Advertisement

ಕುತೂಹಲ ಕೆರಳಿಸಿದ ಬಿ.ಎಲ್‌. ಸಂತೋಷ್‌ ಮಂಗಳೂರು ಭೇಟಿ

01:48 AM Nov 25, 2020 | mahesh |

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ವಿಸ್ತರಣೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿರಬೇಕಾದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮಂಗಳವಾರ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕೆಲವು ನಾಯಕರೊಂದಿಗೆ ಚರ್ಚಿಸಿ ಹೋಗಿದ್ದಾರೆ.

Advertisement

ಪಕ್ಷದ ನೆಲೆಯಲ್ಲಿ ಇದೊಂದು ಅನೌಪಚಾರಿಕ ಭೇಟಿ ಎಂದು ಮೂಲಗಳು ತಿಳಿಸಿವೆ. ಸಂತೋಷ್‌ ಅವರು ಉಡುಪಿಗೆ ಆಗಮಿಸಿದ್ದು, ಅಲ್ಲಿಂದ ಬೆಂಗಳೂರಿಗೆ ಮರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಪಕ್ಷದ ಮಂಗಳೂರು ಕಚೇರಿಗೆ ಭೇಟಿ ನೀಡಿದರು ಎನ್ನಲಾಗಿದೆ.

ಆದರೆ ರಾಜ್ಯದಲ್ಲಿ ಶೀಘ್ರದಲ್ಲೇ ಎದುರಾಗ ಬಹುದಾದ ಗ್ರಾ.ಪಂ. ಚುನಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪ್ರಸಕ್ತ ವಿದ್ಯಮಾನಗಳ ಹಿನ್ನಲೆಯಲ್ಲಿ ಸಂತೋಷ್‌ ಅವರ ಜಿಲ್ಲಾ ಕಚೇರಿ ಭೇಟಿ ಒಂದಷ್ಟು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.

ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಮೂಡಬಿದಿರೆ, ಶಾಸಕ ವೇದವ್ಯಾಸ ಕಾಮತ್‌, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್‌ ದಿವಾಕರ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು, ಮಾಧ್ಯಮ ವಕ್ತಾರ ಜಗದೀಶ ಶೇಣವ ಅವರು ಸಂತೋಷ್‌ ಅವರನ್ನು ಸ್ವಾಗತಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಕೂಡ ಕಚೇರಿಗೆ ಆಗಮಿಸಿ ಸಂತೋಷ್‌ ಅವರನ್ನು ಭೇಟಿ ಮಾಡಿದರು.

ಮಹತ್ವದ ಸಲಹೆ-ಸೂಚನೆ?
ಸಂಜೆ ಸುಮಾರು 6.15ರ ವೇಳೆಗೆ ಆಗಮಿಸಿದ್ದ ಅವರು ಸುಮಾರು 45 ನಿಮಿಷಗಳ ಕಾಲ ಬಿಜೆಪಿ ಜಿಲ್ಲಾ ಅಧ್ಯಕ್ಷರು, ವಿಭಾಗ ಪ್ರಭಾರಿ ಸೇರಿದಂತೆ ಜಿಲ್ಲಾ ಪ್ರಮುಖರ ಜತೆ ಮಾತುಕತೆ ನಡೆಸಿದರು. ಈ ವೇಳೆ ಅವರು ಪಕ್ಷ ಸಂಘಟನೆಯ ಬಗ್ಗೆ ಕೆಲವು ಮಹತ್ವದ ಸಲಹೆ-ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next