಸಂಗಮ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಲಿಂಗಾಯತ ಬೌದ್ಧ, ಜೈನ, ಸಿಖ್‌ ಧರ್ಮಗಳಂತೆ ಸ್ವತಂತ್ರ ಧರ್ಮವಾಗಿದೆ. ಇದು ಅನೇಕ ದಾಖಲೆಗಳಿಂದ ಸಿದ್ಧವಾಗಿವೆ. ಹೈ.ಕ. ನಿಜಾಂ ಸರ್ಕಾರದ ದಾಖಲೆಗಳಲ್ಲಿ ಲಿಂಗಾಯತ ಧರ್ಮ ಮತ್ತು ಹಿಂದೂ ಧರ್ಮ ಬೇರೆ ಬೇರೆಯಾಗಿ ಉಲ್ಲೇಖವಾಗಿವೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮುಂಬೈ ಕರ್ನಾಟಕ ಮತ್ತು ಮದ್ರಾಸ ಪ್ರಾಂತ್ಯಗಳ ಸರ್ಕಾರಿ ದಾಖಲೆಗಳಲ್ಲಿ ಮತ್ತು ಗೆಜೆಟಿಯರ್‌ಗಳಲ್ಲಿ ಲಿಂಗಾಯತವೆಂದೇ ನಮೂದಾಗಿದೆ ಎಂದರು.

ಭಾರತದಲ್ಲಿ 1870ರಿಂದ ಜನಗಣತಿ ಆರಂಭವಾದಾಗಿನಿಂದ ಸ್ವತಂತ್ರ ಭಾರತದ 1950ರ ವರೆಗೆ ಜನಗಣತಿ, ಶಾಲಾ ದಾಖಲಾತಿ, ತಹಶೀಲ್ದಾರ ದಾಖಲಾತಿ, ಗೆಜೆಟ್‌ಗಳಲ್ಲಿ ಲಿಂಗಾಯತ ಎಂದು ನಮೂದಿಸಿದ್ದನ್ನು ದಾಖಲೆಗಳು ದೃಢಪಡಿಸುತ್ತವೆ. ಎಲ್ಲಿಯೂ ವೀರಶೈವ ಪದ ಬಳಕೆ ಕಾಣಸಿಗುವುದಿಲ್ಲ. 1955ರ ನಂತರ ವೀರಶೈವ ಪದ ಸೇರಿಕೊಂಡಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಸುಪ್ರೀಂ ಕೋರ್ಟ್‌ ತೀರ್ಪುಗಳಲ್ಲಿ ಸಹ ಲಿಂಗಾಯತ ಒಂದು ಧರ್ಮ ಎಂದು ಅನೇಕ ಸಲ ಹೇಳಿದೆ ಎಂದರು.

ಲಿಂಗಾಯತ ಧರ್ಮದ ಆಚರಣೆಗಳು ಹಿಂದೂ ಆಚರಣೆಗಳಿಗಿಂತ ತುಂಬಾ ಭಿನ್ನವಾಗಿವೆ. ಲಿಂಗಾಯತ ಧರ್ಮದ ಸ್ಥಾಪಕರು ಬಸವಣ್ಣ. ಲಿಂಗಾಯತ ಧರ್ಮ ಸಂಹಿತೆ ವಚನಗಳು. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ಲಿಂಗಾಯತರ ಆಚರಣೆಗಳಾಗಿವೆ. ಹೀಗಾಗಿ ಲಿಂಗಾಯತ ಸರ್ವತಂತ್ರ ಸ್ವತಂತ್ರ ಧರ್ಮ. ವೀರಶೈವ ಲಿಂಗಾಯತದ ಒಂದು ಶಾಖೆ ಮಾತ್ರ ಎಂದು ದಾಖಲೆಗಳ ಸಮೇತ ಅವರು ಪ್ರತಿಪಾದಿಸಿದರು.

ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಾಗಿರುವ ಲಿಂಗಾಯತರಿಗೆ ನ್ಯಾಯವಾಗಿ ಅಲ್ಪಸಂಖ್ಯಾತ ಸ್ಥಾನಮಾನ ದೊರೆಯಬೇಕೆಂದು ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸರ್ಕಾರಗಳು ಕೂಡಲೇ ಗಮನ ಹರಿಸಿ ಲಿಂಗಾಯತರಿಗೆ ನ್ಯಾಯ ಒದಗಿಸಬೇಕು ಎಂದರು.

Advertisement

ಎಇಇ ಪ್ರಕಾಶ ಮಠಪತಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಗಂಗಾಂಬಿಕೆ ಅಕ್ಕ ನೇತೃತ್ವ ವಹಿಸಿ ಮಾತನಾಡಿದರು. ಮಾಣಿಕಪ್ಪ ಗೋರನಾಳೆ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ಜಯರಾಜ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಅಶೋಕ ವಂಗೆಪಲ್ಲಿ, ವೀರಶೆಟ್ಟಿ ರಾಠೊಡ ಮತ್ತು ಬಾಬುರಾವ್‌ ರಾಠೊಡ ಉಪಸ್ಥಿತರಿದ್ದರು. ಕಾಶಿನಾಥ ಜನವಾಡಕರ ಸ್ವಾಗತಿಸಿದರು. ರಮೇಶ ಮಠಪತಿ ನಿರೂಪಿಸಿದರು.

ಇದೇ ವೇಳೆ ಮೈಸೂರು ದಸರಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ನ ಕಲಾವಿದರಾದ ರೇಖಾ ಸೌದಿ, ಗುರುದೇವ, ಅಬೀದ ಅಲಿಖಾನ್‌ ಹಾಗೂ ಸಂಸ್ಥೆಯ ಅಧ್ಯಕ್ಷ ಅನೀಲ ದೇಶಮುಖ ಅವರನ್ನು ಸನ್ಮಾನಿಸಲಾಯಿತು. ನಂತರ ಬೆಳಗು ತಂಡದ ಸದಸ್ಯರು ವಚನ ರಸಮಂಜರಿ ನಡೆಸಿಕೊಟ್ಟರು. ದತ್ತು ಮಹಾರಾಜ ಹಾರ್ಮೊನಿಯಂ ಮತ್ತು ರಮೇಶ ಕೋಳಾರ ತಬಲಾ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next